ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿಗಳಾದ ಚಂದ್ರು ಮತ್ತು ಆತನ ತಾಯಿಯ ವಿರುದ್ದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದನ್ನು ಅನುಸರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇಬ್ಬರನ್ನೂ ಬಂಧಿಸಲಾಗಿದೆಯೇ? ಎಂಬುವುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತರು ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ಮತ್ತು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವ ಪತ್ರಗಳಲ್ಲೂ ಆರೋಪಿಗಳ ವಿರುದ್ದ ಪ್ರಕರಣ ದಾಖಲಾದ ಬಗ್ಗೆ ಉಲ್ಲೇಖಿಸಿದ್ದರು.
ಸೆಪ್ಟೆಂಬರ್ 19ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು “ವಾರ್ಡ್ ಸಂಖ್ಯೆ 72ರಲ್ಲಿ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಜಾತಿ ದೌರ್ಜನ್ಯವೆಸಗಿದವರ ವಿರುದ್ದ ತುರ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಅದೇ ರೀತಿ ಸೆಪ್ಟೆಂಬರ್ 19ರಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಬಿಬಿಎಂಪಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತರು “ಮಹಿಳಾ ಪೌರಕಾರ್ಮಿಕರ ಮೇಲೆ ದೈಹಿಕ ಹಲ್ಲೆ ನಡೆಸಿ, ಜಾತಿ ದೌರ್ಜನ್ಯ ನಡೆಸಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.
ಸೆಪ್ಟೆಂಬರ್ 18ರಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಬೃಹತ್ ಧರಣಿ ನಡೆಸಿದ್ದ ಪೌರಕಾರ್ಮಿಕರು, ಕೆಲಸದಲ್ಲಿ ಸ್ಥಳದಲ್ಲಿ ತಮ್ಮ ಮೇಲಾಗುವ ಹಿಂಸಾಚಾರ, ಜಾತಿ-ಲಿಂಗಾಧಾರಿತ ದೌರ್ಜನ್ಯಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.
ಸೆಪ್ಟೆಂಬರ್ 11ರಂದು ಬೆಳಿಗ್ಗೆ 11: 30ರ ಸುಮಾರಿಗೆ ಶಾಂತ, ಲಕ್ಷ್ಮೀ, ಅಣ್ಣಿಯಮ್ಮ, ಮುನಿರತ್ನ ಮತ್ತು ರಾಮಕ್ಕ ಎಂಬ ಐವರು ಮಹಿಳಾ ಪೌರಕಾರ್ಮಿಕರು ಬಿಬಿಎಂಪಿಯ ವಾರ್ಡ್ ಸಂಖ್ಯೆ 72ರಲ್ಲಿ ಬರುವ ಭಾರತ್‌ನಗರದ 14ನೇ ಕ್ರಾಸ್‌ನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿನ ನಿವಾಸಿಗಳಾದ ಚಂದ್ರು ಎಂಬಾತ ಮತ್ತು ಆತನ ತಾಯಿ ತಮ್ಮ ಮನೆ ಮುಂದಿರುವ ಕಸ ತೆಗೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಟಿಪ್ಪರ್ ಆಟೋದಲ್ಲಿ ಕಸ ಸಂಗ್ರಹಿಸುವುದು ಮತ್ತು ಕಸ ಗುಡಿಸುವುದು ಮಾತ್ರ ನಮ್ಮ ಕೆಲಸ ಎಂದು ಪೌರಕಾರ್ಮಿಕರು ಸೌಜನ್ಯಯುತವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿಗಳಾದ ಚಂದ್ರು ಮತ್ತು ಆತನ ತಾಯಿ ಪೌರಕಾರ್ಮಿಕರಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೆ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಚಿತ್ರೀಕರಿಸುತ್ತಿದ್ದ ಪೌರಕಾರ್ಮಿಕರೊಬ್ಬರ ಮೊಬೈಲ್ ಕಸಿದು ಒಡೆದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರ


