ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಕೇರಳದಾದ್ಯಂತ ದೊಡ್ಡ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆದಾಗ ಹಮ್ಮಿಕೊಂಡಿದ್ದ ‘ಅವಳ್‌ಕೊಪ್ಪಂ’ (ಅವಳ ಜೊತೆ) ಎಂಬ ಪ್ರತಿರೋಧ ಮತ್ತು ಸಂತ್ರಸ್ತೆಯ ಜೊತೆಗಿನ ಒಗಟ್ಟಿನ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ.
ಭಾನುವಾರ (ಡಿಸೆಂಬರ್ 14) ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಕೆ) ಪ್ರತಿಭಟನೆ ನಡೆದಿದೆ. ಈ ವೇಳೆ ಮಾತನಾಡಿರುವ ಮಲಯಾಳಂ ನಟಿ ರೀಮಾ ಕಲ್ಲಿಂಗಲ್ ‘ನಿಜವಾದ ಹೋರಾಟ ಈಗ ಪ್ರಾರಂಭವಾಗಿದೆ’ ಎಂದು ಹೇಳಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಚಲನಚಿತ್ರ ನಿರ್ಮಾಪಕ ದಿವಂಗತ ಬಾಲಚಂದ್ರಕುಮಾರ್ ಅವರ ಪತ್ನಿ ಹಿರಿಯ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಮತ್ತು ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.
‘ಅವಳ್‌ಕೊಪ್ಪಂ’ ಇಂದು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ನಿಜವಾದ ಹೋರಾಟ ಈಗ ಪ್ರಾರಂಭವಾಗಿದೆ ಎಂದು ನಾನು ನಂಬುತ್ತೇನೆ” ಎಂದು ರೀಮಾ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನ್ಯಾಯಾಲಯದ ತೀರ್ಪು ಯಾವುದೇ ರೀತಿಯ ಆಶ್ವಾಸನೆ ನೀಡುವುದಿಲ್ಲ. ಈ ದೀರ್ಘ ಹೋರಾಟದಲ್ಲಿ ಸಂತ್ರಸ್ತೆಯ ಜೊತೆಗೆ, ಆಕೆಯ ಪರವಾಗಿ ನಿಂತವರ ಬಗೆಗಿನ ಆತಂಕಕ್ಕಿಂತ ಹೆಚ್ಚಾಗಿ, ಈ ತೀರ್ಪು ಮುಂದಿನ ಪೀಳಿಗೆಗೆ ಕಳುಹಿಸುವ ಸಂದೇಶದ ಬಗ್ಗೆ ನನಗೆ ಆತಂಕವಿದೆ. ಯುವಜನರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ತೀರ್ಪು ಅತ್ಯಂತ ಕೆಟ್ಟ ಉದಾಹರಣೆಯನ್ನು ಕೊಡುತ್ತದೆ. ನಮ್ಮ ಸುತ್ತಲೂ ನಡೆಯುತ್ತಿರುವ ಸಂಗತಿಗಳ ಬಗ್ಗೆ ನಾವು ಬಹಳ ದೃಢವಾದ ಸಂದೇಶವನ್ನು ಕಳುಹಿಸಬೇಕಾಗಿದೆ” ಎಂದು ಪ್ರತಿಭಟನೆಯ ನಂತರ ಸುದ್ದಿ ಮಾಧ್ಯಮ ಒನ್‌ಮನೋರಮ ಜೊತೆ ಮಾತನಾಡುವಾಗ ರೀಮಾ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಭಾಗ್ಯಲಕ್ಷ್ಮಿ, “ಸಮಾಜವು ಸಂತ್ರಸ್ತೆಯ ಜೊತೆ ದೃಢವಾಗಿ ನಿಲ್ಲಬೇಕಾದ ಸಮಯ ಇದು” ಎಂದು ಹೇಳಿದ್ದಾರೆ. ನಟ ದಿಲೀಪ್ ಅವರನ್ನು ಉಲ್ಲೇಖಿಸಿ, “ತೀರ್ಪಿನ ನಂತರ ಅಪರಾಧಕ್ಕೆ ಸಂಚು ರೂಪಿಸಿದವರು ಅವರೇ ಎಂದು ಎಲ್ಲರೂ ಅರ್ಥಮಾಡಿಕೊಂಡಿದ್ದಾರೆ. ದಿಲೀಪ್ ಖುಲಾಸೆಯಾದ ನಂತರ, ಕೇವಲ ಸಂತೋಷವನ್ನು ವ್ಯಕ್ತಪಡಿಸುವ ಅಥವಾ ‘ಸತ್ಯ ಗೆದ್ದಿದೆ’ ಎಂದು ಹೇಳುವ ಬದಲು, ಅವರು ಒಬ್ಬರು ಮಹಿಳೆಯ ಹೆಸರನ್ನು ಹೇಳಿದ್ದಾರೆ. ಸಂತ್ರಸ್ತೆ ಪಿತೂರಿಯ ಬಗ್ಗೆ ಮಾತನಾಡುವಾಗ ದಿಲೀಪ್ ಹೆಸರನ್ನು ಎಂದಿಗೂ ಹೇಳಿರಲಿಲ್ಲ. ಹೀಗಿರುವಾಗ ಅವರು ತನ್ನನ್ನು ಗುರಿಯಾಗಿಸಿಕೊಂಡಿದ್ದಾರೆಂದು ಭಾವಿಸುವುದು ಏಕೆ? ಏಕೆಂದರೆ ಅದನ್ನು ಮಾಡಿದವರು ಅವರೇ” ಎಂದಿದ್ದಾರೆ.
ಡಿಸೆಂಬರ್ 8ರಂದು ತೀರ್ಪು ಪ್ರಕಟಿಸಿದ್ದ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದಿಲೀಪ್ ಅವರನ್ನು ಖುಲಾಸೆಗೊಳಿಸಿತ್ತು. ಈ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಮಾತನಾಡಿದ್ದ ದಿಲೀಪ್, “ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ. ನಾನೇ ಈ ಪ್ರಕರಣದ ನಿಜವಾದ ಬಲಿಪಶು. ನನ್ನ ವೃತ್ತಿ ಜೀವನ, ಪ್ರತಿಷ್ಠೆ ಮತ್ತು ಸಮಾಜದಲ್ಲಿ ನನ್ನ ಜೀವನವನ್ನು ನಾಶಮಾಡುವ ಉದ್ದೇಶದಿಂದ ಈ ಪಿತೂರಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ಇದೆ ಎಂದು ಮೊದಲು ಹೇಳಿದ್ದೇ ಮಂಜು ವಾರಿಯರ್. ಅವರು ಹೀಗೆ ಹೇಳಿದ ದಿನದಿಂದಲೇ ನನ್ನ ವಿರುದ್ಧದ ಪಿತೂರಿ ಶುರುವಾಯಿತು”ಎಂದು ಹೇಳಿದ್ದರು.
ಭಾನುವಾರ ಪ್ರತಿಭಟನೆಯ ಬಳಿಕ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್, “ಅಪರಾಧದಲ್ಲಿ ಪಿತೂರಿ ನಡೆಸಿದವರನ್ನು ಗುರುತಿಸಿ ವಿಚಾರಣೆಗೆ ಒಳಪಡಿಸುವಲ್ಲಿ ವಿಫಲವಾಗಿರುವುದು ದೊಡ್ಡ ಸಮಸ್ಯೆಯಾಗಿದೆ. ಅಪರಾಧವನ್ನು ಯೋಜಿಸಿದವರನ್ನು ಗುರುತಿಸಲು ಮತ್ತು ಅವರನ್ನು ಕಾನೂನಿನ ಮುಂದೆ ತರಲು ಅಸಮರ್ಥವಾಗಿರುವುದು ನಾವು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಪಿತೂರಿಗಾರರನ್ನು ನ್ಯಾಯಾಂಗದ ಮುಂದೆ ತರುವುದನ್ನು ಖಚಿತಪಡಿಸಿಕೊಳ್ಳುವುದು ಕೇರಳದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ” ಎಂದಿದ್ದಾರೆ.
ಕೇರಳದ ಇತರ ಭಾಗಗಳಲ್ಲೂ ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತವಾಗಿದೆ. ಡಿಸೆಂಬರ್ 13ರಂದು, ತಿರುವನಂತಪುರದಿಂದ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಗುಂಪೊಂದು ಪ್ರಯಾಣದ ಸಮಯದಲ್ಲಿ ದಿಲೀಪ್ ಅವರ ಸಿನಿಮಾ ಹಾಕಿದ್ದನ್ನು ವಿರೋಧಿಸಿತ್ತು. ಅವರ ಆಕ್ಷೇಪಣೆಯ ನಂತರ ಬಸ್ ಸಿಬ್ಬಂದಿ ಸಿನಿಮಾ ನಿಲ್ಲಿಸಿದ್ದರು.
ಎರ್ನಾಕುಲಂನ ದೇವಾಲಯದ ಕಾರ್ಯಕ್ರಮದಲ್ಲಿ ದಿಲೀಪ್ ಭಾಗವಹಿಸುವ ಪ್ರಸ್ತಾಪದ ಬಗ್ಗೆ ಮತ್ತೊಂದು ವಿವಾದ ಭುಗಿಲೆದ್ದಿತು. ಶಿವ ದೇವಾಲಯದಲ್ಲಿ ಮುಂದೆ ನಡೆಯಲಿರುವ ಉತ್ಸವದ ಕೂಪನ್‌ಗಳ ವಿತರಣೆಯನ್ನು ಉದ್ಘಾಟಿಸಲು ದಿಲೀಪ್ ಅವರನ್ನು ಆಹ್ವಾನಿಸಲಾಗಿತ್ತು. ಪ್ರತಿಭಟನೆಗಳ ನಂತರ, ಕೊಚ್ಚಿನ್ ದೇವಸ್ವಂ ಮಂಡಳಿಯ ಅಡಿಯಲ್ಲಿ ಬರುವ ದೇವಾಲಯವು ಆಹ್ವಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು.
ಡಿಸೆಂಬರ್ 8ರಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ಸ್ವಲ್ಪ ಮುಂಚೆ ‘ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ)’ ಸಾಮಾಜಿಕ ಜಾಲತಾಣಗಳಲ್ಲಿ ‘ಅವಳ್‌ಕೊಪ್ಪಂ’ ಎಂದು ಪೋಸ್ಟ್ ಹಾಕಿತ್ತು. ಈ ಮೂಲಕ ತೀರ್ಪು ಏನೇ ಬಂದರೂ ಸಂತ್ರಸ್ತೆಯ ಜೊತೆಗಿದ್ದೇವೆ ಎಂದಿತ್ತು.
ತೀರ್ಪು ಪ್ರಕಟಗೊಂಡ ಬಳಿಕ ಅನೇಕ ನಟ, ನಟಿಯರು ‘ಅವಳ್‌ಕೊಪ್ಪಂ’ ಹ್ಯಾಷ್‌ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಅನೇಕ ಸಾಮಾನ್ಯ ಜನರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ‘ಅವಳ್‌ಕೊಪ್ಪಂ’ ಹ್ಯಾಷ್‌ಟ್ಯಾಗ್ ಮೂಲಕ ಸಂತ್ರಸ್ತೆ ನಟಿಗೆ ಬೆಂಬಲ ಮತ್ತು ನ್ಯಾಯಾಲಯದ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


