ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟದಲ್ಲಿ ದಲಿತ ಯುವಕ ಜಯಕುಮಾರ್ ಅವರ ಆಪಾದಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಓರ್ವ ಕೆಳ ಹಂತದ ಅಧಿಕಾರಿಯನ್ನು ಗುರುವಾರ (ಜೂ.5) ಅಮಾನತು ಮಾಡಿತ್ತು. ಇಂದು ಆರೋಪಿ ಅನಿಲ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆಯನ್ನು ಇದೇ ತಿಂಗಳ 9 ಕ್ಕೆ ಮುಂದೂಡಲಾಗಿದೆ.
ಆರೋಪಿ ಅನಿಲ್ ಕುಮಾರ್ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಹಿರಿಯ ವಕೀಲರಾದ ಬಿ.ಟಿ. ವೆಂಕಟೇಶ್ ಸವಿಸ್ತಾರವಾಗಿ ವಾದ ಮಂಡಿಸಿ, ನ್ಯಾಯಾಧೀಶರು ಮತ್ತು ಎದುರಾಳಿ ವಕೀಲರುಗಳಿಗೆ ಜಯಕುಮಾರ್ ಅವರನ್ನು ಸುಟ್ಟು ಕೊಲೆ ಮಾಡಿದ್ದ ವಿಡಿಯೊ ಪ್ತೋರಿಸಿದರು. ವಕೀಲರ ವಾದವನ್ನು ಪೂರ್ಣವಾಗಿ ಆಲಿಸಿದ ನ್ಯಾಯಾಧೀಶರು, 9ನೇ ತಾರೀಕಿಗೆ ವಿಚಾರಣೆ ಮುಂದೂಡಿದರು.
ಮೃತ ಜಯಕುಮಾರ್ ಪತ್ನಿ ಲಕ್ಷ್ಮಿ ಮತ್ತು ಕುಟುಂಬದ ಸದಸ್ಯರು, ಕೆ.ಆರ್ ಪೇಟೆಯ ದಸಂಸ ನಾಯಕರು, ಮಂಡ್ಯದ ಜನಪರ ಹಿರಿಯ ವಕೀಲರಾದ ಬಿ.ಟಿ.ವಿಶ್ವನಾಥ್, ಬಿ.ಟಿ. ವೆಂಕಟೇಶ್ ಅವರ ಸಹೋದ್ಯೋಗಿ ಕಿರಿಯ ವಕೀಲರಾದ ಶಂಕರ್, ಜನಶಕ್ತಿಯ ಪೂರ್ಣಿಮಾ ಸೇರಿದಂತೆ ಹಲವರು ಇದ್ದರು.


