“ಕಷ್ಟಪಟ್ಟು ಗಳಿಸಿದ ನಮ್ಮ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುತ್ತಿರುವುದನ್ನು ಸರಳವಾಗಿ ಯೋಚಿಸಲು ಸಾಧ್ಯವಿಲ್ಲ. ಅಸ್ಸಾಂ ಪೊಲೀಸರು ಕೂಡಾ ಅದೇ ವಿಚಾರದ ಬಗ್ಗೆ ಯೋಚಿಸುತ್ತಿದ್ದರೆ, ಅದು ವಿಕೃತ ಚಿಂತನೆ” ಎಂದು ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ ಹೇಳಿದೆ.
ದಲಿತ ಹಕ್ಕುಗಳ ಹೋರಾಟಗಾರ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರು ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಪ್ರಕರಣದ ಜಾಮೀನು ವಿಚಾರಣೆ ನಡೆಸಿದ ನ್ಯಾಯಾಲಯವು, ‘ಪ್ರಕರಣದ ಬಗ್ಗೆ ಪೊಲೀಸರು ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಹೇಳಿದ್ದು, ಅವರಿಗೆ ಜಾಮೀನು ಮಂಜೂರು ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ‘ಸುಳ್ಳು ಎಫ್‌ಐಆರ್’ ದಾಖಲಿಸಿದ್ದು, ‘ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ರಾಜ್ಯದ ಪೊಲೀಸರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸುವುದರ” ವಿರುದ್ಧ ಪೊಲೀಸರಿಗೆ ಅದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕೋಮು ದ್ವೇಷ ಹರಡುವ ಯಾವುದೆ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ರಾಜ್ಯದ ಡಾಕ್ಟರ್‌ಗಳಿಗೆ ವೈದ್ಯಕೀಯ ಮಂಡಳಿ ಎಚ್ಚರಿಕೆ
ಏಪ್ರಿಲ್ 21 ರಂದು ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್‌ಗೆ ಸರ್ಕಾರಿ ವಾಹನದಲ್ಲಿ ಅವರನ್ನು ಕರೆದೊಯ್ಯುತ್ತಿದ್ದಾಗ ಜಿಗ್ನೇಶ್ ಮೇವಾನಿ ತನ್ನ ಮೇಲೆ, ‘ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ’, ‘ದೈಹಿಕವಾಗಿ ತಳ್ಳಿದ್ದಾರೆ’ ಎಂದು ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಎಫ್‌ಐಆರ್ ಪ್ರಕಾರ, ವಾಹನದಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಅದಾಗ್ಯೂ, ಮಹಿಳಾ ಅಧಿಕಾರಿಯ ಹೇಳಿಕೆಯನ್ನು ಎಫ್‌ಐಆರ್‌ನಲ್ಲಿ ಸೇರಿಸುವುದಿಲ್ಲ ಎಂದು ನ್ಯಾಯಾಲಯ ಶುಕ್ರವಾರ ಹೇಳಿದೆ. “ಇದು ಆರೋಪಿಯನ್ನು ದೀರ್ಘಕಾಲದವರೆಗೆ ಬಂಧನದಲ್ಲಿಡಲು, ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ತಯಾರಿಸಲ್ಪಟ್ಟಿದೆ” ಎಂದು ಅದು ಹೇಳಿದೆ.
ಇದನ್ನೂ ಓದಿ: ಅಯೋಧ್ಯೆ: ಮಸೀದಿಗಳ ಮೇಲೆ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿ ಗಲಭೆಗೆ ಪ್ರಚೋದನೆ; 7 ದುಷ್ಕರ್ಮಿಗಳ ಬಂಧನ
“ಇಬ್ಬರು ಪುರುಷ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಗೌರವಕ್ಕೆ ಧಕ್ಕೆ ತರಲು ಯಾವುದೇ ವಿವೇಕಯುತ ವ್ಯಕ್ತಿ ಎಂದಿಗೂ ಪ್ರಯತ್ನಿಸುವುದಿಲ್ಲ. ಆರೋಪಿಯು ಹುಚ್ಚುತನದ ವ್ಯಕ್ತಿ ಎಂಬ ಯಾವ ದಾಖಲೆ ಕೂಡಾ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.


