ನಾವು ನಮ್ಮ ಸ್ನೇಹಿತರನ್ನು ತಮಾಷೆಗಾಗಿ ಛೇಡಿಸುವ, ಕಾಲೆಳೆಯುವ ಕೆಲಸವನ್ನು ಹಾಗಾಗ್ಗೆ ಮಾಡುತ್ತಿರುತ್ತೇವೆ. ಆಗ ಅವರನ್ನು ದೈಹಿಕವಾಗಿಯೂ, ಸಾಮಾಜಿಕವಾಗಿಯೂ ಎಳೆದುತಂದು ಹಾಸ್ಯ ಮಾಡುತ್ತೇವೆ. ಈ ರೀತಿ ದೈಹಿಕ ಅಂಗಾಂಗಗಳನ್ನು ಹೆಸರಿಸಿ ಛೇಡಿಸುವುದು ತಪ್ಪು ಎಂಬದು ಗೊತ್ತಿದ್ದರೂ ಕೆಲವರು ಅದನ್ನು ಮುಂದುವರೆಸಿದ್ದಾರೆ. ಇನ್ನು ಮುಂದೆ ಹೀಗೆ ರೇಗಿಸುವುದನ್ನು ನೀವೆಲ್ಲರೂ ನಿಲ್ಲಿಸಬೇಕು ಎನ್ನುತ್ತಿದೆ ದೆಹಲಿಯ ಈ ಉದಾಹರಣೆ.
ಉತ್ತರ ದೆಹಲಿಯ ವಿಜಯ್ ನಗರ ಪ್ರದೇಶದಲ್ಲಿ ನಿನ್ನೆ ರಾತ್ರಿ ಮಣಿಪುರಕ್ಕೆ ಸೇರಿದ ಮಹಿಳೆನ್ನು ಥೂ ಎಂದು ಛೇಡಿಸಿ ಮತ್ತು ಅವಳನ್ನು “ಕೊರೊನಾ” ಎಂದು ಕರೆದ ವ್ಯಕ್ತಿಯ ವಿರುದ್ಧ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 509 ಪ್ರಕಾರ “ಒಬ್ಬ ಮಹಿಳೆಯನ್ನು ಅವಮಾನಿಸಲು, ಯಾವುದೇ ಪದವನ್ನು ಉಚ್ಚರಿಸುವ, ಯಾವುದೇ ಶಬ್ದವನ್ನು ಮಾಡುವ, ಅಥವಾ ಯಾವುದೇ ವಸ್ತುವನ್ನು ಪ್ರದರ್ಶಿಸುವ, ಅಂತಹ ಪದ ಅಥವಾ ಧ್ವನಿಯನ್ನು ಕೇಳಬೇಕು, ಅಥವಾ ಅಂತಹ ಗೆಸ್ಚರ್ ಅಥವಾ ಆಬ್ಜೆಕ್ಟ್ ಅನ್ನು ಅಂತಹ ಮಹಿಳೆ ನೋಡಬೇಕು, ಅಥವಾ ಅಂತಹ ಮಹಿಳೆಯ ಗೌಪ್ಯತೆಗೆ ಭಂಗತರುವ ಕಾಯ್ದೆಯಾಗಿದೆ. ಇದಕ್ಕೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಸರಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ”.
ಈಗ ತಿಳಿಯಿತೆ, ನಾವು ಹಾಸ್ಯ ಮಾಡಬೇಕಾದರೆ ಬಹುತೇಕ ಸಲ ಅದರ ವಸ್ತು ನಾವೇ ಆಗಿರಬೇಕು. ಬೇರೊಬ್ಬರನ್ನು ನೋಡಿ ಛೇಡಿಸುವುದಕ್ಕಿಂತ ನಮ್ಮ ಮೇಲೆಯೇ ಹಾಸ್ಯ ಮಾಡುವುದು ಮಾನವೀಯ ಮನುಷ್ಯರ ಗುಣವಾಗಿರುತ್ತದೆ. ಚಾರ್ಲಿ ಚಾಪ್ಲಿನ್ ಇದಕ್ಕೊಂದು ದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರ ಬಹುತೇಕ ಸಿನಿಮಾಗಳನ್ನು ಅವರು ತಮ್ಮನ್ನೇ ಗೇಲಿ ಮಾಡಿಕೊಳ್ಳುವ ಮೂಲಕ ನಮ್ಮನ್ನು ನಗಿಸುತ್ತಾರೆ. ಅಲ್ಲದೇ ಅವರ ಎಲ್ಲಾ ಸಿನಿಮಾಗಳು ತುಳಿತಕ್ಕೊಳಕ್ಕಾದವರ ಪರ, ಸರ್ವಾಧಿಕಾರಿಗಳ ವಿರುದ್ಧದ ಆಶಯಗಳನ್ನು ವ್ಯಕ್ತಪಡಿಸುತ್ತವೆ. ಅಂತಹ ಮಹಾನ್ ನಟ ನಮಗೆ ಆದರ್ಶವಾಗಬೇಕಲ್ಲವೇ?


