ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶೀಶ್ ಮಿಶ್ರಾನಿಗೆ (ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ) ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮುಖಂಡರು ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ನರೇಂದ್ರ ಮೋದಿಯವರು ಫೆಬ್ರವರಿ 14ರಂದು ಜಲಂಧರ್‌ಗೆ ಭೇಟಿ ನೀಡಿದ್ದಾರೆ.
ಫೆಬ್ರವರಿ 16ರಂದು ಪಠಾಣ್‌ಕೋಟ್ ಮತ್ತು ಫೆಬ್ರವರಿ 18ರಂದು ಅಬೋಹರ್‌ಗೆ ಪ್ರಧಾನಿ ಭೇಟಿ ನೀಡಲಿದ್ದು, ಈ ವೇಳೆ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವುದಾಗಿ ಎಸ್‌ಕೆಎಂ ನಾಯಕರು ಘೋಷಿಸಿದರು. ರೈತ ಸಂಘಗಳ ಒಕ್ಕೂಟವಾದ ಎಸ್‌ಕೆಎಂ ದೆಹಲಿಯ ಗಡಿಯಲ್ಲಿ ವರ್ಷವಿಡೀ ನಡೆದ ರೈತ ಚಳವಳಿಯ ನೇತೃತ್ವ ವಹಿಸಿತ್ತು.
ಪಂಜಾಬ್ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರಗಳು ನಡೆಯುತ್ತಲಿವೆ. ಮೋದಿ ಮತ್ತು ಇತರ ಹಿರಿಯ ಬಿಜೆಪಿ ನಾಯಕರು ಚುನಾವಣಾ ರ್‍ಯಾಲಿಗಳಿಗಾಗಿ ಪಂಜಾಬ್‌ಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 20ರಂದು ಪಂಜಾಬ್ ಚುನಾವಣೆ ನಡೆಯಲಿದೆ.
ನವೆಂಬರ್ 19, 2021ರಂದು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಪ್ರಧಾನಿ ಮೋದಿಯವರು ಎರಡನೇ ಬಾರಿಗೆ ಪಂಜಾಬ್‌ಗೆ ಭೇಟಿ ನೀಡಿರುವುದು ವಿಶೇಷ. ಪ್ರಧಾನಿಯವರು ಜನವರಿ 5ರಂದು ಫಿರೋಜ್‌ಪುರದಲ್ಲಿ ಬಿಜೆಪಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲು ನಿರ್ಧರಿಸಿದ್ದರು. ಪ್ರತಿಭಟನೆಯ ಕಾರಣ ರ್‍ಯಾಲಿಯನ್ನು ರದ್ದು ಮಾಡಿದ್ದರು.
ಪಂಜಾಬ್ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಇತರ ಹಿರಿಯ ನಾಯಕರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ಮತ್ತು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಎಸ್‌ಕೆಎಂ ಮುಖಂಡರು ತಿಳಿಸಿದ್ದಾರೆ. ಈ ಬಗ್ಗೆ ಎಸ್ ಕೆಎಂ ಪೋಸ್ಟರ್ ಕೂಡ ಬಿಡುಗಡೆ ಮಾಡಿದೆ.
ಇದನ್ನೂ ಓದಿರಿ: ಯುಪಿ: ಚುನಾವಣಾ ಅಧಿಕಾರಿಯ ಕೆನ್ನೆಗೆ ಹೊಡೆದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್
ದಿ ವೈರ್‌ನೊಂದಿಗೆ ಮಾತನಾಡಿರುವ ಪಂಜಾಬ್‌ನ ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ನಾಯಕರಾದ ದರ್ಶನ್ ಪಾಲ್, “ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರೂ ಆಶೀಶ್ ಮಿಶ್ರಾನಿಗೆ ಜಾಮೀನು ನೀಡಲಾಗಿದೆ. ಅದರ ವಿರುದ್ಧ ನಮ್ಮ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಲಾಗುವುದು. ಫಿರೋಜ್‌ಪುರಕ್ಕೆ ಪಿಎಂ ಮೋದಿ ಭೇಟಿಯನ್ನು ವಿರೋಧಿಸಿ ಪ್ರತಿಭಟಿಸಿದ ರೈತರಿಗೆ ನೀಡಲಾದ ಕಿರುಕುಳ ಖಂಡಿಸಲಾಗುವುದು. ಎಂಎಸ್‌ಪಿ ಸಮಿತಿಯನ್ನು ರಚಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಅದನ್ನು ಪ್ರಶ್ನಿಸಲಾಗುತ್ತಿದೆ. ಯುಪಿ, ಹರಿಯಾಣ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ರೈತರ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು” ಎಂದು ತಿಳಿಸಿದ್ದಾರೆ.
ಫೆಬ್ರವರಿ 14ರಂದು ಗ್ರಾಮಗಳಲ್ಲಿ ಮೋದಿಯವರ ಪ್ರತಿಕೃತಿಯನ್ನು ದಹಿಸಲಿದ್ದಾರೆ. ಫೆಬ್ರವರಿ 16ರಂದು ಪಂಜಾಬ್‌ನಲ್ಲಿ ಜಿಲ್ಲಾ ಮತ್ತು ತಹಸಿಲ್ ಮಟ್ಟದಲ್ಲಿ ಎಸ್‌ಕೆಎಂ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಪಾಲ್ ಹೇಳಿದ್ದಾರೆ.
ಪ್ರಧಾನಿ ಭೇಟಿಗೂ ಮುನ್ನ ರೈತರ ಬೇಡಿಕೆಗಳನ್ನು ಈಡೇರಿಸುವ ಘೋಷಣೆ ಮಾಡಿದರೆ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಎಸ್‌ಕೆಎಂ ಹಿಂಪಡೆಯಬಹುದು ಎಂದು ರೈತ ಸಂಘದ ಹಿರಿಯ ಮುಖಂಡರು ತಿಳಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಜನವರಿ 5ರಂದು ಫಿರೋಜ್‌ಪುರದ ಪ್ಯಾರಿಯಾನಾ ಗ್ರಾಮದಲ್ಲಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ್ದ BKU ಕ್ರಾಂತಿಕಾರಿ ಅಧ್ಯಕ್ಷ ಸುರ್ಜಿತ್ ಸಿಂಗ್ ಫೂಲ್, “ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (SIT) ಲಖಿಂಪುರ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾ ತಪ್ಪಿತಸ್ಥ ಎಂದು ಘೋಷಿಸಿದೆ. ಗಂಭೀರ ಆರೋಪಗಳನ್ನು ಸಾಬೀತುಪಡಿಸಲು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಜಾಮೀನು ನೀಡಲಾಗಿದೆ. ಸರ್ಕಾರ ನಮ್ಮ ಗಾಯದ ಮೇಲೆ ಉಪ್ಪು ಸವರುತ್ತಿದೆ” ಎಂದಿದ್ದಾರೆ.
ಫಿರೋಜ್‌ಪುರದಲ್ಲಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದ ರೈತರ ವಿರುದ್ಧದ ಎಫ್‌ಐಆರ್‌ಗಳ ಕುರಿತು ಮಾತನಾಡಿದ ಫೂಲ್, “ಫಿರೋಜ್‌ಪುರ ಜಿಲ್ಲೆಯ ಕುಲ್ಗಡಿ ಪೊಲೀಸ್ ಠಾಣೆಯಲ್ಲಿ 150 ಅಪರಿಚಿತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈಗ ಪಂಜಾಬ್ ಪೊಲೀಸರು ಜಾಮೀನು ಪಡೆಯುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ನಾವು ಪೊಲೀಸರ ಮೊರೆ ಹೋಗಿ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರಾಕರಿಸಿದ್ದೇವೆ. ನಮ್ಮ ಯೂನಿಯನ್ ಸದಸ್ಯರನ್ನು ಬಂಧಿಸಿದರೆ ನಾವು ಪ್ರತಿಭಟನೆಗಳನ್ನು ನಡೆಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿರಿ: ಬಂಗಾಳ ಪುರಸಭೆ ಚುನಾವಣೆ: ನಾಮಪತ್ರ ಹಿಂಪಡೆದಿದ್ದ ಮೂವರು ಬಿಜೆಪಿ ನಾಯಕರು ಟಿಎಂಸಿ ಸೇರ್ಪಡೆ


