ಮುಂಬೈ ಬಳಿಯ ವಿರಾರ್ ಪಟ್ಟಣದಲ್ಲಿ ಆಟೋರಿಕ್ಷಾ ಚಾಲಕರೊಬ್ಬರು ಮರಾಠಿಯಲ್ಲಿ ಮಾತನಾಡಲು ನಿರಾಕರಿಸಿದ ವಿಡಿಯೋ ವೈರಲ್ ಆದ ಬಳಿ, ಶಿವಸೇನೆ (ಯುಬಿಟಿ) ಕಾರ್ಯಕರ್ತರು ಅವರಿಗೆ ಥಳಿಸಿ, ಕ್ಷಮೆಯಾಚಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಆಟೋ ಚಾಲಕ “ಹಿಂದಿ ಬೋಲುಂಗಾ, ಭೋಜ್‌ಪುರಿ ಬೋಲುಂಗಾ, ಪರ್ ಮರಾಠಿ ನಹಿ ಬೋಲುಂಗಾ (ನಾನು ಹಿಂದಿ ಮಾತನಾಡ್ತೇನೆ, ಭೋಜ್‌ಪುರಿ ಮಾತನಾಡ್ತೇನೆ. ಆದರೆ, ಮರಾಠಿ ಮಾತನಾಡಲ್ಲ)” ಎಂದು ಹಿಂದಿಯಲ್ಲಿ ಹೇಳಿರುವುದು ಇತ್ತು.
“ಮೈ ಹಿಂದಿ ಬೋಲುಂಗಾ, ತುಜೆ ಕ್ಯಾ ಕರ್ನಾ ಹೈ? ಜೋ ಕರ್ನಾ ಹೈ ಕರ್ ಲೆ (ನಾನು ಹಿಂದಿಯಲ್ಲಿ ಮಾತನಾಡ್ತೇನೆ, ನೀವೇನ್ ಮಾಡ್ತಿರಿ? ನೀವು ಏನ್ ಮಾಡ್ತೀರೋ ಮಾಡಿ) ಎಂದು ಆಟೋ ಚಾಲಕ ಹೇಳಿದ್ದರು.
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಶನಿವಾರ ವಿರಾರ್ ರೈಲ್ವೆ ನಿಲ್ದಾಣದ ಬಳಿ ಶಿವಸೇನೆ (ಯುಬಿಟಿ) ಕಾರ್ಯಕರ್ತರ ಗುಂಪು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಆಟೋ ಚಾಲಕನಿಗೆ ಥಳಿಸಿದ ಗುಂಪು, “ಮರಾಠಿಗರನ್ನು ಅವಮಾನಿಸಿದ್ದಕ್ಕಾಗಿ ಮಹಾರಾಷ್ಟ್ರದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಕೈಮುಗಿದು ಹೇಳುವಂತೆ ಆತನಿಗೆ ಒತ್ತಾಯಿಸಿದೆ. ಈ ಘಟನೆ ಬಗ್ಗೆ ಪೊಲೀಸರಿಗೆ ಯಾರೂ ದೂರು ನೀಡಿಲ್ಲ ಎಂದು ವರದಿ ಹೇಳಿದೆ.
ವಲಸೆ ಬಂದಿರುವ ಆಟೋ ಚಾಲಕ, ಈ ಹಿಂದೆಯೂ ಮರಾಠಿ ಭಾಷೆ, ಮಹಾರಾಷ್ಟ್ರ ಮತ್ತು ಮರಾಠಿ ನಾಯಕರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು. ಅದರ ವಿಡಿಯೋ ವೈರಲ್ ಆಗಿತ್ತು ಎನ್ನಲಾಗಿದೆ.
ಮರಾಠಿ ಮಾತನಾಡದ ಕಾರಣ ಮಹಾರಾಷ್ಟ್ರೇತರ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವುದು ಇದೇ ಮೊದಲಲ್ಲ.
ಜೂನ್ 29 ರಂದು, ಮೀರಾ ರಸ್ತೆ ಪಟ್ಟಣದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರ ಗುಂಪೊಂದು ಬಾಬುಲಾಲ್ ಚೌಧರಿ ಎಂಬ ಅಂಗಡಿಯವನ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯು ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿತ್ತು.
ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಆಡಿ ಕಾರು; 8 ವರ್ಷದ ಮಗು ಸೇರಿ ಐವರಿಗೆ ಗಂಭೀರ ಗಾಯ