ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ಮಾಜಿ ಪ್ರಧಾನಿ (ಪದಚ್ಯುತ) ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆ ವಿಧಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಸೋಮವಾರ (ನವೆಂಬರ್ 17) ಆದೇಶಿಸಿದೆ.
ಶಿಕ್ಷೆ ಘೋಷಣೆಯಾದ ಬಳಿಕ ಹಸೀನಾ ಮತ್ತು ಅಸಾದುಝ್ಝಮಾನ್ ಅವರನ್ನು ಹಸ್ತಾಂತರಿಸುವಂತೆ ಅಥವಾ ಗಡಿಪಾರು ಮಾಡುವಂತೆ ಬಾಂಗ್ಲಾದೇಶ ಭಾರತದ ಬಳಿ ಬೇಡಿಕೆಯಿಟ್ಟಿದೆ. ಹಸೀನಾ ಭಾರತದಲ್ಲೇ ರಕ್ಷಣೆ ಪಡೆದಿದ್ದಾರೆ ಎನ್ನುವುದು ಬಾಂಗ್ಲಾದ ಬಲವಾದ ವಾದವಾಗಿದೆ. ಈ ಹಿಂದೆಯೂ ಬಾಂಗ್ಲಾ ಈ ಬೇಡಿಕೆಯನ್ನು ಭಾರತದ ಮುಂದಿಟ್ಟಿತ್ತು.
ಹಸೀನಾ ಅವರಿಗೆ ಶಿಕ್ಷೆ ಘೋಷಣೆಯಾದ ಬಳಿಕ, ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, “ಬಾಂಗ್ಲಾದೇಶದ ಢಾಕಾದಲ್ಲಿರುವ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ನೀಡಿರುವ ತೀರ್ಪನ್ನು ಭಾರತ ಔಪಚಾರಿಕವಾಗಿ ಗಮನಿಸಿದೆ. ಭಾರತ ಬಾಂಗ್ಲಾದೇಶದ ಜನರ ಹಿತಾಸಕ್ತಿಗಳಿಗೆ ಬದ್ಧವಾಗಿದೆ” ಎಂದು ಹೇಳಿದೆ.
ಮುಂದುವರಿದು, “ಭಾರತವು ಬಾಂಗ್ಲಾದೇಶದ ಒಳ್ಳೆಯ ಸ್ನೇಹಿತ ಮತ್ತು ನೆರೆಯ ದೇಶವಾಗಿ, ಅಲ್ಲಿನ ಜನರ ಒಳಿತಿಗಾಗಿ ಯಾವಾಗಲೂ ಕೆಲಸ ಮಾಡುತ್ತದೆ. ಬಾಂಗ್ಲಾದೇಶದಲ್ಲಿ ಶಾಂತಿ, ಪ್ರಜಾಪ್ರಭುತ್ವ, ಎಲ್ಲರಿಗೂ ಸಮಾನ ಅವಕಾಶ ಮತ್ತು ಸ್ಥಿರತೆ ಇರುವಂತೆ ನೋಡಿಕೊಳ್ಳಲು ಭಾರತ ಬದ್ಧವಾಗಿದೆ. ಈ ಉದ್ದೇಶದಿಂದ ಯಾರೇ ಆ ದೇಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ಅವರೆಲ್ಲರೊಂದಿಗೂ ಒಳ್ಳೆಯ ರೀತಿಯಲ್ಲಿ ಸಹಕಾರ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದೆ.
ಭಾರತ-ಬಾಂಗ್ಲಾದೇಶ ನಡುವಿನ ಆರೋಪಿಗಳನ್ನು ಹಿಂದಿರುಗಿಸುವ ಒಪ್ಪಂದವನ್ನು (extradition treaty)ಉಲ್ಲೇಖಿಸಿರುವ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ, ಹಸೀನಾ ಮತ್ತು ಅಸಾದುಝ್ಝಮಾನ್ ಅವರನ್ನು ಹಸ್ತಾಂತರಿಸುವಂತೆ ಭಾರತವನ್ನು ಆಗ್ರಹಿಸಿದೆ.
“ಯಾವುದೇ ದೇಶ ಹಸೀನಾ ಅವರಿಗೆ ರಕ್ಷಣೆ ಒದಗಿಸಿದರೆ ಅದು ‘ಅತ್ಯಂತ ಸ್ನೇಹಪರವಲ್ಲದ ಕೃತ್ಯ ಮತ್ತು ನ್ಯಾಯದ ನಿರ್ಲಕ್ಷ್ಯ’ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿದೆ. ಈ ಮೂಲಕ ಭಾರತದ ಮೇಲೆ ಪರೋಕ್ಷ ಒತ್ತಡ ಹಾಕಿದೆ.
ಈ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ಭೇಟಿ ನೀಡಿದ್ದ ಎರಡು ವಾರಗಳ ನಂತರ, ಅಂದರೆ 2024 ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶವು ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಭಾರತಕ್ಕೆ ಔಪಚಾರಿಕ ಮನವಿ ಮಾಡಿತ್ತು.
2013ರಲ್ಲಿ ಭಾರತ-ಬಾಂಗ್ಲಾದೇಶ ನಡುವೆ ಮಾಡಿಕೊಂಡಿರುವ ಆರೋಪಿಗಳ ಹಿಂದಿರುಗಿಸುವ ಒಪ್ಪಂದದ (extradition treaty)ಪ್ರಕಾರ, ಯಾವುದೇ ವ್ಯಕ್ತಿಯನ್ನು ಹಿಂದಿರುಗಿಸುವ ಬೇಡಿಕೆ ರಾಜಕೀಯ ಉದ್ದೇಶದಿಂದ (politically motivated)ಕೂಡಿದೆ ಎಂದು ತೋರಿದರೆ ಅದನ್ನು ತಿರಸ್ಕರಿಸಬಹುದು.
ಕಳೆದ ವರ್ಷ ದೇಶ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾದ ಶೇಖ್ ಹಸೀನಾ ಅವರು, “ನನ್ನ ಮೇಲಿನ ಎಲ್ಲಾ ಆರೋಪಗಳು ಸಂಪೂರ್ಣ ರಾಜಕೀಯ ದ್ವೇಷದಿಂದ ಕೂಡಿದೆ” ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.
ಒಪ್ಪಂದದ ಅನುಚ್ಛೇದ 6ರ ಪ್ರಕಾರ, “ಹಸೀನಾ ಮೇಲಿನ ಆರೋಪ ಮತ್ತು ಘೋಷಣೆ ಮಾಡಿರುವ ಶಿಕ್ಷೆ ನಿಜವಾಗಿಯೂ ನ್ಯಾಯಯುತವಾಗಿದೆಯೇ, ಇಲ್ಲ ರಾಜಕೀಯ ದುರುದ್ದೇಶದಿಂದ ಕೂಡಿದೆಯೇ ಎಂದು ಭಾರತ ಪರೀಕ್ಷಿಸಬಹುದು.
ಹಸೀನಾ ಮೇಲಿನ ಆರೋಪ ಸತ್ಯ, ಒಳ್ಳೆಯ ಭಾವನೆ ಮತ್ತು ನಿಜವಾದ ನ್ಯಾಯದ ಹಿತಾಸಕ್ತಿಯಿಂದ ಕೂಡಿರದಿದ್ದರೆ ಭಾರತ ಹಸೀನಾ ಅವರನ್ನು ಹಸ್ತಾಂತರಿಸುವ ಬೇಡಿಕೆಯನ್ನು ತಿರಸ್ಕರಿಸಬಹುದು ಎಂದು ವರದಿಗಳು ಹೇಳಿವೆ.
ಹಸೀನಾ ಭಾರತದಲ್ಲೇ ಇರುವುದು ನಿಜಾನಾ?
ಕಳೆದ ವರ್ಷ (2024ರ ಆಗಸ್ಟ್‌ನಲ್ಲಿ) ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಗಲಭೆಯ ನಂತರ ಹಸೀನಾ ಅವರು ದೇಶ ತೊರೆದು ಭಾರತಕ್ಕೆ ಬಂದಿದ್ದಾರೆ. ಈಗಲೂ (2025ರ ನವೆಂಬರ್ 18ರಂತೆ) ಅವರು ನವದೆಹಲಿಯಲ್ಲಿ ಭಾರೀ ಭದ್ರತೆಯೊಂದಿಗೆ ವಾಸಿಸುತ್ತಿದ್ದಾರೆ ಎಂದು ವಿವಿಧ ವರದಿಗಳು (ಉದಾ: ಇಂಡಿಯಾ ಟುಡೇ, ಝೀ ನ್ಯೂಸ್, ದಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ) ದೃಢಪಡಿಸಿವೆ.
ಬಾಂಗ್ಲಾದೇಶದ ಸರ್ಕಾರ ಹಸೀನಾ ಅವರನ್ನು ತಮಗೆ ಹಸ್ತಾಂತರಿಸುವಂತೆ ಭಾರತಕ್ಕೆ ಬೇಡಿಕೆ ಇಟ್ಟಿದೆ. ಆದರೆ, ಭಾರತ ಇನ್ನೂ ಅವರನ್ನು ರಕ್ಷಿಸುತ್ತಿದೆ ಮತ್ತು ಯಾವುದೇ ಹಸ್ತಾಂತರ ನಿರ್ಧಾರ ತೆಗೆದುಕೊಂಡಿಲ್ಲ. ಹಸೀನಾ ಈಗ ಇರುವ ನಿಖರ ಸ್ಥಳವನ್ನು ಭಾರತ ಸರ್ಕಾರ ರಹಸ್ಯವಾಗಿಟ್ಟುಕೊಂಡಿದೆ. ಆದರೆ, ಅವರು ದೆಹಲಿಯ ಉನ್ನತ ಭದ್ರತಾ ಪ್ರದೇಶದಲ್ಲಿ (Lutyens’ Bungalow Zone) ಇದ್ದಾರೆ ಎಂದು ವರದಿಗಳು ಹೇಳುತ್ತವೆ.


