ಕಳೆದ ವಾರ ಸಿಂಘು ಗಡಿಯ ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಂಧಿಸಿದ್ದ ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ಅವರಿಗೆ ದೆಹಲಿಯ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಕಾರವಾನ್ ನಿಯತಕಾಲಿಕೆಯಲ್ಲೂ ಬರೆಯುತ್ತಿರುವ ಮಂದೀಪ್ ಪುನಿಯಾ ಅವರನ್ನು, ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ಕೆಟ್ಟದಾಗಿ ವರ್ತಿಸಿದ ಆರೋಪವನ್ನು ಹೊರಿಸಲಾಗಿತ್ತು.
“ಕಾನೂನು ವ್ಯವಸ್ಥೆಯ ಮೂಲಭೂತ ತತ್ವದ ಪ್ರಕಾರ ಜಾಮೀನು ನೀಡುವುದು ನಿಯಮವಾಗಿದ್ದು, ಜೈಲಿಗೆ ಕಳುಹಿಸುವುದು ಒಂದು ಅಪವಾದವಾಗಿದೆ” ಎಂದು ಕೋರ್ಟ್ ಹೇಳಿದೆ.
ಜಾಮೀನು ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ್ದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವೀರ್ ಸಿಂಗ್ ಲಂಬಾ ಅವರು ಆದೇಶವನ್ನು ಕಾಯ್ದಿರಿಸಿದ್ದರು. ಕರಾಳ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಗು ಗಡಿಯಲ್ಲಿ ಪ್ರತಿಭಟನಾಕಾರರನ್ನು ಪ್ರಚೋದಿಸಲು ಮತ್ತು ಗೊಂದಲವನ್ನು ಉಂಟುಮಾಡಲು ಪುನಿಯಾ ಪ್ರಯತ್ನಿಸಬಹುದು ಎಂದು ದೆಹಲಿ ಪೊಲೀಸರು ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸಿದ್ದರು.
ಇದನ್ನೂ ಓದಿ: ಪತ್ರಕರ್ತರ ಬಂಧನ: ದೆಹಲಿ ಪೊಲೀಸರ ವಿರುದ್ಧ ಭುಗಿಲೆದ್ದ ಪ್ರತಿಭಟನೆ
ಶನಿವಾರ ಸಂಜೆ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದ ಜನರ ಗುಂಪಿನಲ್ಲಿ ಇವರಿದ್ದರು ಎಂದು ಆರೋಪಿಸಿರುವ ಪೊಲೀಸರೊಬ್ಬರ ದೂರಿನ ಆಧಾರದ ಮೇಲೆ ಪುನಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಭಾನುವಾರ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದು, ಪತ್ರಕರ್ತರಿಗೆ ಯಾವುದೇ ಭಯವಿಲ್ಲದೆ ವರದಿ ಮಾಡಲು ಅವಕಾಶ ನೀಡುವಂತೆ ಪೊಲೀಸರಿಗೆ ಕರೆ ನೀಡಿತ್ತು. ಈಮಧ್ಯೆ, ಭಾನುವಾರ ದೆಹಲಿಯ ಪತ್ರಕರ್ತರು ಅವರ ಬಂಧನದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಮತ್ತೊಬ್ಬ ಪತ್ರಕರ್ತ ಆನ್‌ಲೈನ್ ನ್ಯೂಸ್ ಇಂಡಿಯಾದ ಧರ್ಮೇಂದರ್ ಸಿಂಗ್ ಅವರನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಅವರನ್ನು ಭಾನುವಾರ ಬೆಳಿಗ್ಗೆ ಬಿಡುಗಡೆ ಮಾಡಲಾಯಿತು. ಗಣರಾಜ್ಯೋತ್ಸವದಂದು ನಡೆದ ರೈತರ ಟ್ರಾಕ್ಟರ್ ರ್‍ಯಾಲಿಯಲ್ಲಿ ಪ್ರತಿಭಟನಾಕಾರ ಯುವಕನೊಬ್ಬ ಮೃತಪಟ್ಟಿದ್ದರು. ಈ ಕುರಿತು ಹಲವು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಸ್ಟ್‌ಗಳ ಬಗ್ಗೆ ವಿವಿಧ ರಾಜ್ಯಗಳಲ್ಲಿ ಪತ್ರಕರ್ತರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ರೈತರ ಪರ ವರದಿ ಮಾಡಿದ ಪತ್ರಕರ್ತೆಗೆ ಅತ್ಯಾಚಾರ, ಕೊಲೆ ಬೆದರಿಕೆ: ಎಬಿವಿಪಿ ಸದಸ್ಯನ ಬಂಧನ
ವಿಧಾನ ಸಭಾ ಅಧಿವೇಶನದ ಯೂಟ್ಯೂಬ್ ಲೈವ್►►


