ನೀರಿನಲ್ಲಿ ಮುಳುಗುತ್ತಿರುವ ವಾಹನದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲು ಮುಂಜಾನೆ ಮಸೀದಿ ಮೈಕ್ ಬಳಸಿ ಇಡೀ ಗ್ರಾಮವನ್ನು ಎಚ್ಚರಿಸಿದ ಅಸ್ಸಾಂನ ಮುಸ್ಲಿಂ ಧರ್ಮಗುರು ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆಯಿಂದ ಜಾರಿ ಕೊಳಕ್ಕೆ ಬಿದ್ದ ಘಟನೆ ನಡೆದಿದೆ. ಅಪಘಾತ ಸಂದರ್ಭದಲ್ಲಿ ಪ್ರಯಾಣಿಕರು ನಿದ್ರಿಸುತ್ತಿದ್ದರು, ಕಿಟಕಿಗಳು ಮುಚ್ಚಿದ್ದರಿಂದ ವಾಹನವು ವೇಗವಾಗಿ ಮುಳುಗಲು ಪ್ರಾರಂಭಿಸಿತು.
ಮುಂಜಾನೆಯ ಶಾಂತ ಸಮಯದಕ್ಕಿ ದೊಡ್ಡ ಶಬ್ದ ಕೇಳಿ, ಇಮಾಮ್ ಅಬ್ದುಲ್ ಬಾಸಿತ್ ಹೊರಗೆ ಧಾವಿಸಿದರು. ನೀರಿನ ಕೆಳಗಿನಿಂದ ಹೆಡ್‌ಲೈಟ್‌ಗಳು ಹೊಳೆಯುತ್ತಿರುವುದನ್ನು ನೋಡಿದರು. ಅಪಾಯವನ್ನು ಅರಿತುಕೊಂಡ ಅವರು, ತಕ್ಷಣವೇ ಮಸೀದಿಯ ಧ್ವನಿವರ್ಧಕವನ್ನು ಬಳಸಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿ, ತುರ್ತು ಸಹಾಯಕ್ಕಾಗಿ ಮನವಿ ಮಾಡಿದರು.
“ನೀರಿನ ಅಡಿಯಲ್ಲಿ ಕಾರಿನ ದೀಪಗಳನ್ನು ನಾನು ನೋಡಿದೆ, ನಾವು ತಕ್ಷಣ ಕಾರ್ಯನಿರ್ವಹಿಸಬೇಕೆಂದು ನನಗೆ ತಿಳಿದಿತ್ತು” ಎಂದು ಬಾಸಿತ್ ಹೇಳಿದರು.
ಕೆಲವೇ ನಿಮಿಷಗಳಲ್ಲಿ, ನೆರೆಹೊರೆಯ ನಿವಾಸಿಗಳು ಕೊಳಕ್ಕೆ ದುಮುಕಿ, ಕಾರಿನ ಕಿಟಕಿಗಳನ್ನು ಒಡೆದು ಏಳು ಪ್ರಯಾಣಿಕರನ್ನು ಹೊರಗೆಳೆದರು. ನಂತರ ವಾಹನವು ಸಂಪೂರ್ಣವಾಗಿ ಮುಳುಗಿತು. ರಕ್ಷಿಸಲ್ಪಟ್ಟ ಪ್ರಯಾಣಿಕರು ಹಿಂದೂ ಸಮುದಾಯದವರಾಗಿದ್ದು, ಸಿಲ್ಚಾರ್ ನಿಂದ ತ್ರಿಪುರಾಗೆ ಪ್ರಯಾಣಿಸುತ್ತಿದ್ದರು.
ಸ್ಥಳೀಯ ಧರ್ಮಗುರು ಮೌಲಾನಾ ಅಬ್ದುಲ್ ಹಫೀಜ್ ಬಾಸಿತ್ ಅವರ ಸಮಯಪ್ರಜ್ಞೆ ಶ್ಲಾಘಿಸಿದರು. ‘ಇದು ನಿಜವಾದ ಮಾನವೀಯತೆಯ ಸಂದೇಶ’ ಎಂದು ಅವರು ಹೇಳಿದರು.
ಅವರು ಸಹಜವಾಗಿಯೇ ವರ್ತಿಸಿದರು ಎಂದು ಬಾಸಿತ್ ಹೇಳಿದರು. “ನಾವು ಧರ್ಮ ಅಥವಾ ಬೇರೆ ಯಾವುದರ ಬಗ್ಗೆಯೂ ಯೋಚಿಸಲಿಲ್ಲ. ಜೀವಗಳನ್ನು ಉಳಿಸುವುದು ಆದ್ಯತೆಯಾಗಿತ್ತು” ಎಂದು ಅವರು ಹೇಳಿದರು.
ರಕ್ಷಣೆಗೆ ಈ ಪ್ರದೇಶದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸ್ಥಳೀಯ ಬಿಜೆಪಿ ನಾಯಕ ಇಕ್ಬಾಲ್ ಬಾಸಿತ್ ಅವರಿಗೆ ಧನ್ಯವಾದ ಹೇಳಲು ಭೇಟಿ ನೀಡಿದ್ದರು. ಅವರನ್ನು ಔಪಚಾರಿಕವಾಗಿ ಗೌರವಿಸಲು ಶಿಫಾರಸು ಮಾಡುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.


