ಐದು ದಿನಗಳ ಕೆಲಸದ ವಾರವನ್ನು (ವಾರದಲ್ಲಿ 5 ದಿನ ಕೆಲಸ) ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರು ಮಂಗಳವಾರ (ಜ.27) ರಾಷ್ಟ್ರವ್ಯಾಪಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆಯಿದೆ.
ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಮಾತುಕತೆ ವಿಫಲವಾದ ನಂತರ ಮತ್ತು ಎರಡು ಸತತ ರಜಾದಿನಗಳ ನಂತರ ಮುಷ್ಕರ ನಡೆಯುತ್ತಿದೆ. ಇದು ಗ್ರಾಹಕರಿಗೆ ಸೀಮಿತ ಶಾಖೆ ಸೇವೆಗಳನ್ನು ಮೂರು ದಿನಗಳವರೆಗೆ ವಿಸ್ತರಿಸಬಹುದು.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರತಿನಿಧಿಸುವ ಒಂಬತ್ತು ಒಕ್ಕೂಟಗಳ ಒಕ್ಕೂಟವಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ಜನವರಿ 23ರಂದು ನಡೆದ ಸಂಧಾನ ಸಭೆ ವಿಫಲವಾದ ಕಾರಣ ಒಕ್ಕೂಟಗಳು ಮುಷ್ಕರಕ್ಕೆ ನಿರ್ಧರಿಸಿವೆ.
ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜಾದಿನಗಳಾಗಿ ಘೋಷಿಸಬೇಕು ಎಂಬುವುದು ಮುಷ್ಕರದ ಪ್ರಮುಖ ಬೇಡಿಕೆಯಾಗಿದೆ. ಈ ಪ್ರಸ್ತಾವನೆಯು ಮಾರ್ಚ್ 2024 ರಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘದೊಂದಿಗೆ ಸಹಿ ಹಾಕಿದ 12ನೇ ದ್ವಿಪಕ್ಷೀಯ ಒಪ್ಪಂದದ ಭಾಗವಾಗಿತ್ತು, ಆದರೆ ಇದು ಇನ್ನೂ ಸರ್ಕಾರದಿಂದ ಔಪಚಾರಿಕ ಅಧಿಸೂಚನೆಗಾಗಿ ಕಾಯುತ್ತಿದೆ. ಪ್ರಸ್ತುತ, ಬ್ಯಾಂಕ್‌ಗಳು ಪ್ರತಿ ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರಗಳಂದು ಕಾರ್ಯನಿರ್ವಹಿಸುತ್ತವೆ.
ಇಂದು (ಜ.27) ಅಧಿಕೃತವಾಗಿ ಬ್ಯಾಂಕ್ ರಜಾದಿನವಲ್ಲ. ಆದರೂ, ನೌಕರರ ಮುಷ್ಕರದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ಅಡಚಣೆಯಾಗಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವು ಬ್ಯಾಂಕ್‌ಗಳ ನೌಕರರು ಮುಷ್ಕರದಲ್ಲಿ ಭಾಗವಹಿಸುವುದರಿಂದ ಈ ಬ್ಯಾಂಕ್‌ಗಳ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ತುರ್ತು ವಹಿವಾಟು ಇರುವ ಗ್ರಾಹಕರು ತಮ್ಮ ಸ್ಥಳೀಯ ಶಾಖೆಯೊಂದಿಗೆ ಸೇವೆಗಳು ಲಭ್ಯವಿವೆಯೇ ಎಂದು ಪರಿಶೀಲಿಸಲು ಸೂಚಿಸಲಾಗಿದೆ.
ಹಲವಾರು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮುಷ್ಕರದ ಸಂಭವನೀಯ ಪರಿಣಾಮದ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿವೆ. ನಿಯಂತ್ರಕ ಫೈಲಿಂಗ್‌ನಲ್ಲಿ ಎಸ್‌ಬಿಐ ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದು, ಅಡಚಣೆಯನ್ನು ಮಿತಿಗೊಳಿಸಲು ಪ್ರಯತ್ನಿಸಿದೆ ಎಂದು ಹೇಳಿದೆ.
“ಮುಷ್ಕರದ ವೇಳೆ ತನ್ನ ಶಾಖೆಗಳು ಮತ್ತು ಕಚೇರಿಗಳು ಸಾಮಾನ್ಯ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರೂ, ಮುಷ್ಕರದಿಂದ ಬ್ಯಾಂಕಿನ ಕೆಲಸದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಎಸ್‌ಬಿಐ ಶುಕ್ರವಾರ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಖಾಸಗಿ ವಲಯದ ಬ್ಯಾಂಕ್‌ಗಳ ನೌಕರರು ಪ್ರತಿಭಟನೆಯನ್ನು ಬೆಂಬಲಿಸುವ ಒಕ್ಕೂಟಗಳ ಭಾಗವಾಗಿಲ್ಲದ ಕಾರಣ, ಮುಷ್ಕರದಿಂದ ಅವುಗಳಿಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇಲ್ಲ. ಎಚ್‌ಡಿಎಫ್‌ಸಿ, ಐಸಿಐಸಿಐ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.


