ವಕ್ಫ್ (ತಿದ್ದುಪಡಿ) ಮಸೂದೆಯನ್ನು ‘ಅಸಂವಿಧಾನಿಕ’ ಎಂದು ಬಣ್ಣಿಸಿದ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ಜಂಟಿ ಸಮಿತಿಯ ವರದಿಯನ್ನು ವಿರೋಧಿಸಿದರು. ವಕ್ಫ್ ಮಸೂದೆಯು 15, 15 ಮತ್ತು 29 ನೇ ವಿಧಿಗಳ ಗಂಭೀರ ಉಲ್ಲಂಘನೆಯಾಗಿದೆ. ಆದರೆ, ಮುಸ್ಲಿಮರಿಂದ ವಕ್ಫ್ ಕಸಿದುಕೊಂಡು ಅದನ್ನು ನಾಶಮಾಡಲು ತರಲಾಗುತ್ತಿದೆ ಎಂದು ಹೇಳಿದರು.
ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತಾದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ಗುರುವಾರ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಂಡಿಸಲಾಯಿತು. ಇದು ವಿರೋಧ ಪಕ್ಷಗಳಿಂದ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಲೋಕಸಭೆಯಲ್ಲಿ ವರದಿಯನ್ನು ಮಂಡಿಸಿದರು. ಆದರೆ, ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಅಂತಿಮ ವರದಿಯಲ್ಲಿ ಸೇರಿಸಲಾಗಿಲ್ಲ ಎಂದು ಆರೋಪಿಸಿ ಪ್ರತಿಭಟಿಸಿದರು.
ಓವೈಸಿ ಹೇಳಿದ್ದೇನು?
ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಜೆಪಿಸಿ ವರದಿಯನ್ನು ಮಂಡಿಸಿದ ಸಂದರ್ಭದಲ್ಲಿ ಎಐಎಂಐಎಂ ಸಂಸದರು, “ಜೆಪಿಸಿ ಸದಸ್ಯರು ಹೇಳಿದ್ದನ್ನು ನಾನು ಒಪ್ಪುತ್ತೇನೆ, ಈ ವಕ್ಫ್ ಮಸೂದೆ ಸಂವಿಧಾನಬಾಹಿರ. 15, 15 ಮತ್ತು 29 ನೇ ವಿಧಿಯ ಗಂಭೀರ ಉಲ್ಲಂಘನೆಯಾಗಿದೆ, ಬದಲಿಗೆ ಮುಸ್ಲಿಮರಿಂದ ವಕ್ಫ್ ಅನ್ನು ಕಸಿದುಕೊಂಡು ಅದನ್ನು ನಾಶಮಾಡಲು ತರಲಾಗುತ್ತಿದೆ. ನಾವು ಈ ಮಸೂದೆಯನ್ನು ಖಂಡಿಸುತ್ತೇವೆ” ಎಂದರು.
“ಬಿಜೆಪಿ ಮತ್ತು ಎನ್‌ಡಿಎ ಮಂಡಿಸಿದ ತಿದ್ದುಪಡಿಗಳು ವಕ್ಫ್ ಅನ್ನು ಇನ್ನಷ್ಟು ಹದಗೆಡಿಸಿದೆ. ನೀವು ಹೇಳಿ, ಮುಸ್ಲಿಂ ಅಲ್ಲದ ಸದಸ್ಯರನ್ನು ಮುಸ್ಲಿಂ ವಕ್ಫ್ ಆಸ್ತಿಗಳಲ್ಲಿ ಹೇಗೆ ಸೇರಿಸಬಹುದು? ಕಲೆಕ್ಟರ್‌ಗಳು ಮತ್ತು ಮೇಲಿನ ಅಧಿಕಾರಿಗಳಿಗೆ ನೀವು ಹೇಗೆ ಅಧಿಕಾರ ನೀಡುತ್ತೀರಿ? ಆಸ್ತಿ ವಕ್ಫ್‌ಗೆ ಸೇರಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಲೆಕ್ಟರ್ ಹೇಗೆ ನಿರ್ಧರಿಸುತ್ತಾರೆ” ಎಂದು ಪ್ರಶ್ನಿಸಿದರು.
ವಿಪಕ್ಷ ನಾಯಕರ ವಿರೋಧ
ಲೋಕಸಭೆಯಲ್ಲಿ ಮಂಡಿಸಲಾದ ವಕ್ಫ್ ಜೆಪಿಸಿ ವರದಿಯ ಕುರಿತು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್, “ಮಸೂದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ದೇಶದ ಪ್ರಮುಖ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಈ ಮಸೂದೆಯನ್ನು ಮಂಡಿಸಲಾಗಿದೆ. ನಾವು ಮಸೂದೆಯನ್ನು ವಿರೋಧಿಸಿದ್ದಲ್ಲದೆ, ಅದನ್ನು ಬಹಿಷ್ಕರಿಸಿದ್ದೇವೆ. ಯಾವುದೇ ಷರತ್ತಿನ ಮೇಲೆ ಇದನ್ನು ಪಾಸ್ ಮಾಡಲು ನಾವು ಬಿಡುವುದಿಲ್ಲ” ಎಂದು ಹೇಳಿದರು.
“ವಿರೋಧ ಪಕ್ಷದ ಸದಸ್ಯರು ನೀಡಿದ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿಲ್ಲ. ಸರ್ಕಾರ ಈ ಮಸೂದೆಯನ್ನು ಅನಿಯಂತ್ರಿತ ರೀತಿಯಲ್ಲಿ ತರುತ್ತಿದೆ. ಅವರು ಗೊಂದಲ ಉಂಟುಮಾಡಲು ಅಧಿವೇಶನದ ಕೊನೆಯ ದಿನದಂದು ಮಸೂದೆಯನ್ನು ತಂದಿದ್ದಾರೆ” ಎಂದು ಎಸ್‌ಪಿ ಸಂಸದೆ ಇಕ್ರಾ ಹಸನ್ ಹೇಳಿದರು.
ಇದನ್ನೂ ಓದಿ; ವಕ್ಫ್ ಮಸೂದೆಯನ್ನು ಜೆಪಿಸಿಗೆ ಹಿಂತಿರುಗಿಸುವಂತೆ ಒತ್ತಾಯಿಸಿದ ಮಲ್ಲಿಕಾರ್ಜುನ ಖರ್ಗೆ


