“ಇಸ್ರೇಲ್ ಗಾಝಾಗೆ ಕಲಿಸಿದಂತೆ ಬಾಂಗ್ಲಾದೇಶಕ್ಕೂ ಪಾಠ ಕಲಿಸಬೇಕು” ಎಂದು ಬಿಜೆಪಿ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ನೀಡಿದ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ.
ಡಿಸೆಂಬರ್ 26, ಶುಕ್ರವಾರ ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶ ಉಪ ಹೈಕಮಿಷನ್ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, “ಇಸ್ರೇಲ್ ಗಾಝಾಗೆ ಕಲಿಸಿದಂತೆ ಈ ಜನರಿಗೆ (ಬಾಂಗ್ಲಾದೇಶದ) ಪಾಠ ಕಲಿಸಬೇಕು. ನಮ್ಮ 100 ಕೋಟಿ ಹಿಂದೂಗಳು ಮತ್ತು ಹಿಂದೂಗಳ ಹಿತಾಸಕ್ತಿಗಾಗಿ ಕೆಲಸ ಮಾಡುವ ಸರ್ಕಾರ ಆಪರೇಷನ್ ಸಿಂಧೂರ್‌ನಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಿದಂತೆಯೇ ಅವರಿಗೂ ಪಾಠ ಕಲಿಸಬೇಕು” ಎಂದು ಹೇಳಿದ್ದಾರೆ.
ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರ 27 ವರ್ಷದ ದೀಪು ಚಂದ್ರ ದಾಸ್ ಅವರನ್ನು ಬಾಂಗ್ಲಾದಲ್ಲಿ ಗುಂಪು ಹತ್ಯೆಗೈದಿರುವುದನ್ನು ಖಂಡಿಸಿ, ಡಿಸೆಂಬರ್ 22ರಿಂದ ಬಾಂಗ್ಲಾದೇಶದ ಉಪ ಹೈಕಮಿಷನ್ ಮುಂದೆ ಪ್ರತಿಭಟನೆಗಳು ನಡೆಯುತ್ತಿವೆ. ಡಿಸೆಂಬರ್ 18ರಂದು ದೀಪು ಅವರನ್ನು ಬಾಂಗ್ಲಾದ ಮೆಯ್ಮೆನ್ಸಿಂಗ್ ಜಿಲ್ಲೆಯಲ್ಲಿ ಗುಂಪು ಹತ್ಯೆಗೈದು, ಬಳಿಕ ಅವರ ದೇಹವನ್ನು ಮರಕ್ಕೆ ತೂಗುಹಾಕಿ ಬೆಂಕಿ ಹಚ್ಚಲಾಗಿತ್ತು.
ಅಧಿಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ಬಿಜೆಪಿ “ದ್ವೇಷ ಮತ್ತು ಅಸಹಿಷ್ಣುತೆಯನ್ನು ಒಂದು ಕಲಾರೂಪವಾಗಿ ಪರಿವರ್ತಿಸಿದೆ” ಎಂದು ಹೇಳಿದೆ.
“ಸುವೇಂದು ಅಧಿಕಾರಿ ತನ್ನ ವಿಷಪೂರಿತ ಧ್ವನಿಯಲ್ಲಿ ಮತ್ತೊಮ್ಮೆ ತನ್ನ ಫ್ಯಾಸಿಸ್ಟ್ ಕೋರೆಹಲ್ಲುಗಳನ್ನು ಹೊರತೆಗೆದು, ಇಸ್ರೇಲ್ ಗಾಝಾಗೆ ಕಲಿಸಿದಂತೆ ಭಾರತವು ಮುಸ್ಲಿಮರಿಗೆ ಪಾಠ ಕಲಿಸಬೇಕು ಎಂದು ಘೋಷಿಸುವ ಮೂಲಕ ನರಮೇಧದ ಪಿತ್ತವನ್ನು ಕಾರಿದ್ದಾರೆ. ಇದು ಬಹಿರಂಗ ದ್ವೇಷ ಭಾಷಣ, ಸಾಮೂಹಿಕ ಹತ್ಯೆ ಮತ್ತು ಜನಾಂಗೀಯ ಶುದ್ಧೀಕರಣಕ್ಕಾಗಿ ಕೊಟ್ಟ ರಕ್ತಪಿಪಾಸು ಕರೆಯಾಗಿದೆ. ಇವರ ವಿರುದ್ದ ಯಾವುದೇ ಎಫ್ಐಆರ್ ದಾಖಲಾಗಿಲ್ಲ, ಬಂಧಿಸಿಲ್ಲ, ಕನಿಷ್ಠ ಕಾನೂನು ಕ್ರಮ ಜರುಗಿಸಿಲ್ಲ. ಈ ಹಿಟ್ಲರ್ ವರ್ತನೆಯ ಮೇಲೆ ಯಾವುದೇ ಯುಎಪಿಎ ವಿಧಿಸಲಾಗಿಲ್ಲ” ಎಂದಿದೆ.
ಐವರು ಸದಸ್ಯರ ನಿಯೋಗದೊಂದಿಗೆ ಅಧಿಕಾರಿ ಶುಕ್ರವಾರ ಬಾಂಗ್ಲಾದ ಉಪ ಹೈಕಮಿಷನ್‌ನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದು, ಹೊರಬಂದ ಬಳಿಕ ರಾಜತಾಂತ್ರಿಕರ ಬಳಿ ನಮ್ಮ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ ಎಂದು ಹೇಳಿದ್ದಾರೆ.
“ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಮ್ಯಾನ್ಮಾರ್ ರೋಹಿಂಗ್ಯಾಗಳಿಗೆ ಕಾಕ್ಸ್ ಬಜಾರ್‌ನಲ್ಲಿ ಆಶ್ರಯ ನೀಡಿದ್ದು ಅವರು ಮುಸ್ಲಿಮರು ಎಂಬ ಕಾರಣಕ್ಕಾಗಿ, ಹೀಗಿರುವಾಗ ಹಿಂದೂಗಳನ್ನು ಏಕೆ ಅನಿಯಂತ್ರಿತವಾಗಿ ಗುರಿಯಾಗಿಸಲಾಗುತ್ತಿದೆ ಎಂದು ನಾನು ಅವರನ್ನು ಕೇಳಿದೆ? ಆ ದೇಶದಲ್ಲಿ ಎರಡು ಕೋಟಿ ಹಿಂದೂಗಳನ್ನು ನಿರಂತರವಾಗಿ ಗುರಿಯಾಗಿಸಿಕೊಳ್ಳಲಾಗುತ್ತಿದೆ. ಗಡಿಯ ಈ ಬದಿಯಲ್ಲಿರುವ 100 ಕೋಟಿ ಹಿಂದೂಗಳು ಮೌನವಾಗಿ ಕುಳಿತು ನೋಡುತ್ತಾರೆ ಎಂದು ಅವರು ಭಾವಿಸಿದ್ದರೆ, ಅದು ತಪ್ಪು” ಎಂದಿದ್ದಾರೆ.
ಈ ವಾರದ ಆರಂಭದಲ್ಲಿ ಉಪ ಹೈಕಮಿಷನ್ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮ ಕೈಗೊಂಡಿದ್ದಕ್ಕಾಗಿ ಅಧಿಕಾರಿ ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಗಡಿಯ ಆ ಬದಿಯಲ್ಲಿರುವ ಮುಮ್ಮಮದ್ ಯೂನುಸ್ ಪೊಲೀಸರಿಗೂ ಇಲ್ಲಿನ ಮಮತಾ ಬ್ಯಾನರ್ಜಿ ಪೊಲೀಸರಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರೂ ತಮ್ಮ ಯಜಮಾನರಿಗೆ ಕುರುಡಾಗಿ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ.
ಡಿಸೆಂಬರ್ 23 ರಂದು ಉಪ ಹೈಕಮಿಷನ್ ಮೇಲೆ ದಾಳಿ ಮಾಡಲು ಮುಂದಾದಾಗ ಬ್ಯಾರಿಕೇಡ್‌ಗಳನ್ನು ಮುರಿದು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಆರೋಪದಲ್ಲಿ ಹಿಂದೂ ಸಂಘಟನೆಯ 19 ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಶುಕ್ರವಾರ ಉಪ ಹೈಕಮಿಷನ್ ಕಚೇರಿಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನೆಲಕ್ಕೆ ಬಿಗಿಯಾಗಿ ಜೋಡಿಸಲಾದ ಲೋಹದ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ.
ದಾಳಿಗಳು ನಿರಂತರವಾಗಿ ಮುಂದುವರಿದರೆ, ನೂರಾರು ಹಿಂದೂ ಸನ್ಯಾಸಿಗಳೊಂದಿಗೆ, ಇನ್ನೂ ದೊಡ್ಡ ಪಡೆಯೊಂದಿಗೆ ಹೈಕಮಿಷನ್ ಕಚೇರಿಗೆ ನುಗ್ಗುವುದಾಗಿ ಅಧಿಕಾರಿ ಬೆದರಿಕೆ ಹಾಕಿದ್ದಾರೆ.
“ಗಂಗಾಸಾಗರ ಮೇಳಕ್ಕೆ ಹೋಗುವ ದಾರಿಯಲ್ಲಿ ಸನ್ಯಾಸಿಗಳು ಬಾಬುಘಾಟ್‌ನಲ್ಲಿ ಶಿಬಿರಗಳನ್ನು ಸ್ಥಾಪಿಸುತ್ತಾರೆ. ಮುಂದಿನ ವರ್ಷದ ಆರಂಭದಲ್ಲಿ ನಾನು ಗಂಗಾಸಾಗರದ ಐದು ಲಕ್ಷ ಹಿಂದೂ ಯಾತ್ರಿಕರೊಂದಿಗೆ ಹಿಂತಿರುಗುತ್ತೇನೆ ಮತ್ತು ಹೈಕಮಿಷನ್ ಕಚೇರಿಗೆ ಮೆರವಣಿ ಮಾಡುವ ಮೂಲಕ ಈ ಬ್ಯಾರಿಕೇಡ್‌ಗಳನ್ನು ಕಿತ್ತುಹಾಕುತ್ತೇನೆ” ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.


