ಜೀವನ ಕಲೆಗಳು : ಅಂಕಣ – 12
ಜೀವನಾವಶ್ಯಕ ಕಲೆಗಳು 3 – ಸಮರ್ಪಕ ಸಂವಹನ ಕಲೆ –1
ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ, ಜೀವನಾವಶ್ಯಕ ಕಲೆಗಳ ಕೇಂದ್ರಬಿಂದು “ಸಮರ್ಪಕ ಸಂವಹನ ಕಲೆ”. ಜೀವವನ್ನೇ ಉಳಿಸಬಲ್ಲ ಶಕ್ತಿ ಹೊಂದಿರುವಂತಹ ಕಲೆ. ಇದನ್ನು ಕಲೆ ಎಂದೂ ಪರಿಗಣಿಸಲಾಗಿದ್ದರೂ ಸಹ ಇದರ ಹಿಂದೆ ವೈಜಾÕನಿಕ ಸಿದ್ಧಾಂತವೂ ಇದೆ. ಮಿಕ್ಕ ಜೀವನಾವಶ್ಯಕ ಕಲೆಗಳಂತೆ ಇದೂ ಸಹ ದೈವದತ್ತವಾಗಿ ಹುಟ್ಟಿನಿಂದ ಬಂದ ಕಲೆ, ಆದರೆ ಅದನ್ನು ಸರಿಯಾಗಿ ರೂಢಿಸಿಕೊಳ್ಳದ ಕಾರಣ ಇದು ಸಮಸ್ಯೆಗೆ ಕಾರಣವಾಗುತ್ತದೆ.
ಸಮರ್ಪಕ ಸಂವಹನ ಕಲೆ ಎಂದರೆ “ಸರಿಯಾದ ವ್ಯಕ್ತಿಗೆ, ಸರಿಯಾದ ಮಾಹಿತಿಯನ್ನು, ಸರಿಯಾದ ಸಮಯಕ್ಕೆ ಮತ್ತು ಸರಿಯಾದ ರೀತಿಯಲ್ಲಿ ತಲುಪಿಸುವುದು”. ಮೇಲಿನ ವಾಕ್ಯದಲ್ಲಿ “ಸರಿಯಾದ” ಎಂಬ ಪದ ನಾಲ್ಕು ಬಾರಿ ಬಂದಿದೆ. ಆದ್ದರಿಂದ ಅದರ ಮಹತ್ವ ಏನು ಎಂಬುದು ಸ್ಪಷ್ಟವಾಗಿರಬಹುದು. ಮಿಕ್ಕ ನಾಲ್ಕು ಪದಗಳು – ವ್ಯಕ್ತಿ, ಮಾಹಿತಿ, ಸಮಯ, ರೀತಿ – ಇವುಗಳಲ್ಲಿ ಯಾವುದೇ ಏರು-ಪೇರಾದರೂ ನಮ್ಮ ಸಂವಹನ ಸಮರ್ಪಕವಾಗಿರುವುದಿಲ್ಲ. ಸಂವಹನ ಎಂಬುದು ಎರಡು ದಿಕ್ಕಿನ ರಸ್ತೆಯಾಗಿದ್ದು, ಮಾಹಿತಿ ಎರಡೂ ದಿಕ್ಕಿನಲ್ಲಿ ಅದೇ ವೇಗದಲ್ಲಿ ಚಲಿಸಬೇಕು. ಹಾಗಿದ್ದರೆ ಮಾತ್ರ ಸಂವಹನ ಸಮರ್ಪಕವಾಗಿರುತ್ತದೆ. ಆಗ ನಮಗೆ ಇನ್ನೊಬ್ಬರನ್ನು ಅಥವಾ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿ, ಅಪೇಕ್ಷಿಸಿದ ಪರಿಣಾಮವನ್ನು ತರುತ್ತದೆ.
ಸಾಮಾನ್ಯ ಸಂವಹನ ಕ್ರಿಯೆಯಲ್ಲಿ ನಾವು ಮೂರು ಮಾಧ್ಯಮಗಳ ಬಳಕೆ ಮಾಡುತ್ತೇವೆ. ಮೊದಲನೆಯದು ದೃಶ್ಯ-ಸಂಜ್ಞಾಮಾಧ್ಯಮ. ಅಂದರೆ ಕಣ್ಣಿಗೆ ಕಾಣುವಂತಹ ಕೈಸಂಜ್ಞೆ, ಕಣ್ಣುಸಂಜ್ಞೆ, ಇತ್ಯಾದಿ ಸದ್ದುಮಾಡದ ಸಂಕೇತಗಳು (ನಾನ್-ವರ್ಬಲ್ ಕಮ್ಯುನಿಕೇಷನ್ ಅಥವಾ ಬಾಡಿ ಲ್ಯಾಂಗ್ವೇಜ್). ಇದು ಸುಮಾರು 65% ಸಮಯ ಬಳಕೆಯಾಗುತ್ತದೆ. ಹೊಸ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್ ಮತ್ತು ಫೇಸ್ಬುಕ್ ಇವುಗಳಲ್ಲೂ ಸಹ ನಾವು ಇಂತಹ, ಎಮೋಟಿಕಾನ್ ಎಂದು ಕರೆಯಲ್ಪಡುವ ಸಂಜ್ಞೆಗಳ ಬಳಕೆಯನ್ನು ಕಾಣುತ್ತೇವೆ.

ಎರಡನೆಯದು ಕಿವಿಗೆ ಕೇಳಿಸುವಂತಹ ಧ್ವನಿಗಳ ಮಾಧ್ಯಮ, ಮುಖ್ಯವಾಗಿ ಧ್ವನಿಯ ಏರಿಳಿತ. ಸುಮಾರು 28% ಸಮಯ ಬಳಕೆಯಾಗುತ್ತದೆ. ಇವು ಸಂಪೂರ್ಣವಾಗಿ ಭಾಷಾಧಾರಿತವಾಗಿರುವುದಿಲ್ಲ.
ಮೂರನೆಯದು ಭಾಷಾಧಾರಿತ ಸಂಭಾಷಣೆ. ಕೇವಲ 7% ಬಳಕೆಯಾಗುವ ಮಾಧ್ಯಮ ಅಂದರೆ ಆಶ್ಚರ್ಯವಲ್ಲವೇ?
ನಾವು ಯಾವುದೇ ಒಂದು ಮಾಧ್ಯಮವನ್ನು ಪ್ರತ್ಯೇಕವಾಗಿ ಬಳಸದೆ, ಅವಶ್ಯಕತೆಗೆ ತಕ್ಕಂತೆ, ಏಕಕಾಲಕ್ಕೆ, ಲಭ್ಯವಿರುವ ಮಾಧ್ಯಮಗಳನ್ನು ಒಟ್ಟುಗೂಡಿಸಿ ಉಪಯೋಗಿಸುತ್ತೇವೆ.
ಸಂವಹನ ಪ್ರಕ್ರಿಯೆಯಲ್ಲಿ ಒಬ್ಬರು ಮಾಹಿತಿ/ಸಂದೇಶದ ರವಾನಿಗನಾದರೆ ಇನ್ನೊಬ್ಬರು ಸಂದೇಶ ಸ್ವೀಕರಿಸುವವರಾಗುತ್ತಾರೆ. ಸಂವಹನ ಪರಸ್ಪರವಾಗಿರಬೇಕಿದ್ದಲ್ಲಿ ಇವರಿಬ್ಬರ ನಡುವೆ ಪ್ರತ್ಯಾದಾನಕ್ಕೂ (ಫೀಡ್-ಬ್ಯಾಕ್) ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಸಂವಹನ ಏಕಪಕ್ಷೀಯವಾಗಿ, ವಾರ್ತಾಪ್ರಸಾರವಾಗಿ ಉಳಿಯುತ್ತದೆ.
ಸಮರ್ಪಕ ಸಂವಹನದಿಂದ:
· ಸಂದೇಶ ರವಾನಿಸುವ ವ್ಯಕ್ತಿಯ ಅಥವಾ ಮಾಹಿತಿ ವಸ್ತುವಿನ ಬಗ್ಗೆ ಸ್ಪಷ್ಟತೆ ಸಿಗುತ್ತದೆ.
· ಪರಸ್ಪರ ಭಿನ್ನಾಭಿಪ್ರಾಯ ಕಡಿಮೆಯಾಗಿ, ನಂಬಿಕೆ/ಗೌರವ ಹುಟ್ಟುತ್ತದೆ; ಅಸಮರ್ಪಕ ಸಂವಹನದಿಂದ ಮಾಹಿತಿ ಮತ್ತು/ಅಥವಾ ವ್ಯಕ್ತಿಯ ಬಗ್ಗೆ ನಂಬಿಕೆ/ಗೌರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
· ಜನರ ಜೊತೆ ಸರಿಯಾಗಿ ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ.
· ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.
ಸಂವಹನ ಸಮರ್ಪಕವಾಗಿರಬೇಕಾದರೆ ಅದು:
1. ಸಂಪೂರ್ಣವಾಗಿರಬೇಕು
2. ಸಂಕ್ಷಿಪ್ತವಾಗಿರಬೇಕು
3. ಸ್ಪಷ್ಟವಾಗಿರಬೇಕು
4. ವಿಷಯಕ್ಕೆ ಸೀಮಿತವಾಗಿರಬೇಕು
5. ಸರಿಯಾಗಿ (ತಪ್ಪಿಲ್ಲದೆ) ಇರಬೇಕು
6. ಸೌಜನ್ಯಪೂರ್ವಕವಾಗಿರಬೇಕು
7. ಮಿಕ್ಕವರ ಭಾವನೆಯನ್ನು ಪರಿಗಣನೆಗೆ ತೆಗೆದುಕೊಂಡಿರಬೇಕು
ಸಂವಹನ ಸಮರ್ಪಕವಾಗಿರದಂತೆ ತಡೆಯುವ ಶಕ್ತಿಗಳು:
· ಸಂವಹನ ಕಲೆಯ ಕೊರತೆ
· ಸ್ವೀಕರಿಸುವವರ ಭಾವನೆಯ ಬಗ್ಗೆ ಸೂಕ್ಷ್ಮತೆಯ ಕೊರತೆ
· ವಿಷಯವಸ್ತುವಿನ ಬಗ್ಗೆ ಮಾಹಿತಿಯ ಅಭಾವ
· ಭಾವನೆಗಳ ಅಡ್ಡೈಸುವಿಕೆ
· ಆತ್ಮಸ್ಥೈರ್ಯದ ಕೊರತೆ
· ಮಾಧ್ಯಮಗಳ ತಿಕ್ಕಾಟ
· ಸಂದೇಶ ತೀರಾ ಉದ್ದವಾಗಿರುವುದು/ದಿಕ್ಕುದೆಸೆ ಇಲ್ಲದಂತಹದು.
· ಸ್ವೀಕರಿಸುವವರಲ್ಲಿ ಉದಾಸೀನತೆ
· ಪ್ರತ್ಯಾದಾನಕ್ಕೆ ಪರ್ಯಾಪ್ತ ಅವಕಾಶವಿಲ್ಲದಿರುವುದು.
ಈ ತಡೆಗಳನ್ನು ಲಾಂಘಿಸುವ ಬಗೆಗಳು:
· ಸ್ವೀಕರಿಸುವವರ ಜೊತೆ ಸಂಬಂಧ
· ಸರಳವಾದ ಭಾಷೆಯ ಬಳಕೆ
· ಸೂಕ್ತವಾದ ದೈಹಿಕ ಭಾಷೆ
· ಸಾಂಸ್ಕೃತಿಕ ಸೂಕ್ಷ್ಮತೆ
· ಪ್ರತ್ಯಾದಾನ ಸ್ವೀಕರಿಸುವುದು
· ಬೇರೆಯವರಿಗೂ ಭಾಗವಹಿಸುವಿಕೆಗೆ ಅವಕಾಶ ನೀಡುವುದು
· ಸರಿಯಾದ ಪ್ರಶ್ನೆಗಳನ್ನು ಕೇಳುವುದು
· ಕೊನೆಯಲ್ಲಿ ಹೇಳಿದ್ದನ್ನು ಸಾರಾಂಶಿಸುವುದು
ವಾರ್ತಾಪ್ರಸಾರವನ್ನು ಬಿಟ್ಟು, ನಾವು ಪರಸ್ಪರ ಸಂಪರ್ಕದಲ್ಲಿರುವಾಗ, ನಾಲ್ಕು ವಿಧವಾದ ಕ್ರಿಯೆಗೆ ನಮ್ಮ ಸಮಯವನ್ನು ಕೆಳಕಂಡಂತೆ ಹಂಚಿಕೆ ಮಾಡಿರುತ್ತೇವೆ: ಕೇಳಿಸಿಕೊಳ್ಳುವುದು – 45%, ಮಾತನಾಡುವುದು – 30%, ಓದುವುದು – 16% ಮತ್ತು ಬರೆಯುವುದು – 9% (ಅಥವಾ ಇನ್ನೂ ಕಡಿಮೆ)
ಸಂವಹನ ಕ್ರಿಯೆಯಲ್ಲಿ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಕೇವಲ ಕೇಳಿಸಿಕೊಳ್ಳುವುದಷ್ಟೇ ಅಲ್ಲ, ಸಕ್ರಿಯವಾಗಿ ಕೇಳಿಸಿಕೊಳ್ಳಬೇಕು. ಹಾಗಂದರೇನು?
ಸಕ್ರಿಯ ಕೇಳಿಸಿಕೊಳ್ಳುವಿಕೆಯಲ್ಲಿ ನಾಲ್ಕು ವಿಧಗಳಿವೆ:
ಮೆಚ್ಚುಗೆಯ ಕೇಳಿಸಿಕೊಳ್ಳುವಿಕೆ (ಅಪ್ಪ್ರೆಸಿಯೇಟಿವ್ ಲಿಸನಿಂಗ್): ಅಂದರೆ ಅಜ್ಜಿ ಕತೆ ಹೇಳುವಾಗ ಮೊಮ್ಮಕ್ಕಳು ಕೇಳುವ ರೀತಿ.
ವಿಮರ್ಶಾತ್ಮಕ ಕೇಳಿಸಿಕೊಳ್ಳುವಿಕೆ (ಕ್ರಿಟಿಕಲ್ ಲಿಸನಿಂಗ್): ಅಂದರೆ ಕೇಳಿಸಿಕೊಳ್ಳುತ್ತಿರುವುದನ್ನು ನಿಮ್ಮ ಬುದ್ಧಿ ಒರೆಗಲ್ಲಿಗೆ ಹಚ್ಚುತ್ತಿದೆ ಎಂದರ್ಥ
ಭಾವನಾತ್ಮಕ ಕೇಳಿಸಿಕೊಳ್ಳುವಿಕೆ (ರಿಲೇಶನ್ಷಿಪ್ ಲಿಸನಿಂಗ್): ಇದು ನಿಮ್ಮ ನಡುವಣ ಸಂಬಂಧವನ್ನು ಅವಲಂಬಿಸಿರುತ್ತದೆ.
ಸೂಕ್ಷ್ಮಬುದ್ಧಿಯ ಕೇಳಿಸಿಕೊಳ್ಳುವಿಕೆ (ಡಿಸ್ಕ್ರಿಮಿನೇಟಿವ್ ಲಿಸನಿಂಗ್): ಇದೂ ಸಹ ವಿಮರ್ಶಾತ್ಮಕವಾಗಿದ್ದು, ತಪ್ಪನ್ನು ಕೂಡಲೇ ಹಿಡಿಯುವ ಉತ್ಸಾಹದಿಂದ ಕೂಡಿದ ಕೇಳಿಸಿಕೊಳ್ಳುವಿಕೆ.
“ನಾವು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚು ಮಾತನಾಡಬೇಕು ಎಂದು ಸೃಷ್ಟಿಕರ್ತ ನಿರ್ಧರಿಸಿದ್ದರೆ, ನಮಗೆ ಎರಡು ಬಾಯಿ ಮತ್ತು ಒಂದು ಕಿವಿ ಕೊಟ್ಟಿರುತ್ತಿದ್ದ” ಎಂದು ಖ್ಯಾತ ಲೇಖಕ ಮಾರ್ಕ್ ಟ್ವೈನ್ ಹೇಳಿದ್ದಾರೆ. ಇದರಿಂದ ಸಂವಹನೆಯಲ್ಲಿ ಶ್ರವಣದ ಪಾತ್ರ ಎಷ್ಟು ಮುಖ್ಯ ಎನ್ನುವುದು ತಿಳಿಯುತ್ತದೆ. ಸಕ್ರಿಯ ಕೇಳಿಸಿಕೊಳ್ಳುವಿಕೆಯಲ್ಲಿ ನಮ್ಮ ಎಲ್ಲಾ ಗಮನ ಮತ್ತು ಶ್ರವಣೇಂದ್ರಿಯಗಳನ್ನು ಒಟ್ಟುಗೂಡಿಸಿ ಕೇಳಿಸಿಕೊಳ್ಳಬೇಕು. ಕಿವಿಯೊಂದೇ ಸಾಲದೇ ಎಂದು ನೀವು ಪ್ರಶ್ನಿಸಬಹುದು. ಇಲ್ಲ, ನಾವು ಕೇವಲ ಕಿವಿ ಮಾತ್ರವಲ್ಲ, ಕಣ್ಣು, ಮೆದುಳು ಮತ್ತು ಸ್ಪರ್ಶದಿಂದಲೂ ಕೇಳಿಸಿಕೊಳ್ಳಬಹುದು. ಸಕ್ರಿಯ ಕೇಳಿಸಿಕೊಳ್ಳುವಿಕೆ ಎಂದರೆ ಕಲ್ಲಿನಂತೆ ಕುಳಿತು ಕೇಳಿಸಿಕೊಳ್ಳುವುದು ಎಂದರ್ಥವಲ್ಲ. ಹೇಳುತ್ತಿರುವವರಿಗೆ ನಮ್ಮಿಂದ ಸೂಕ್ತ ಪ್ರತಿಕ್ರಿಯೆಯೂ ಕಾಲಕಾಲಕ್ಕೆ ಸಿಗುತ್ತಿರಬೇಕು ಉದಾ: ಮುಗುಳ್ನಗೆ, ದೃಷ್ಟಿ-ಸಂಪರ್ಕ, ತಲೆದೂಗುವುದು ಇತ್ಯಾದಿ. ಕೇಳಿಸಿಕೊಳ್ಳಲು ನೀವು ಕುಳಿತಿರುವ ರೀತಿ (ಪಾಷ್ಚರ್) ಸಹಿತ ಸಂದೇಶ ನೀಡುತ್ತಿರುತ್ತದೆ ಎಂಬುದನ್ನು ನೆನಪಿಡಿ.
( ಜೀವನ ಕಲೆಗಳಿಗೆ ಸಂಬಂಧಿತ ಲೇಖಕರ ಇನ್ನುಳಿದ ಲೇಖನಗಳಿಗಾಗಿ ಮೇಲೆ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ )


