ಬ್ರಿಟನ್ ರಾಣಿ ಎಲಿಜಬೆತ್‍ರ ಹತ್ಯೆಗೆ ಪ್ರಯತ್ನಿಸಿರುವುದಾಗಿ ಬ್ರಿಟಿಷ್ ಸಿಖ್ ಜಸ್ವಂತ್ ಸಿಂಗ್ ಚಾಲಿ ತಪ್ಪೊಪ್ಪಿಕೊಂಡಿದ್ದು, ಸಧ್ಯ ಬ್ರಿಟನ್‍ನ ನ್ಯಾಯಾಲಯವು ಆತನಿಗೆ 9 ವರ್ಷಗಳ ಜೈಲುಶಿಕ್ಷೆ ಘೋಷಿಸಿದೆ.
2021ರ ಕ್ರಿಸ್‍ಮಸ್ ದಿನದಂದು ಕಪ್ಪು ಬಟ್ಟೆ ಮತ್ತು ಮಾಸ್ಕ್ ಧರಿಸಿದ್ದ ಜಸ್ವಂತ್ ಸಿಂಗ್ ಬ್ರಿಟನ್ ರಾಣಿಯ ಖಾಸಗಿ ಅಪಾರ್ಟ್‍ಮೆಂಟ್ ವಿಂಡ್ಸರ್ ಕ್ಯಾಸಲ್‍ಗೆ ನುಗ್ಗಲು ಪ್ರಯತ್ನಿಸುವ ಸಂದರ್ಭ ಆತನನ್ನು ಭದ್ರತಾ ಸಿಬಂದಿ ಬಂಧಿಸಿದ್ದರು. ಆತನ ಬಳಿ ಮಾರಕಾಸ್ತ್ರವಿತ್ತು.
”ಬ್ರಿಟನ್ ರಾಣಿಯ ಹತ್ಯೆ ನಡೆಸಿ 1919ರಲ್ಲಿ ನಡೆದ ಜಲಿಯನ್‍ವಾಲಾ ಹತ್ಯಾಕಾಂಡದ ಸೇಡು ತೀರಿಸಿಕೊಳ್ಳುವುದು ತನ್ನ ಉದ್ದೇಶವಾಗಿದೆ” ಎಂದು ಜಸ್ವಂತ್ ಸಿಂಗ್ ಹೇಳಿದ್ದ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಜಸ್ವಂತ್ ಸಿಂಗ್ ಮಾನಸಿಕ ಅಸ್ವಸ್ಥನಾಗಿರುವುದರಿಂದ ಇದು ಉದ್ದೇಶಪೂರ್ವಕ ಕೃತ್ಯವಲ್ಲ. ಆತನನ್ನು ನಿರ್ದೋಷಿ ಎಂದು ಬಿಡುಗಡೆಗೊಳಿಸುವಂತೆ ಆತನ ವಕೀಲರು ಮನವಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಲಂಡನ್‍ನ ಓಲ್ಡ್‍ಬೈಲಿ ನ್ಯಾಯಾಲಯದ ನ್ಯಾಯಾಧೀಶ ನಿಕೊಲಸ್ ಹಿಲಾರ್ಡ್ ”ಕೃತ್ಯ ನಡೆದ ಸಂದರ್ಭ ಆತ ಮಾನಸಿಕವಾಗಿ ಸ್ವಸ್ಥನಾಗಿದ್ದ ಎಂಬುದು ಆತನ ನಡವಳಿಕೆ ಮತ್ತು ಹೇಳಿಕೆಗಳಿಂದಲೇ ಸ್ಪಷ್ಟವಾಗಿದೆ. ವಿಚಾರಣೆಯ ಸಂದರ್ಭದ ಜೈಲುವಾಸ, ಏಕಾಂಗಿತನದಿಂದ ಆತ ಮಾನಸಿಕವಾಗಿ ಜರ್ಜರಿತಗೊಂಡಿರಬಹುದು. ಆದ್ದರಿಂದ ಜಸ್ವಂತ್ ಸಿಂಗ್ ದೋಷಿಯಾಗಿದ್ದು 9 ವರ್ಷ ಜೈಲುಶಿಕ್ಷೆ ಅನುಭವಿಸಬೇಕು” ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.


