ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ದೀರ್ಘಕಾಲದ ಅನಾರೋಗ್ಯದ ನಂತರ ಮಂಗಳವಾರ (ಡಿಸೆಂಬರ್ 30, 2025) ಬೆಳಗಿನ ಜಾವ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಖಾಲಿದಾ ಅವರು ಬಾಂಗ್ಲಾದೇಶದ ವಿರೋಧ ಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆಯಾಗಿದ್ದರು.
“ಬಿಎನ್‌ಪಿ ಅಧ್ಯಕ್ಷೆ, ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ನಾಯಕಿ ಬೇಗಂ ಖಾಲಿದಾ ಝಿಯಾ ಅವರು ಇಂದು ಬೆಳಿಗ್ಗೆ ಫಜ್ರ್ ಪ್ರಾರ್ಥನೆಯ ನಂತರ 6 ಗಂಟೆಗೆ ಕೊನೆಯುಸಿರೆಳೆದರು” ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ. ಅವರ ಅಗಲಿಕೆಗೆ ಸಂತಾಪ ಸೂಚಿಸಿ, ಪ್ರಾರ್ಥನೆ ಸಲ್ಲಿಸುವಂತೆ ಬಿಎನ್‌ಪಿ ಮನವಿ ಮಾಡಿದೆ.
ವೈದ್ಯರ ಪ್ರಕಾರ, ಖಾಲಿದಾ ಝಿಯಾ ಅವರು ಯಕೃತ್ತಿನ ಸಮಸ್ಯೆ, ಸಂಧಿವಾತ, ಮಧುಮೇಹ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದರು. ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಮಗ ಹಾಗೂ ಬಿಎನ್‌ಪಿಯ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ತಾಯಿಯನ್ನು ಭೇಟಿಮಾಡಿದ್ದರು.
ಖಾಲಿದಾ ಝಿಯಾ ಮತ್ತು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಡುವಿನ ರಾಜಕೀಯ ಪೈಪೋಟಿ ದಶಕಗಳ ಕಾಲ ಬಾಂಗ್ಲಾದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಿತ್ತು. 1981ರಲ್ಲಿ ದಂಗೆಯಲ್ಲಿ ಹತ್ಯೆಯಾದ ಅಧ್ಯಕ್ಷ ಝಿಯಾವುರ್ ರೆಹಮಾನ್ ಅವರ ಪತ್ನಿಯಾದ ಖಾಲಿದಾ ಝಿಯಾ, ನಂತರ ಮಿಲಿಟರಿ ಆಡಳಿತದ ವಿರುದ್ಧ ನಡೆದ ಸಾಮೂಹಿಕ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಆಂದೋಲನದ ಫಲವಾಗಿ 1990ರಲ್ಲಿ ಮಿಲಿಟರಿ ಆಡಳಿತ ಪತನವಾಯಿತು.
1991ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದ ಖಾಲಿದಾ ಝಿಯಾ, 2001ರಿಂದ ಮತ್ತೊಮ್ಮೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅನೇಕ ಚುನಾವಣೆಗಳಲ್ಲಿ ಅವರ ಎದುರಾಳಿಯಾಗಿ ಶೇಖ್ ಹಸೀನಾ ಸ್ಪರ್ಧಿಸಿದ್ದರು. 2006ರಿಂದ ಅಧಿಕಾರದ ಹೊರಗಿದ್ದ ಅವರು, ರಾಜಕೀಯ ಪ್ರೇರಿತವೆಂದು ಹೇಳಲಾದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಹಾಗೂ ಗೃಹಬಂಧನ ಅನುಭವಿಸಿದ್ದರು.
ಜನವರಿ 2025ರಲ್ಲಿ, ಸುಪ್ರೀಂ ಕೋರ್ಟ್ ಖಾಲಿದಾ ಅವರನ್ನು ಕೊನೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸಿತು. ಇದು ಮುಂದಿನ (2026) ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ನೀಡುತ್ತಿತ್ತು. ಈ ನಡುವೆ ಅವರು ನಿಧನರಾಗಿದ್ದಾರೆ.
2020ರಲ್ಲಿ ಅನಾರೋಗ್ಯದ ಕಾರಣ ಖಾಲಿದಾ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಆ ಬಳಿಕ ಅವರ ಕುಟುಂಬ ವಿದೇಶದಲ್ಲಿ ಚಿಕಿತ್ಸೆ ನೀಡಲು ಕನಿಷ್ಠ 18 ಬಾರಿ ಶೇಖ್ ಹಸೀನಾ ಸರ್ಕಾರವನ್ನು ವಿನಂತಿಸಿತು. ಆದರೆ, ಈ ವಿನಂತಿಗಳನ್ನು ತಿರಸ್ಕರಿಸಲಾಯಿತು ಎಂದು ಬಿಎನ್‌ಪಿ ಹೇಳಿದೆ.
ಹಸೀನಾ ಸರ್ಕಾರ ಪತನಗೊಂಡ ಬಳಿಕ ರಚನೆಯಾದ ಮಧ್ಯಂತರ ಸರ್ಕಾರ ಈ ವರ್ಷ ಆರಂಭದಲ್ಲಿ ಖಾಲಿದಾ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಲು ಅನುಮತಿ ನೀಡಿತು. ವೈದ್ಯಕೀಯ ಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಿದ್ದ ಅವರು, ಮೇ ತಿಂಗಳಲ್ಲಿ ಸ್ವದೇಶಕ್ಕೆ ಮರಳಿದ್ದರು.
ಅಧಿಕಾರದಿಂದ ದೂರವಿದ್ದರೂ ಖಾಲಿದಾ ಝಿಯಾ ಹಾಗೂ ಅವರ ಮಧ್ಯ–ಬಲಪಂಥೀಯ ಬಿಎನ್‌ಪಿ ದೇಶದ ರಾಜಕೀಯದಲ್ಲಿ ಪ್ರಭಾವವನ್ನು ಉಳಿಸಿಕೊಂಡಿತ್ತು. ಫೆಬ್ರವರಿಯಲ್ಲಿ ನಡೆಯಲಿರುವ ಸಂಸತ್ತಿನ ಚುನಾವಣೆಯಲ್ಲಿ ಬಿಎನ್‌ಪಿ ಮುಂಚೂಣಿಯಲ್ಲಿದೆ. ಸುಮಾರು 17 ವರ್ಷಗಳ ಸ್ವಯಂ ಗಡಿಪಾರು ಜೀವನದ ಬಳಿಕ ಇತ್ತೀಚೆಗೆ ದೇಶಕ್ಕೆ ಮರಳಿದ ತಾರಿಕ್ ರೆಹಮಾನ್ ಪ್ರಧಾನಿಯಾಗುವ ಪ್ರಬಲ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ.


