ಭಾರತಕ್ಕೆ ಚಿಕಿತ್ಸೆಗೆಂದು ಬಂದು ಕಳೆದ ವಾರ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅವರನ್ನು ಬುಧವಾರ ಕೋಲ್ಕತ್ತಾದಲ್ಲಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ.
ಘಟನೆ ಬಗ್ಗೆ ಢಾಕಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶದ ಗೃಹ ಸಚಿವ ಅಸಾದುಜ್ಜಮಾನ್ ಖಾನ್, ಇದೊಂದು ಪೂರ್ವ ಯೋಜಿತ ಕೊಲೆ. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂದು ನಾವು ತಿಳಿದುಕೊಂಡಿದ್ದೇವೆ. ಈಗಾಗಲೇ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಉದ್ದೇಶದ ಬಗ್ಗೆ ನಾವು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ, ಭಾರತೀಯ ಪೊಲೀಸರು ಪ್ರಕರಣದ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಮೇ 12ರಂದು ಭಾರತಕ್ಕೆ ಬಂದಿದ್ದರು. ಅವರು ಮೇ 13ರಂದು ಮಧ್ಯಾಹ್ನ ವೈದ್ಯಕೀಯ ತಪಾಸಣೆಗಾಗಿ ಕೋಲ್ಕತ್ತಾ ಬಳಿಯ ಬಿಧಾನನಗರದಲ್ಲಿ ಗೆಳೆಯರ ಜೊತೆ ಹೋದಾಗ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಸಂಸದರು ದೆಹಲಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದರು. ಆದರೆ ಮೇ 13ರಿಂದ ಅವರು ಯಾರಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಕೋಲ್ಕತ್ತಾದ ಬಿಧಾನಗರ್‌ನಲ್ಲಿರುವ ಅವರ ಸ್ನೇಹಿತರೊಬ್ಬರು ಹೇಳಿದ್ದಾರೆ.
ಸಂಸದರ ಸ್ನೇಹಿತ ಗೋಪಾಲ್ ವಿಶ್ವಾಸ್ ಅವರಿಗೆ ಸಂಸದರ ಪುತ್ರಿ ತನ್ನ ತಂದೆಯನ್ನು ಸಂಪರ್ಕಿಸಲು ಸಾಧ್ಯವಾಗದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಸಂಪರ್ಕ ಸಿಗದ ಹಿನ್ನೆಲೆ ಕೋಲ್ಕತ್ತಾದ ಬಿಧಾನನಗರದ ಬಾರಾನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ನಾಪತ್ತೆ ದೂರು ದಾಖಲಿಸಲಾಗಿತ್ತು.
ಮೇ 16ರಂದು ಬೆಳಿಗ್ಗೆ ಅನ್ವರುಲ್ ಅಝೀಂ ಅವರು ತನ್ನ ಸಹಾಯಕನಿಗೆ ಕರೆ ಮಾಡಿದ್ದರು, ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ನಂತರ, ಅವರ ಪಿಎ ಅವರನ್ನು ಮರಳಿ ಕರೆ ಮಾಡಿದಾಗ ಅವರು ಉತ್ತರಿಸಲಿಲ್ಲ ಎಂದು ಮೇ 18ರಂದು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಾಂಗ್ಲಾದೇಶದ ಸಚಿವ ಶಾಬನ್ ಮಹಮೂದ್ ಈ ಬಗ್ಗೆ ಮಾತನಾಡಿದ್ದು, ನಮ್ಮ ಗೃಹ ಸಚಿವರು ಘೋಷಿಸಿದಂತೆ, ಇದು ಸಂಭವಿಸಿದೆ ಎಂದು ನಾನು ಖಂಡಿತವಾಗಿ ನಂಬುತ್ತೇನೆ. ಆದರೆ ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಭಾರತ ಸರಕಾರದಿಂದ ಬಂದಿಲ್ಲ. ನಾವು ಕಾಯಬೇಕಾಗಿದೆ, ಆದರೆ ನಮ್ಮ ಗೃಹ ಸಚಿವರು ಈಗಾಗಲೇ ಘೋಷಿಸಿರುವುದರಿಂದ ಅವರನ್ನು ಕೊಂದಿರಬಹುದು ಅಥವಾ ಹತ್ಯೆ ಮಾಡಿರಬಹುದು ಎಂದು ನಾವು ಭಾವಿಸುತ್ತೇವೆ. ಘಟನೆಗೆ ಹಲವಾರು ಕಾರಣಗಳಿರಬಹುದು. ಆದರೆ ನಮಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಪ್ರಜ್ವಲ್ ಪಾಸ್‌ಪೋರ್ಟ್ ರದ್ದತಿ ವಿಚಾರದಲ್ಲಿ ಕೇಂದ್ರದಿಂದ ಯಾವುದೇ ಸ್ಪಂದನೆಯಿಲ್ಲ: ಗೃಹ ಸಚಿವ ಪರಮೇಶ್ವರ್


