ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಆಡಳಿತ ಕೊನೆಗೊಂಡಿದೆ.
ಕೇರಳ ರಾಜಧಾನಿಯಾದ ತಿರುವನಂತಪುರಂ ಮಹಾನಗರ ಪಾಲಿಕೆಯ 101 ಸ್ಥಾನಗಳ ಪೈಕಿ ಎನ್‌ಡಿಎ 50 ಸ್ಥಾನಗಳನ್ನು ಗೆದಿದ್ದೆ. ಮೊದಲ ಬಾರಿಗೆ ಇಷ್ಟು ದೊಡ್ಡ ಜನಾದೇಶವನ್ನು ಪಡೆದುಕೊಂಡಿದೆ.
ತಿರುವನಂತಪುರಂ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಅವರು ಪ್ರತಿನಿಧಿಸುವ ಕ್ಷೇತ್ರವಾಗಿದೆ.
ರಾಜ್ಯದಾದ್ಯಂತ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್, ಪುರಸಭೆ ಮತ್ತು ಮಹಾನಗರ ಪಾಲಿಕೆಗಳಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್-ಮುಸ್ಲಿಂ ಲೀಗ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದೆ.
ಶಶಿ ತರೂರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತನ್ನ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ತನ್ನ ತವರು ಕ್ಷೇತ್ರದಲ್ಲಿ ಗೆದ್ದ ಎನ್‌ಡಿಎಗೂ ಅಭಿನಂದನೆ ತಿಳಿಸಿದ್ದಾರೆ. ತಿರುವನಂತಪುರಂನಲ್ಲಿ ಎನ್‌ಡಿಎ ಗೆಲುವು “ಪ್ರಜಾಪಪ್ರಭುತ್ವದ ಸೌಂದರ್ಯ” ಎಂದಿದ್ದಾರೆ.
“45 ವರ್ಷಗಳ ಎಲ್‌ಡಿಎಫ್ ದುರಾಡಳಿತದ ಬದಲಾವಣೆಗಾಗಿ ನಾನು ಪ್ರಚಾರ ಮಾಡಿದ್ದೆ. ಆದರೆ, ಮತದಾರರು ಅಂತಿಮವಾಗಿ ಆಡಳಿತದಲ್ಲಿ ಸ್ಪಷ್ಟ ಬದಲಾವಣೆಯನ್ನು ಬಯಸಿದ ಮತ್ತೊಂದು ಪಕ್ಷಕ್ಕೆ ಪ್ರತಿಫಲ ನೀಡಿದ್ದಾರೆ. ಇದು ಪ್ರಜಾಪ್ರಭುತ್ವದ ಸೌಂದರ್ಯ. ಒಟ್ಟಾರೆಯಾಗಿ ಯುಡಿಎಫ್ ಆಗಿರಲಿ ಅಥವಾ ನನ್ನ ಕ್ಷೇತ್ರದಲ್ಲಿ ಬಿಜೆಪಿಯಾಗಿರಲಿ, ಜನರ ತೀರ್ಪನ್ನು ಗೌರವಿಸಬೇಕು” ಎಂದು ಶಶಿ ತರೂರ್ ಬರೆದುಕೊಂಡಿದ್ದಾರೆ.
ನಾವು ಕೇರಳದ ಅಭಿವೃದ್ದಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಜನರ ಅಗತ್ಯಗಳನ್ನು ಪೂರೈಸುತ್ತೇವೆ ಮತ್ತು ಉತ್ತಮ ಆಡಳಿತದ ತತ್ವಗಳನ್ನು ಎತ್ತಿಹಿಡಿಯುತ್ತೇವೆ ಎಂದಿದ್ದಾರೆ.


