ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದ ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಯು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ತಾಲೂಕು ಸೀಬಿ ದೇವಸ್ಥಾನದ ಸಮೀಪದ ಕೆಂಪರಾಯನ ಹಳ್ಳಿಯಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಕಾವಲುಗಾರನೊಬ್ಬ ಮಹಿಳೆಯನ್ನು ಎಳೆದಾಡುತ್ತಿದ್ದ ವೇಳೆ ರಕ್ಷಣೆಗೆ ಹೋದ ಆ ಮಹಿಳೆಯ ಪತಿಯ ಕೈ ಕಚ್ಚಿರುವ ಘಟನೆ ಜರುಗಿದೆ.
ಈ ಸಂಬಂಧ ರೈತ ಮಹಿಳೆ ಮತ್ತು ಆಕೆಯ ಪತಿ ಕೋರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮಹಿಳೆಯನ್ನು ಎಳೆದಾಡಿ ಅವಮಾನ ಮಾಡಿರುವುದು ಮತ್ತು ಮಾರಾಣಾಂತಿಕ ಹಲ್ಲೆ ಬಗ್ಗೆ FIR ದಾಖಲಾಗಿದೆ.
ತುಮಕೂರು ತಾಲೂಕು ಕೆಂಪರಾಯನಹಳ್ಳಿ ಸಮೀಪ ಸರ್ಕಾರಿ ಗೋಮಾಳ ಇದೆ. ಇಲ್ಲಿ 49 ಎಕರೆ ಭೂಮಿಯಲ್ಲಿ ಹತ್ತಾರು ಕುಟುಂಬಗಳು 1970 ರಿಂದಲೂ ಬಗರ್ ಹುಕುಂ ಸಾಗುವಳಿ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಿಂದ ಅರಣ್ಯ ಇಲಾಖೆ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಲೇ ಇದ್ದಾರೆ.
ತಮಗೆ ಹಂಚಿಕೆ ಮಾಡಿದ ಜಮೀನಿನಲ್ಲಿ ನರಸಿಂಹಮೂರ್ತಿ ಮತ್ತು ಲಕ್ಷ್ಮಮ್ಮ ಕುಟುಂಬ ಶೆಡ್ ನಿರ್ಮಾಣ ಮಾಡಿಕೊಂಡಿತ್ತು. ಜೂನ್ 30ರಂದು ಜಮೀನನ್ನು ಉಳುಮೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಶೆಡ್ ಮೇಲೆ ಹಾಕಿದ್ದ ತಗಡುಗಳನ್ನು ಕಿತ್ತುಹಾಕಿದ್ದಾರೆ. ಇದನ್ನು ತಡೆಯಲು ಬಂದ ಲಕ್ಷ್ಮಮ್ಮ ಅವರನ್ನು ಫಾರೆಸ್ಟ್ ಗಾರ್ಡ್ ಎಳೆದಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಫಾರೆಸ್ಟ್ ಗಾರ್ಡ್ ಬಸವರಾಜು ಎಳೆದಾಡಿದ ರಭಸಕ್ಕೆ ಲಕ್ಷ್ಮಮ್ಮ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದರು. ಈ ವೇಳೆ ಪತ್ನಿಯ ನೆರವಿಗೆ ಬಂದ ನರಸಿಂಹಮೂರ್ತಿ ಬಲಗೈ ಅಂಗೈಗೆ ಫಾರೆಸ್ಟ್ ಗಾರ್ಡ್ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ಆಪಾದಿಸಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕರಾದ ಸಿ. ಅಜ್ಜಪ್ಪ ಮತ್ತು ಬಿ.ಉಮೇಶ್ ಅರಣ್ಯ ಸಿಬ್ಬಂದಿಯ ಕ್ರಮವನ್ನು ಪ್ರಶ್ನಿಸಿದರು. ಹಲ್ಲೆಗೊಳಗಾದ ಲಕ್ಷ್ಮಮ್ಮ ಮತ್ತು ನರಸಿಂಹಮೂರ್ತಿ ಅವರನ್ನು ಕರೆದುಕೊಂಡು ಬಂದು ಕೋರಾ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಾನುಗೌರಿ.ಕಾಂ ಜೊತೆ ಮೊಬೈಲ್ ನಲ್ಲಿ ಮಾತನಾಡಿದ ಸಂಚಾಲಕ ಸಿ.ಅಜ್ಜಪ್ಪ, ಸರ್ಕಾರಿ ಗೋಮಾಳದಲ್ಲಿ ಸಾಗುವಳಿದಾರರಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಹತ್ತಕ್ಕೂ ಹೆಚ್ಚು ಕುಟುಂಬಗಳು ಸಾಗುವಳಿ ಮಾಡಿಕೊಂಡು ಬರುತ್ತಿವೆ. 98, 99ರಡಿ ರೈತರ ಹೆಸರಿನಲ್ಲಿ ಪಹಣಿಗಳು ಬರುತ್ತಿವೆ. ಅದರಲ್ಲಿ ಗೋಮಾಳ ಎಂದು ಇದ್ದು ಉಳುಮೆ ಮಾಡಿಕೊಂಡು ಬರುತ್ತಿರುವ ಸಾಗುವಳಿದಾರರ ಹೆಸರುಗಳು ಇವೆ. ಹಾಗಿದ್ದರೂ ಅರಣ್ಯ ಇಲಾಖೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ. ಅರಣ್ಯ ಇಲಾಖೆಯ ಬಳಿ ಯಾವುದೇ ದಾಖಲೆ ಇಲ್ಲ. ಇಲ್ಲಿ ಉಳುಮೆ ಮಾಡುತ್ತಿರುವವರು ಬಡವರು, ಭೂರಹಿತರು, ಅತಿಸಣ್ಣ ರೈತರು. ಅರಣ್ಯ ಇಲಾಖೆ ಅನಗತ್ಯ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದರು.
ಸಹಸಂಚಾಲಕ ಬಿ.ಉಮೇಶ್ ಮಾತನಾಡಿ ಗೋಮಾಳದಲ್ಲಿ ಒಂದೇ ಒಂದು ಮರಗಿಡ ಇಲ್ಲ. ಸರ್ಕಾರಿ ಗೋಮಾಳದಲ್ಲಿ ಉಳುಮೆ ಮಾಡಬಹುದೆಂಬ ಸರ್ಕಾರದ ಅದೇಶವಿದೆ. ಭೂಮಿ ಹಂಚಿಕೆ ಮಾಡಿದ್ದಾರೆ. ಬೆಳೆಯು ಬೆಳೆಯುತ್ತಿದ್ದಾರೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿ ರೈತ ಮಹಿಳೆಯನ್ನು ಎಳೆದಾಡಿ ಅವಮಾನ ಮಾಡಿದ್ದಾರೆ. ಆ ಮಹಿಳೆ ಪ್ರಜ್ಞೆ ತಪ್ಪಿದಾಗ ಪತಿ ನರಸಿಂಹಮೂರ್ತಿ ನೆರವಿಗೆ ಹೋಗಿದ್ದಾರೆ. ಆಗ ಫಾರೆಸ್ಟ್ ಗಾರ್ಡ್ ಬಸವರಾಜು ಕೈಕಚ್ಚಿ ಗಾಯಗೊಳಿಸಿದ್ದು ಇದನ್ನು ಪ್ರಾಂತ ರೈತ ಸಂಘ ಖಂಡಿಸುತ್ತದೆ ಎಂದರು.
ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ಅನುಭವಿಸುವಂತೆ ಆಗಿದೆ. ನಾವು ಹಿಂದೆ ಹಾಕಿದ್ದ ಗುಡಿಸಲನ್ನು ಸುಟ್ಟುಹಾಕಿದ್ದರು. ಈಗ ಶೆಡ್ ಕೆಡವಿಹಾಕಿದ್ದಾರೆ. ಹೊಲ ಉಳುಮೆ ಮಾಡಲು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಇದನ್ನು ತಪ್ಪಿಸಬೇಕು ಎಂದು ಬಗರ್ ಹುಕುಂ ಸಾಗುವಳಿದಾರ ರೈತರು ಮನವಿ ಮಾಡಿದ್ದಾರೆ.
ಕುರಿಗಾಹಿಗೆ ಕೊರೊನಾ – ಕುರಿಗಳಿಗೆ ಕ್ವಾರಂಟೈನ್! ಪ್ರಾಣಿಗಳಿಗೆ ಕೊರೊನಾ ಬರೋಲ್ಲವೆಂದ ಪಶುವೈದ್ಯ ಇಲಾಖೆ


