ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಕೇರಳದ ನೂರಾರು ಆಶಾ ಕಾರ್ಯಕರ್ತರು ಸೋಮವಾರ (ಮಾ.17) ರಾಜ್ಯ ಸಚಿವಾಲಯಕ್ಕೆ ಮುತ್ತಿಗೆ ಹಾಕುವ ಮೂಲಕ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ನಿವೃತ್ತಿ ನಂತರದ ಸೌಲಭ್ಯಗಳು ಮತ್ತು ಗೌರವ ಧನ ಹೆಚ್ಚಳಕ್ಕಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತರು 36 ದಿನಗಳಿಂದ ತಿರುವನಂತಪುರಂನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಮ್ಮ ಬೇಡಿಕೆಗಳ ಕುರಿತು ಅಧಿಕಾರಿಗಳಿಂದ ಯಾವುದೇ ಭರವಸೆ ಇನ್ನೂ ಸಿಗದ ಕಾರಣ, ಪ್ರತಿಭಟನಾಕಾರರು ಇಂದು ನಗರದ ಹೃದಯಭಾಗದಲ್ಲಿರುವ ಸಚಿವಾಲಯದ ವಿವಿಧ ದ್ವಾರಗಳಲ್ಲಿ ತಡೆಯೊಡ್ಡಿದರು. ಪ್ರತಿಭಟನಾ ಸ್ಥಳದಲ್ಲಿ ಒಟ್ಟುಗೂಡಿದ ನಂತರ, ಅವರು ಸಚಿವಾಲಯದ ಕಡೆಗೆ ತೆರಳಿ, ರಸ್ತೆಯಲ್ಲಿ ಕುಳಿತು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಸಚಿವಾಲಯದ ಆವರಣದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಸಚಿವಾಲಯದ ಒಳಗೆ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಪ್ರತಿಭಟನಾಕಾರರು ಸಚಿವಾಲಯದೊಳಗೆ ಪ್ರವೇಶಿಸದಂತೆ ತಡೆಯಲು 800 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ರತಿಭಟನೆಯಿಂದ ಸಚಿವಾಲಯದ ಸಾಮಾನ್ಯ ಕಾರ್ಯಚಟುವಟಿಕೆಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಆಡಳಿತಾರೂಢ ಎಲ್‌ಡಿಎಫ್ ಆಶಾ ಕಾರ್ಯಕರ್ತರ ಹೋರಾಟವನ್ನು ಟೀಕಿಸಿದೆ. ಈ ಪ್ರತಿಭಟನೆಯ ಹಿಂದೆ ಗುಪ್ತ ಅಜೆಂಡಾ ಇದೆ ಎಂದಿದೆ.
“ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಿತ್ತು… ರಾಜ್ಯ ಸರ್ಕಾರದ ವಿರುದ್ಧ ಅಲ್ಲ” ಎಂದು ಹಿರಿಯ ಸಿಪಿಐ(ಎಂ) ನಾಯಕ ಮತ್ತು ಎಲ್‌ಡಿಎಫ್ ಸಂಚಾಲಕ ಟಿ.ಪಿ. ರಾಮಕೃಷ್ಣನ್ ಹೇಳಿದ್ದಾರೆ. ಆಶಾ ಕಾರ್ಯಕರ್ತರ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್‌ಡಿಎಫ್ ಮತ್ತು ಸಿಪಿಐ(ಎಂ) ಯಾವಾಗಲೂ ಬದ್ದವಾಗಿದೆ ಎಂದಿದ್ದಾರೆ.
ಆಶಾ ಸೇರಿದಂತೆ ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಪಾವತಿಗಾಗಿ 2023-24 ರ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಹೆಚ್‌ಎಂ) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಎಲ್‌ಡಿಎಫ್ ಸರ್ಕಾರ ಹೇಳಿಕೊಂಡಿದೆ.
ಆದರೆ, ಕೇಂದ್ರ ಸರ್ಕಾರವು ರಾಜ್ಯದ ಆರೋಪವನ್ನು ತಿರಸ್ಕರಿಸಿದೆ. ಬಾಕಿ ಹಣವನ್ನು ನೀಡಲಾಗಿದೆ. ಅದರ ಬಳಕೆಯ ಪ್ರಮಾಣಪತ್ರ ಕೇರಳದಿಂದ ಬಂದಿಲ್ಲ ಎಂದಿದೆ. ಪ್ರಮಾಣಪತ್ರ ಬಂದ ನಂತರ, ಅಗತ್ಯವಿರುವ ಮೊತ್ತವನ್ನು ಆಶಾ ಕಾರ್ಯಕರ್ತೆಯರಿಗೆ ಮತ್ತು ರಾಜ್ಯಕ್ಕೆ ನೀಡಲಾಗುವುದು ಎಂದು ಹೇಳಿದೆ.
ಆಶಾ ಕಾರ್ಯಕರ್ತರ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ಎನ್‌ಹೆಚ್‌ಎಂನ ಮಿಷನ್ ಸ್ಟೀರಿಂಗ್ ಗ್ರೂಪ್ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಸಂಸತ್ತಿಗೆ ಹೇಳಿದ್ದಾರೆ.
ಮತದಾರರ ಗುರುತಿನ ಚೀಟಿ ವಿಚಾರದ ಬಗ್ಗೆ ಚರ್ಚೆಗೆ ಮೋದಿ ಸರ್ಕಾರ ಸಿದ್ದವೆ?: ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಪ್ರಶ್ನೆ


