ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಪ್ರಕರಣದಲ್ಲಿ ಅಮಾಯಕರನ್ನು ಅಕ್ರಮವಾಗಿ ಬಂಧಿಸಿದ್ದ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಮಾಹಿತಿದಾರರ ಸುಳಿವು ಆಧರಿಸಿ ಅಮಾಯಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಕರಣದಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಶ್ರೀಧರ್ ಗುಗ್ರಿ, ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಎಸ್‌ಕೆ ರಾಜು ಮತ್ತು ಕಾನ್‌ಸ್ಟೆಬಲ್‌ಗಳಾದ ಸತೀಶ್ ಬಗಲಿ ಮತ್ತು ತಿಮ್ಮಣ್ಣ ಪೂಜಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಪ್ರಸ್ತುತ ಸಂವಿಧಾನದ ಅಡಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧ್ಯವಿಲ್ಲ: ಪಿ. ಚಿದಂಬರಂ
ಹಲವು ವರ್ಷಗಳಿಂದ ಮಾಹಿತಿದಾರರಾಗಿದ್ದ ರಾಜನ್ ನೀಡಿದ ಸುಳಿವಿನ ಆಧಾರದ ಮೇಲೆ ಆಗಸ್ಟ್ 9 ರಂದು ಬನಶಂಕರಿ ಪೊಲೀಸರು ಕಡೇನಹಳ್ಳಿ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ದ್ವಿಚಕ್ರ ವಾಹನದಲ್ಲಿ ಬಚ್ಚಿಟ್ಟಿದ್ದ 400 ಗ್ರಾಂಗೂ ಅಧಿಕ ಮಾದಕ ದ್ರವ್ಯವನ್ನು ಪೊಲೀಸರು ವಶಪಡಿಸಿಕೊಂಡು, ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಎಂದು ವರದಿ ಹೇಳಿವೆ.
ಇದಾದ ಬಳಿಕ ಆರೋಪಿಯ ಕುಟುಂಬದವರು ಮಾಹಿತಿದಾರ ರಾಜನ್ ಅವರ ಮೇಲೆ ಶಂಕೆ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ತನಿಖೆಯ ವೇಳೆ ರಾಜನ್‌ಗೆ ಇಬ್ಬರು ಆರೋಪಿಗಳ ಮೇಲೆ ವೈಯಕ್ತಿಕ ದ್ವೇಷವಿದ್ದು, ಅವರನ್ನು ಸಿಲುಕಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ನೇಹಿತ ಚೈತ್ರ ಅವರ ಸಹಾಯದಿಂದ ಅವರು ಅಮಾಯಕ ಆರೋಪಿಗಳ ದ್ವಿಚಕ್ರ ವಾಹನದಲ್ಲಿ ಡ್ರಗ್ಸ್ ಅನ್ನು ಇಟ್ಟು, ನಂತರ ಪೊಲೀಸರಿಗೆ ಸುಳಿವು ನೀಡಿದ್ದರು. ಪೊಲೀಸರು ರಾಜನ್ ಮಾಹಿತಿಯನ್ನು ಪರಿಶೀಲಿಸದೆ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.
ರಾಜನ್ ವಿರುದ್ಧದ ದೂರಿನ ಆಧಾರದ ಮೇಲೆ ಡಿಸಿಪಿ (ದಕ್ಷಿಣ), ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ಎಸಿಪಿ ಸೆಪ್ಟೆಂಬರ್ 12 ರಂದು ವರದಿ ಸಲ್ಲಿಸಿದ್ದು, ವರದಿಯಲ್ಲಿ ರಾಜನ್ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಬೆಳವಣಿಗೆಯ ನಂತರ ರಾಜನ್ ಮತ್ತು ಚೈತ್ರ ಅವರನ್ನು ಸಹ ಬಂಧಿಸಲಾಗಿದ್ದು, ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.
ವಿಡಿಯೊ ನೋಡಿ: ಒಕ್ಕೂಟ ವ್ಯವಸ್ಥೆ ಮಣ್ಣು ಮುಕ್ಕಿದೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ಮೀನಾಕ್ಷಿ ಬಾಳಿ ಮಾತುಗಳು


