ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಅನಧಿಕೃತ ಗುರುತಿನ ಚೀಟಿಗಳನ್ನು ನೀಡಿದ ಮೂವರು ಚುನಾವಣಾ ನೋಂದಣಿ ಅಧಿಕಾರಿಗಳನ್ನು (ಇಆರ್‌ಒ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೋಮವಾರ ಅಮಾನತುಗೊಳಿಸಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ ಮಹದೇವಪುರದ ಇಆರ್‌ಒ ಕೆ. ಚಂದ್ರಶೇಖರ, ಚಿಕ್ಕಪೇಟೆ ಇಆರ್‌ಒ ವಿ.ಬಿ.ಭೀಮಾಶಂಕರ್, ಕಂದಾಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ಶಿವಾಜಿನಗರದ ಇಆರ್‌ಒ ಸುಹೇಲ್ ಅಹಮದ್ ಸೇರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಜನತಾ ಪ್ರಾತಿನಿಧ್ಯ ಕಾಯಿದೆಯ ಪ್ರಕಾರ, ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಗುರುತಿನ ಚೀಟಿ ನೀಡಲು ಅವಕಾಶವಿಲ್ಲ. ಇದನ್ನು ಉಲ್ಲಂಘಿಸಿ ಕಾರ್ಡ್‌ಗಳಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಎಂದು ಬರೆದು ಸಂಸ್ಥೆಗೆ ಇಆರ್‌ಒ ಮೂಲಕ ಗುರುತಿನ ಚೀಟಿ ನೀಡಿರುವುದು ಕಂಡುಬಂದಿದೆ” ಎಂದು ಮಹದೇವಪುರ ಅಮಾನತು ಆದೇಶದಲ್ಲಿ ತಿಳಿಸಿದೆ.
ಶಿವಾಜಿನಗರದ ಆದೇಶದಲ್ಲಿ ಇಆರ್‌ಒ ಸುಹೇಲ್ ಅಹಮದ್ ಅವರು 14 ಬೂತ್ ಮಟ್ಟದ ಸಂಯೋಜಕ (ಬಿಎಲ್‌ಸಿ) ಕಾರ್ಡ್‌ಗಳನ್ನು ನೀಡಿದ್ದಾರೆ ಎಂದು ಹೆಚ್ಚುವರಿಯಾಗಿ ಉಲ್ಲೇಖಿಸಲಾಗಿದೆ.
ದಿ ನ್ಯೂಸ್ ಮಿನಿಟ್ ಮತ್ತು ಪ್ರತಿಧ್ವನಿ ನಡೆಸಿದ ಜಂಟಿ ತನಿಖಾ ವರದಿಯ ನಂತರ ಮತದಾರರರ ಮಾಹಿತಿ ಕಳ್ಳತನದ ಬೃಹತ್ ಹಗರಣ ಬಹಿರಂಗವಾಗಿದ್ದು, ಈ ವರೆಗೆ ಐವರನ್ನು ಬಂಧಿಸಲಾಗಿದೆ. ಅಲ್ಲದೆ ಹಗರಣದಲ್ಲಿ ಬಿಜೆಪಿಗೆ ನೇರ ಕೈವಾಡವಿದ್ದು, ಏಜೆಂಟರಿಗೆ ಬಿಜೆಪಿ ಕಚೇರಿಯಲ್ಲೆ ತರಬೇತಿ ನೀಡಲಾಗಿತ್ತು ಎಂದು ಇತ್ತೀಚೆಗಿನ ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಹೆಸರಿದೆಯೆಂದು ಹುಡುಕುವುದು ಹೇಗೆ? ಡಿಲೀಟ್ ಆಗಿದ್ದರೆ ಸೇರಿಸುವುದು ಹೇಗೆ?
ಚುನಾವಣಾ ಜಾಗೃತಿಗಾಗಿ ಬಿಬಿಎಂಪಿ ನೀಡಿದ್ದ ಅನುಮತಿ ಪತ್ರವನ್ನು ದುರುಪಯೋಗ ಪಡಿಸಿಕೊಂಡಿರುವ ಚಿಲುಮೆ ಎಂಬ ಖಾಸಗಿ ಎನ್‌ಜಿಒ ಮನೆ-ಮನೆ ಸಮೀಕ್ಷೆಯ ಮೂಲಕ ಮತದಾರರ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ಆರೋಪಿಸಲಾಗಿದ್ದು, ಬಿಬಿಎಂಪಿ ಅನುಮತಿ ನೀಡುವಲ್ಲಿ ಕೂಡಾ ಅಕ್ರಮ ಎಸಗಿದೆ ಎಂದು ವರದಿಯಾಗಿದೆ. ಬಿಬಿಎಂಪಿಯಿಂದ BLO ಗಳೆಂದು ಗುರುತಿಸಿಕೊಂಡ ಏಜೆಂಟರಿಗೆ ನಕಲಿ ಗುರುತಿನ ಚೀಟಿಗಳನ್ನು ನೀಡಲಾಗಿತ್ತು.
ಮಹದೇವಪುರ, ರಾಜರಾಜೇಶ್ವರಿ ನಗರ ಮತ್ತು ಚಿಕ್ಕಪೇಟೆ ಮೂರು ಕ್ಷೇತ್ರಗಳ ಸಮೀಕ್ಷೆಯನ್ನು ಚಿಲುಮೆ ಎನ್‌ಜಿಓದ ಏಜೆಂಟರು ಬಹುತೇಕ ಪೂರ್ಣಗೊಳಿಸಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಹೇಳಿದೆ. ಅದಾಗ್ಯೂ ಏಜೆಂಟರುಗಳಿಗೆ, ಸರ್ಕಾರಿ ಅಧಿಕಾರಿಗಳನ್ನು ಯಾಮಾರಿಸಲಾಗುತ್ತಿದೆ ಎಂಬುದು ತಿಳಿದಿರಲಿಲ್ಲ ಎಂದು ವರದಿ ಹೇಳಿದೆ.
“ಸರ್ಕಾರವು ಅನುಮೋದಿಸಿದ ಕಾನೂನುಬದ್ಧ ಚಟುವಟಿಕೆಯನ್ನು ನಾವು ಮಾಡುತ್ತಿದ್ದೇವೆ ಎಂದು ಭಾವಿಸಿದ್ದೆವು” ಎಂದು ಏಜೆಂಟರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಏಜೆಂಟ್‌ಗಳಾಗಿ ಸೇರಿದ್ದ ಹಲವರು ವೇತನ ಪಾವತಿಸದ ಕಾರಣ ಮತ್ತು ಕೆಲಸದ ಭಯಾನಕ ಪರಿಸ್ಥಿತಿಗಳಿಂದಾಗಿ ಕೆಲಸವನ್ನು ತೊರೆದಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಜೆಪಿಯ ನೇರ ಕೈವಾಡ; ಏಜೆಂಟರಿಗೆ ಪಕ್ಷದ ಕಚೇರಿಯಲ್ಲೆ ತರಬೇತಿ!
ಭಾನುವಾರ ಚಿಲುಮೆಯ ನಿರ್ದೇಶಕ ರವಿಕುಮಾರ್ ಕೃಷ್ಣಪ್ಪ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ನವೆಂಬರ್ 17 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ರಂಗಪ್ಪ ಎಸ್. ಅವರು ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ ಮತ್ತು ನಕಲಿ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬಯಲಾದ ಮೂರು ದಿನಗಳವರೆಗೆ ಅವರು ತಲೆಮರೆಸಿಕೊಂಡಿದ್ದರು.


