ಪೌರತ್ವ ತಿದ್ದುಪಡಿ ಕಾಯ್ದೆ. ಭಾಗಶಃ ಭಾರತದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಜನಾಕ್ರೋಶಕ್ಕೆ ಕಾರಣವಾದ ಕಾಯ್ದೆ ಮತ್ತೊಂದಿರಲು ಸಾಧ್ಯವೇ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಲ್ಪಸಂಖ್ಯಾತ ಮತ್ತು ಪ್ರಜಾಪ್ರಭುತ್ವ-ಸಂವಿಧಾನಪರ ಹೋರಾಟಗಾರರು ಕಳೆದ ಆರೆಂಟು ತಿಂಗಳಿನಿಂದ ಈ ಕಾಯ್ದೆಯ ವಿರುದ್ಧ ಒಮ್ಮತದ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ.
ದೆಹಲಿಯ ಶಾಹೀನ್‍ಭಾಗ್ ಪ್ರದೇಶ ನಿರಂತರ ಚಳವಳಿಗೆ ಕಾರಣವಾಗಿದ್ದರೆ, ಕರ್ನಾಟಕದ ಮಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಆಗಿಂದಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ದಾಖಲಾಗುತ್ತಲೇ ಇತ್ತು. ಆದರೆ, ದೆಹಲಿ ಪ್ರತಿಭಟನೆಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರದ ಪ್ರಮುಖ ಪಕ್ಷ ಬಿಜೆಪಿ ಸದಸ್ಯರು ದೆಹಲಿ ಗಲಭೆಗೆ ಕಾರಣವಾಗಿದ್ದು ಎಷ್ಟು ಸತ್ಯವೋ? ಸಿಎಎ ವಿಚಾರದಲ್ಲಿ ಕೇಂದ್ರಕ್ಕಿಂತ ಮುಂಚಿತವಾಗಿ ಕರುಣಾಹೀನವಾಗಿ ನಡೆದುಕೊಂಡಿದ್ದು ಮಾತ್ರ ಕರ್ನಾಟಕ ಎಂಬುದೂ ಅಷ್ಟೇ ಸತ್ಯ.!
ದೆಹಲಿ ಗಲಭೆಗೆ ಮುಂಚಿತವಾಗಿ ಡಿಸೆಂಬರ್ 19ರಂದೇ ಮಂಗಳೂರಿನಲ್ಲಿ ಪೊಲೀಸರು ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಗೋಲಿಬಾರ್ ನಡೆಸಿದ್ದರು. ಈ ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟಿದರೆ, ಅನೇಕರು ಗಾಯಕ್ಕೊಳಗಾಗಿದ್ದರು. ಈ ಗಲಭೆ ಕುರಿತು ಈಗಾಗಲೇ ಸಿಐಡಿ ಪೊಲೀಸರು ಸೇರಿದಂತೆ ಒಟ್ಟು 8 ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಆದರೆ, ಈ ಚಾರ್ಜ್‍ಶೀಟ್ ಅನ್ನು ಒಮ್ಮೆ ಅವಲೋಕಿಸಿದರೆ ಘಟನೆಗಳನ್ನು ಎಷ್ಟು ತಿರುಚಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ದೆಹಲಿ ಮತ್ತು ಕರ್ನಾಟಕದ ವ್ಯವಸ್ಥೆ ಎಂತಹ ಸಂಚನ್ನು ರೂಪಿಸಿದೆ ಎಂಬುದೂ ವೇದ್ಯವಾಗುತ್ತದೆ. ಅಸಲಿಗೆ ದೆಹಲಿ ಗಲಭೆ ಮತ್ತು ಕರ್ನಾಟಕದ ಗೋಲಿಬಾರ್ ನಡುವೆ ಇರುವ ಸಾಮ್ಯತೆ ಏನು? ಪೊಲೀಸ್ ಇಲಾಖೆ ಈ ಎರಡೂ ಪ್ರಕರಣದಲ್ಲಿ ಎಂತಹ ಸಂಚನ್ನು ರೂಪಿಸಿದೆ? ಚಾರ್ಜ್‍ಶೀಟ್‍ನಲ್ಲಿರುವ ಲೋಪವೇನು? ಪೊಲೀಸರ ಬ್ಲಾಕ್‍ಮೇಲ್ ತಂತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ದೆಹಲಿ ಗಲಭೆ-ಮಂಗಳೂರು ಗೋಲಿಬಾರ್ ಸಾಮ್ಯತೆ
ಕೋಮುವಾದಿ ಮತ್ತು ದ್ವೇಷದ ಟ್ವೀಟ್‍ಗಳಿಗೆ ಹೆಸರುವಾಸಿಯಾದ ಕಪಿಲ್ ಮಿಶ್ರಾ ಫೆಬ್ರವರಿ 23 ರಂದು ಈಶಾನ್ಯ ದೆಹಲಿಯ ಜಾಫ್ರಾಬಾದ್ ಬಳಿಯ ಮೌಜ್‍ಪುರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ರ್ಯಲಿಯನ್ನು ನಡೆಸಿದ್ದರು. ಅದೇ ಸ್ಥಳದಲ್ಲಿ ಸಿಎಎ ವಿರೋಧಿ ಹೋರಾಟ ಸಹ ನಡೆಯುತ್ತಿತ್ತು.
ಈ ವೇಳೆ ಪೊಲೀಸರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದ ಕಪಿಲ್ ಮಿಶ್ರಾ, “ಮೂರು ದಿನಗಳೊಳಗೆ ಪೊಲೀಸರು ಇಲ್ಲಿನ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ಮಾತ್ರ ನಾವು ತಾಳ್ಮೆ ವಹಿಸುತ್ತೇವೆ. ಆದರೆ, ಆನಂತರವೂ ಇಲ್ಲಿನ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಕೇಳುವುದಿಲ್ಲ, ನಾವೇ ಬೀದಿಗಿಳಿಯಬೇಕಾಗುತ್ತದೆ” ಎಂದು ಪೊಲೀಸ್ ಅಧಿಕಾರಿಗಳ ಎದುರಿಗೆ ಕಪಿಲ್ ಮಿಶ್ರಾ ಆಡಿದ್ದ ಉದ್ಧಟತನದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಕೆಲವು ಗಂಟೆಗಳ ನಂತರ ಸಿಎಎ ವಿರೋಧಿ ಮತ್ತು ಪರ ಎಂಬ ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದವು. ನೋಡುನೋಡುತ್ತಿದ್ದಂತೆ ದೆಹಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದರು.
ದೆಹಲಿ ಹಿಂಸಾಚಾರದ ಬೆನ್ನಿಗೆ ಕಪಿಲ್ ಮಿಶ್ರಾ ಅವರ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದವು. ದೆಹಲಿ ಹೈಕೋರ್ಟ್ ಬಿಜೆಪಿ ನಾಯಕರ ವಿರುದ್ಧದ ನಿಷ್ಕ್ರಿಯತೆಯ ಬಗ್ಗೆ ಪೊಲೀಸರನ್ನು ಪ್ರಶ್ನಿಸಿತ್ತು. ಬಿಜೆಪಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಆದರೆ, ಈ ಎಲ್ಲಾ ಘಟನೆಗಳನ್ನು ಪ್ರಸ್ತುತ ಚಾರ್ಜ್‍ಶೀಟ್‍ನಲ್ಲಿ ಕೈಬಿಡಲಾಗಿದೆ. ಈ ಹಿಂದೆ ವಿಚಾರಣೆಯೊಂದರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಕೋಪಗೊಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಎರಡೇ ದಿನದಲ್ಲಿ ಆ ನ್ಯಾಯಾಧೀಶರನ್ನು ದೆಹಲಿಯಿಂದ ಹರಿಯಾಣಕ್ಕೆ ವರ್ಗಾಯಿಸಲಾಯಿತು.
ಮಂಗಳೂರು ಗಲಭೆ ಮತ್ತು ಗೋಲಿಬಾರ್ ಸಹ ಇದಕ್ಕಿಂತ ಭಿನ್ನವೇನಲ್ಲ. ಮಂಗಳೂರು ಗೋಲಿಬಾರ್ ನಡೆದ ಡಿಸೆಂಬರ್ 19 ಮತ್ತು ಅದರ ಹಿಂದಿನ ಕೆಲ ಪ್ರಮುಖ ಘಟನೆಗಳನ್ನು ತಾಳೆ ಹಾಕಿದರೆ ದೆಹಲಿಯಂತೆಯೇ ಇಲ್ಲೂ ಸಹ ಗಲಭೆ ಮತ್ತು ಗೋಲಿಬಾರ್ ಅನ್ನು ಉದ್ದೇಶಪೂರ್ವಕವಾಗಿಯೇ ನಡೆಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಮಂಗಳೂರು ಗೋಲಿಬಾರ್ ಅಸಲಿ ಕಥೆ
ಸಿಎಎ ಮಂಗಳೂರು ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ತನಿಖಾ ಸಂಸ್ಥೆ ಸುಮಾರು 8 ಚಾರ್ಜ್‍ಶೀಟ್‍ಗಳನ್ನು ಸಲ್ಲಿಸಿದೆ. ಈ ಚಾರ್ಜ್‍ಶೀಟ್‍ಗಳನ್ನು ಒಮ್ಮೆ ಅವಲೋಕಿಸಿದರೆ ಮಂಗಳೂರು ಗಲಭೆ ಮತ್ತು ಗೋಲಿಬಾರ್‍ನಲ್ಲಿ ಪ್ರಭುತ್ವ ಭಾಗಿಯಾಗಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.
ಅಸಲಿಗೆ ಡಿಸೆಂಬರ್ 19 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಸಿಎಎ ವಿರೋಧಿಸಿ ಪ್ರತಿಭಟಿಸಲು SKSSF ಸಂಘಟನೆ ಪ್ರಮುಖ ಮಂಗಳೂರು ಖಾಜಿ ಎಂಬವರು ಜಿಲ್ಲಾಧಿಕಾರಿ ಬಳಿ ಅನುಮತಿ ಕೋರಿ ಪತ್ರ ಬರೆದಿದ್ದರು. ಅದರಂತೆ ಅನುಮತಿಯೂ ನೀಡಲಾಗಿತ್ತು.
ಆದರೆ ದಿಢೀರ್ ಎಂದು ಮಂಗಳೂರು ಕಮಿಷನರ್ ಡಾ. ಹರ್ಷ ಡಿಸೆಂಬರ್ 18 ರಂದು ನಗರದಲ್ಲಿ ಯಾರೂ ಎಲ್ಲೂ ಪ್ರತಿಭಟನೆ ನಡೆಸುವಂತಿಲ್ಲ ಎಂದು ಉಲ್ಲೇಖಿಸಿ Section 144 144 ಅನ್ನು ಜಾರಿಗೊಳಿಸಿದ್ದರು. ಇದರಿಂದ ವಿಚಲಿತವಾಗಿದ್ದ SKSSFಈ ಸಂಘಟನೆ ಮರುದಿನ ದಿನಪತ್ರಿಕೆಯಲ್ಲಿ ತಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ.
ಆದರೆ, ಈ ವಿಚಾರ ತಿಳಿಯದ ಅನೇಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಡಿಸೆಂಬರ್ 19ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. Section 144 ಇದ್ದರೂ ಸಹ ಜನಸಾಮಾನ್ಯರು ಜಿಲ್ಲಾಧಿಕಾರಿ ಭವನಕ್ಕೆ ಆಗಮಿಸುವುದು ಸಾಮಾನ್ಯ. ಆದರೆ, ಈ ಸನ್ನಿವೇಶವನ್ನೇ ತಮಗೆ ಸಾಧನವಾಗಿ ಬಳಸಿಕೊಂಡ ಪೊಲೀಸ್ ಇಲಾಖೆ ಸುಮ್ಮನೆ ನಿಂತಿದ್ದ ಯುವಕರ ಗುಂಪಿನ ಮೇಲೆ ಏಕಾಏಕಿ ಲಾಠಿ ಚಾರ್ಚ್ ನಡೆಸಿದೆ.
ಪರಿಣಾಮ ಕ್ರೋಧಗೊಂಡ ಜನ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳಿಗೆ ನುಗ್ಗಿದ್ದ ಪೊಲೀಸರು ಮಸೀದಿಯ ಒಳಗಿದ್ದ ಜನರನ್ನು ಹೊರಗೆಳೆದು ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ, ಉರುವ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಶರೀಫ್ ಏಕಾಏಕಿ ರೈಫಲ್ ಟೀಮ್ ಕರೆಸಲು ಆಜ್ಞೆ ನೀಡಿದ್ದಾರೆ.
ಅಲ್ಲಿ ಬಿದ್ದಿತ್ತು ಎರಡು ಹೆಣ
ಪೊಲೀಸರು ಗೋಲಿಬಾರ್ ನಡೆಸುವ ಮುನ್ನ ಜನರಿಗೆ ಕನಿಷ್ಟ ಒಂದು ಎಚ್ಚರಿಕೆ ಸಂದೇಶ ರವಾನಿಸಬೇಕು ಎಂಬುದು ನಿಯಮ. ಆದರೆ, ಮಂಗಳೂರಿನಲ್ಲಿ ಗೋಲಿಬಾರ್ ನಡೆಸುವ ಮುನ್ನ ಕನಿಷ್ಟ ಒಂದು ಎಚ್ಚರಿಕೆಯನ್ನೂ ನೀಡದೆ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿದೆ. ಪರಿಣಾಮ ಜಲೀಲ್ ಮತ್ತು ನೌಶಾದ್ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು.2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪ ಸಿಎಂ ಆಗಿ ಎಂಟೇ ದಿನದಲ್ಲಿ ಇಬ್ಬರು ರೈತರ ಮೇಲೆ ಗೋಲಿಬಾರ್ ಆಗಿ ಸುದ್ದಿಯಾದಂತೆ ಮತ್ತೊಮ್ಮೆ ಸುದ್ದಿಯ ಕೇಂದ್ರದಲ್ಲಿದ್ದರು. ಹೀಗಾಗಿ ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಗೋಲಿಬಾರ್‍ನಿಂದ ಸಾವನ್ನಪ್ಪಿದವರು ಕಿಡಿಗೇಡಿಗಳು ಇವರಿಗೆ ಪಾಕಿಸ್ತಾನದ ನಂಟಿತ್ತು ಎಂಬ ಬಿಜೆಪಿ ನಾಯಕರ ಕಪೋಲಕಲ್ಪಿತ ಕತೆಗಳು ನಡೆದೇಇತ್ತು. ಅದನ್ನು ಭಿತ್ತರಿಸಲೂ ಸಹ ಕೆಲವು ಮಾಧ್ಯಮಗಳು ಬುಕ್ ಆಗಿದ್ದವು ಎಂಬುದೇ ವಾಸ್ತವ. ಛಿಆದರೆ, ಅಸಲಿಗೆ ಜಲೀಲ್ ಎಂಬ ವ್ಯಕ್ತಿ ಮನೆಯಿಂದ ಮಸೀದಿಗೆ ನಡೆದುಹೋಗುತ್ತಿದ್ದ ಸಂದರ್ಭದಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಈ ಸನ್ನಿವೇಶವನ್ನು ಸ್ವತಃ ಆತನ ಪತ್ನಿಯೇ ವಿಡಿಯೋ ತೆಗೆದಿದ್ದಾರೆ. ಈ ವಿಡಿಯೋದಲ್ಲಿ ಆತ ಮಸೀದಿಗೆ ತೆರಳುವಾಗ ಗುಂಡಿನ ದಾಳಿ ನಡೆದಿರುವುದು ಸ್ಪಷ್ಟವಾಗಿದೆ. ಆದರೆ, ಪ್ರಕರಣದ ತನಿಖೆ ನಡೆಸಿರುವ CID DYSP ಬಾಲಕೃಷ್ಣ ಮೃತರ ವಿರುದ್ಧವೇ ಎಫ್‍ಐಆರ್ ದಾಖಲಿಸಿ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ಪೊಲೀಸರ ಸಹಾಯಕ್ಕೆ ಬಂದವರ ಮೇಲೂ ಕೇಸ್
ಕರಾವಳಿ ಭಾಗದಲ್ಲಿ ಗಲಭೆ ಹೆಚ್ಚಾಗುತ್ತಿದ್ದಂತೆ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಅಶ್ರಫ್ ಅವರನ್ನು ಪೊಲೀಸರು ಕರೆಸಿದ್ದರು. ಅಲ್ಲದೆ, ಗಲಭೆಯಲ್ಲಿ ತೊಡಗಿರುವ ಜನರನ್ನು ಶಾಂತವಾಗುವಂತೆ ಮನವೊಲಿಸಿ ಕೋರಿಕೊಳ್ಳಲು ಅವರಲ್ಲಿ ಮನವಿ ಮಾಡಲಾಗಿತ್ತು.
ಇದರಂತೆ ಅಶ್ರಫ್ ಸಹ ಕೈನಲ್ಲಿ ಮೈಕ್ ಹಿಡಿದು ಮಸೀದಿ ಬಳಿಗೆ ತೆರಳಿದ್ದಾರೆ. ಜನ ಶಾಂತವಾಗಿರುವಂತೆ ಒತ್ತಾಯಿಸಿದ್ದಾರೆ. ಆದರೆ, ಅವರು ಮಾತನಾಡುತ್ತಿದ್ದ ವೇಳೆಯಲ್ಲೇ ಮತ್ತೊಮ್ಮೆ ಗುಂಡಿನ ದಾಳಿ ನಡೆಸಲಾಗಿದೆ. ಈ ವೇಳೆ ಅಶ್ರಫ್ ಅವರ ತಲೆಗೆ ಗುಂಡು ತಗುಲಿದೆ. ಇದಲ್ಲದೆ 7 ಜನರಿಗೆ ಗುಂಡಿನ ಏಟು ತಗುಲಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗದಿದ್ದರೂ, ಅಶ್ರಫ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಾರ್ಜ್‍ಶೀಟ್ ನಾಟಕ ಮತ್ತು ಪೊಲೀಸರ ಕಿರುಕುಳ
ಪೊಲೀಸರು ಯಾವಾಗ ತಮ್ಮ ನೆರವಿಗೆ ಬಂದ ಅಶ್ರಫ್ ಎಂಬ ವ್ಯಕ್ತಿಯ ಮೇಲೆಯೇ ಗುಂಡು ಹಾರಿಸಿದ್ದರೋ ಅಗಲೇ ಮಂಗಳೂರಿನ ಮುಸ್ಲಿಂ ಜನ ಪೊಲೀಸರ ವಿರುದ್ಧ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದರು. ಅಲ್ಲದೆ, ಪೊಲೀಸರ ವಿರುದ್ಧವೇ 16 ಪ್ರಕರಣಗಳನ್ನು ದಾಖಲಿಸಿದ್ದರು. ಮೃತ ಜಲೀಲ್ ಮತ್ತು ನೌಶಾದ್ ಕುಟುಂಬದವರು ಮಾನವ ಹಕ್ಕು ಆಯೋಗದ ಮೆಟ್ಟಿಲೇರಿದ್ದರು.
ಸ್ವಾತಂತ್ಯ್ರ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಮತ್ತು ಗುಂಡಿನೇಟು ತಿಂದಿದ್ದ ಮಾಜಿ ಮೇಯರ್ ಅಶ್ರಫ್ ಹೈಕೋರ್ಟ್‍ಗೆ ಪಿಎಲ್‍ಐ ಸಲ್ಲಿಸಿದ್ದಾರೆ. ಮಂಗಳೂರು ಗಲಭೆಗೆ ಪೊಲೀಸರೇ ಕಾರಣರಾಗಿದ್ದು, ಸ್ವತಂತ್ರ ತನಿಖಾ ತಂಡ ಈ ಕುರಿತು ತನಿಖೆ ನಡೆಸಬೇಕು ಎಂಬ ಮನವಿ ಮಾಡಿದ್ದಾರೆ.
ಆದರೆ, ಇದರ ಬೆನ್ನಿಗೆ ಚಾರ್ಜ್‍ಶೀಟ್ ಸಲ್ಲಿಸಿರುವ ಸಿಐಡಿ ಪೊಲೀಸರು 86 ಜನರ ಹೆಸರನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಪೊಲೀಸರ ವಿರುದ್ಧ ದೂರು ನೀಡಿದ ಅಶ್ರಫ್ ಸೇರಿದಂತೆ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಸುಮಾರು 26 ಜನರನ್ನು ಈ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಗೋಲಿಬಾರ್‍ನಲ್ಲಿ ಮೃತಪಟ್ಟ ಜಲೀಲ್ ಅವರ ಪತ್ನಿಯನ್ನು ತನಿಖೆ ನೆಪದಲ್ಲಿ ಪ್ರತಿನಿತ್ಯ ಪೊಲೀಸ್ ಠಾಣೆಗೆ ಕರೆಸಿ ಪೊಲೀಸರ ಮೇಲಿನ ದೂರನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪ್ರಕರಣಕ್ಕೆ ಸಂಬಂದಿಸಿದ 26 ಜನ ತಮ್ಮ ವಿರುದ್ಧ ನೀಡಿರುವ ಪ್ರಕರಣ ಹಿಂಪಡೆದರೆ ತಾವೂ ಅವರ ಹೆಸರನ್ನು ಚಾರ್ಜ್‍ಶೀಟ್‍ನಿಂದ ಕೈಬಿಡುವುದಾಗಿ ಪೊಲೀಸರು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಮಂಗಳೂರು ಗಲಭೆಗೆ ಮತ್ತು ಗೋಲಿಬಾರ್ ಮೂಲಕ ಇಬ್ಬರ ಸಾವಿಗೆ ಪೊಲೀಸರು ಮತ್ತು ಪ್ರಭುತ್ವ ಒಗ್ಗೂಡಿ ಭಾಗಿಯಾಗಿ ಕಾರಣವಾಗಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಮುಸ್ಲಿಂ ಜನರನ್ನು ವ್ಯವಸ್ಥಿತವಾಗಿ ಹಣಿಯಲು ಯಾವ ಹಂತಕ್ಕೂ ಇಳಿಯಲು ಸಿದ್ಧವಾಗಿರುವುದು ಸಹ ವೇದ್ಯವಾಗುತ್ತಿದೆ.


