ಶನಿವಾರ (ಫೆಬ್ರವರಿ 13) ದೇಶದ್ರೋಹ ಆರೋಪದ ಮೇಲೆ ಬಂಧನವಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿಯವರ ಮೇಲೆ ದೆಹಲಿ ಪೊಲೀಸರು ನಿಗಾ ಇಟ್ಟಿದ್ದರು ಮತ್ತು ಬಂಧನಕ್ಕೆ ಸಂಪೂರ್ಣ ಸಿದ್ಧರಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ದಿಶಾ ಅವರನ್ನು ದೆಹಲಿ ಪೊಲೀಸರು ಬಂಧಿಸಿ ಆಕೆಯನ್ನು ವಿಮಾನ ಹತ್ತಿಸುವ ತನಕವೂ ಬೆಂಗಳೂರಿನ ಸ್ಥಳಿಯ ಪೊಲೀಸರಿಗಾಗಲೀ, ರಾಜ್ಯ ಸರ್ಕಾರಕ್ಕಾಗಲೀ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂಬುದು ಈ ಬಹು ಚರ್ಚಿತ ವಿಷಯವಾಗಿದೆ. ಇದರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ರಾಜ್ಯಕ್ಕೆ ಮತ್ತು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೇ ವ್ಯಕ್ತಿಯೊಬ್ಬರನ್ನು ಬಂಧಿಸುವಂತೆ ಕ್ರಮ ತೆಗೆದುಕೊಂಡಿರುವ ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹಲವರು ಟೀಕೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಈ ಪ್ರಕರಣದಲ್ಲಿ ರಾಜ್ಯಸರ್ಕಾರ ಇನ್ನೂ ಈ ವಿಚಾರಕ್ಕೆ ಪ್ರತಿಕ್ರಿಯಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಇಬ್ಬರು ಮಹಿಳಾ ಸಿಬ್ಬಂದಿ ಸೇರಿದಂತೆ ಐವರು ಸದಸ್ಯರ ಪೊಲೀಸ್ ತಂಡ ಬೆಂಗಳೂರಿಗೆ ಆಗಮಿಸಿದೆ ಎಂದು ನಗರ ಪೊಲೀಸ್ ಮೂಲಗಳು ತಿಳಿಸಿವೆ. ತಂಡವು ನೇರವಾಗಿ ದಿಶಾ ವಾಸಿಸುತ್ತಿರುವ ಬೆಂಗಳೂರು ಉತ್ತರದ ಅಬ್ಬಿಗರೆ, ಚಿಕ್ಕಬಾಣಾವರ ಪ್ರದೇಶಕ್ಕೆ ತೆರಳಿತು. ಆದರೆ ಅವರು ತಕ್ಷಣ ದಿಶಾ ಮನೆಗೆ ಪ್ರವೇಶಿಸಲಿಲ್ಲ. ಆಕೆಯ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ದಿಶಾ ಮನೆಯಲ್ಲಿದ್ದಾಳೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ದಿಶಾ ರವಿ ಸ್ಥಾಪಿಸಿರುವ ‘Fridays For Future’ ಸಂಸ್ಥೆಯ ಬಗ್ಗೆ ಗೊತ್ತೆ?
“ಮೊದಲು, ಕಾರಿನಲ್ಲಿದ್ದ ಮೂವರು ಈ ಪ್ರದೇಶಕ್ಕೆ ಭೇಟಿ ನೀಡಿದ್ದು, ಹೊರಡುವ ಮೊದಲು ಮನೆ ಮತ್ತು ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ” ಎಂದು ಮೂಲಗಳು ತಿಳಿಸಿವೆ. ನಂತರ ಈ ಮೂವರು ಇಬ್ಬರು ಮಹಿಳಾ ಪೊಲೀಸರೊಂದಿಗೆ ಮತ್ತೆ ದಿಶಾಳ ಮನೆಗೆ ಬಂದಿದ್ದಾರೆ. ಮಹಿಳಾ ಪೊಲೀಸರು ಬಾಗಿಲು ಬಡಿದು ಮನೆಯೊಳಗೆ ಪ್ರವೇಶಿಸುವಾಗ ಮೂವರು ಹೊರಗೆ ನಿಂತಿದ್ದರು. ಸ್ವಲ್ಪ ಸಮಯದ ನಂತರ, ಇಬ್ಬರು ಪುರುಷರೂ ಮನೆಯೊಳಗೆ ಪ್ರವೇಶಿಸಿ ಸಂಜೆ 5 ರೊಳಗೆ ಬಂಧನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ದೆಹಲಿಯ ಸ್ಥಳೀಯ ನ್ಯಾಯಾಲಯವೊಂದು ನೀಡಿದ ಐಡಿ ಕಾರ್ಡ್‌ಗಳು ಮತ್ತು ಬಂಧನದ ವಾರಂಟ್ ಪ್ರತಿಯನ್ನು ತೋರಿಸಿದ ನಂತರವೇ ದಿಶಾ ಮತ್ತು ಆಕೆಯ ತಾಯಿ ಪೊಲೀಸರನ್ನು ಮನೆಯ ಒಳಗೆ ಅನುಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿಶಾಳನ್ನು ವಶಕ್ಕೆ ಪಡೆದ ನಂತರ ತಂಡದ ಇಬ್ಬರು ಆಕೆಯ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಬಂದಿದ್ದಾರೆ. ಇನ್ನೊಬ್ಬ ಪೊಲೀಸ್ ಸಂಪೂರ್ಣ ವಿಚಾರಣೆಯನ್ನು ದಾಖಲಿಸಿದ್ದಾರೆ. ನಂತರ ದಿಶಾಳ ತಾಯಿ ಮಂಜುಳಾ ಅವರ ಬಳಿ ಈ ಪ್ರಕರಣ ಮತ್ತು ಬಂಧನದ ಬಗ್ಗೆ ಖಚಿತಪಡಿಸುವ ದಾಖಲೆಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜನರಿಂದ ಲೂಟಿ ಮಾಡಿ, ಕೇವಲ ‘ಇಬ್ಬರ’ ವಿಕಾಸ: ಎಲ್‌ಪಿಜಿ ದರ ಏರಿಕೆ ವಿರುದ್ದ ರಾಹುಲ್…
“ಸಂಜೆ 5.30 ರ ಸುಮಾರಿಗೆ ಪೊಲೀಸರ ತಂಡವು ದಿಶಾಳೊಂದಿಗೆ ವಿಮಾನ ನಿಲ್ದಾಣಕ್ಕೆ ತಲುಪಿತು. ಮಹಿಳಾ ಪೊಲೀಸರು ದಿಶಾಳ ತಾಯಿಗೆ ಆಕೆಯ ಕೆಲವು ಬಟ್ಟೆಗಳನ್ನು ಪ್ಯಾಕ್ ಮಾಡಿಸಿಕೊಂಡರು. ಆಕೆಯ ತಾಯಿ ಕೆಲವು ಹಣ್ಣುಗಳು ಮತ್ತು ದಿಶಾ ಬಳಸುವ ಇತರ ಔಷಧಿಗಳನ್ನು ಸಹ ಪ್ಯಾಕ್ ಮಾಡಿಕೊಟ್ಟಿದ್ದಾರೆ” ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ನಂತರ ಪೊಲೀಸರ ತಂಡವು ಎರಡು ಭಾಗಗಳಾಗಿ ವಿಭಜಿತಗೊಂಡು, ಒಂದು ತಂಡವು ದಿಶಾಳನ್ನು ಕರೆದುಕೊಂಡು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದರು. ಮತ್ತೊಂದು ತಂಡವು ಸೋಲದೇವನಹಳ್ಳಿ ವ್ಯಾಪ್ತಿಯ ಪೊಲೀಸರನ್ನು ಭೇಟಿ ಮಾಡಿ ಬಂಧನದ ಬಗ್ಗೆ ಅಧಿಕೃತವಾಗಿ ತಿಳಿಸಲು ಹೊರಟರು. ಈ ವಿಷಯ ತಿಳಿದ ನಂತರ ದಿಶಾಳ ಮನೆಯ ಬಳಿಯ ಪರಿಸ್ಥಿಯನ್ನು ಗಮನಿಸಲು ಸ್ಥಲೀಯ ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುವ ಹೊಯ್ಸಳ ತಂಡವನ್ನು ಕಳುಹಿಸಿದರು ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಇದನ್ನೂ ಓದಿ: 3ರಲ್ಲಿ 2 ಪ್ರಕರಣಗಳಲ್ಲಿ ಜಾಮೀನು ಪಡೆದ ದಲಿತ ಹೋರಾಟಗಾರ್ತಿ ನೊದೀಪ್ ಕೌರ್
ಅಂದರೆ ದಿಶಾಳ ಬಂಧನವೆಲ್ಲಾ ಮುಗಿದ ನಂತರ ವಿಮಾನ ನಿಲ್ದಾಣಕ್ಕೆ ತೆರಳುವಾಗಲಷ್ಟೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೆ ಅಲ್ಲದೇ ಈ ಪ್ರಕರಣದಲ್ಲಿ ಯಾವುದೇ ನೋಟಿಸ್ ಆಗಲೀ ಅಥವಾ ವಾರೆಂಟ್ ಆಗಲಿ ನೀಡಿರುವುದಿಲ್ಲ. ಹಾಗಾಗಿ ಈ ಬಂಧನವು ಕಾನೂನು ಬಾಹಿರವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ದಿಶಾಳನ್ನು ಬಂಧಿಸರು ದೆಹಲಿ ಪೊಲೀಸರು ತೆಗೆದುಕೊಂಡ ಶ್ರಮವನ್ನು ನೋಡಿದರೆ ಒಬ್ಬ ಭಯೋತ್ಪಾದಕನನ್ನು ಹೊಂಚುಹಾಕಿ ಹಿಡಿಯುವ ರೀತಿಯಲ್ಲಿ ಯೋಜನೆಯನ್ನು ರೂಪಿಸಿದ್ದಾರೆ ಎಂದು ಹಲವಾರು ಜನ ಆರೋಪಿಸಿದ್ದಾರೆ. ಹಾಗಾಗಿ ದಿಶಾ ಬಂಧನವಾಗಿಲ್ಲ ಬದಲಿಗೆ ಅಪಹರಿಸಲ್ಪಟ್ಟಿದ್ದಾಳೆ ಎಂದು ದೂರಿದ್ದಾರೆ.
ಅಷ್ಟಕ್ಕೂ ದಿಶಾ ಹಂಚಿಕೊಂಡಿರುವ ಟೂಲ್‌ಕಿಟ್‌ನಲ್ಲಿ, “ರೈತರ ಹೋರಾಟವನ್ನು ತೀವ್ರಗೊಳಿಸಲು ಏನು ಮಾಡಬಹದು? ನಾವಿರುವಲ್ಲಿಂದಲೇ ರೈತ ಹೋರಾಟವನ್ನು ಹೇಗೆ ಬೆಂಬಲಿಸಬಹುದು?” ಎನ್ನುವುದರ ಬಗ್ಗೆ ಕೆಲವು ಮಾಹಿತಿಗಳಿವೆ ಅಷ್ಟೆ. ಆದರೆ ಇದಕ್ಕೆ ಖಲೀಸ್ತಾನದ ನಂಟಿನ ಆರೋಪ ಹೊರಿಸಿ, ಭಯೋತ್ಪಾದಕ ಕೃತ್ಯ ಎಂದು ಬಿಂಬಿಸಿ, ದೇಶದ್ರೋಹ ಪ್ರಕರಣ ದಾಖಲಿಸುವಷ್ಟು ಸರ್ಕಾರದ ನಿದ್ದೆಗೆಡಿಸಿದೆಯೆಂದರೆ ಇದನ್ನು ನಾವು ಯಾವ ದೃಷ್ಟಿಕೋನದಿಂದ ನೋಡಬೇಕು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡ ಮಾಯ, ತಮಿಳುನಾಡಿನಲ್ಲಿ ತಮಿಳುಮಯ: ಹಿಂದಿ ಹೇರಿಕೆಗೆ ಆಕ್ರೋಶ



ದೆಹಲಿಯ ಪೊಲೀಸರು ಬೇರೊಂದು ರಾಜ್ಯದಲ್ಲಿ ಹೀಗೆ ನಿಯಮಬಾಹಿರವಾಗಿ ವ್ಯಕ್ತಿಯೊಬ್ಬನ್ನು ಬಂದಿಸಿರುವುದು, ಸರ್ವಾಧಿಕಾರ ಕಾಲಿಕ್ಕಿರುವುದಕ್ಕೆ, ಅಧಿಕೃತ ಸಾಕ್ಷಿಯಾಗಿದೆ.