ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಮೇಕಳಿ ಗ್ರಾಮದ ರಾಮಲಿಂಗ ಮಠದ ಹಠಯೋಗಿ ಲೋಕೇಶ್ವರ ಸ್ವಾಮಿ ಅವರನ್ನು ‘ಪೋಕ್ಸೋ’ ಹಾಗೂ ‘ಅಪಹರಣ’ ಪ್ರಕರಣದಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.
ಪಿಯುಸಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಕಳೆದ ಮೇ 13ರಂದು ಅಪಹರಿಸಿದ್ದ ಸ್ವಾಮಿ, ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಖುದ್ದು ದೂರು ದಾಖಲಿಸಿದ್ದರು. ದೂರು ಆಧರಿಸಿ ಮೇ 21ರಂದು ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತ ಬಾಲಕಿ ಮತ್ತು ಆಕೆಯ ತಂದೆ ಅನಾರೋಗ್ಯದ ಕಾರಣ ಕಳೆದ ಎರಡು ವರ್ಷಗಳಿಂದ ಆರೋಪಿ ಸ್ವಾಮಿಯ ಮಠಕ್ಕೆ ಭೇಟಿ ಕೊಡುತ್ತಿದ್ದರು. ಸ್ವಾಮಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಮೇ 13ರಂದು ಬಾಲಕಿ ತನ್ನ ಸೋದರ ಮಾವನ ಮನೆಗೆ ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಆಕೆಯನ್ನು ನೋಡಿದ ಸ್ವಾಮಿ, ಮನೆಗೆ ಬಿಡುವುದಾಗಿ ಕಾರಿಗೆ ಹತ್ತಿಸಿಕೊಂಡಿದ್ದರು. ಬಳಿಕ ಮನೆ ಮುಂದೆ ಇಳಿಸದೆ ಬೆದರಿಸಿ ರಾಯಚೂರಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಲಾಡ್ಜ್‌ವೊಂದರಲ್ಲಿ ಬಾಲಕಿಯನ್ನು ಉಳಿಸಿಕೊಂಡು ಮೇ 13 ಮತ್ತು 14ರಂದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಮುಂದುವರಿದು, ಮೇ 15ರಂದು ಬಾಗಲಕೋಟೆಗೆ ಬಾಲಕಿಯನ್ನು ಕರೆದೊಯ್ದ ಸ್ವಾಮಿ, ಅಲ್ಲಿನ ಲಾಡ್ಜ್‌ವೊಂದರಲ್ಲಿ ಇಡೀ ದಿನ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಮೇ 16ರಂದು ಬಾಲಕಿ ಮನೆಗೆ ಹೋಗಬೇಕೆಂದು ಅಳಲು ಶುರು ಮಾಡಿದಾಗ, ಮಹಾಲಿಂಗಪುರ ಪಟ್ಟಣಕ್ಕೆ ಕರೆದೊಯ್ದು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ವಿಷಯ ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದ್ದರಿಂದ ಸುಮ್ಮನಿದ್ದೆ ಎಂದು ಬಾಲಕಿ ಹೇಳಿರುವುದಾಗಿ ವರದಿಗಳು ವಿವರಿಸಿವೆ.
ಆರಂಭದಲ್ಲಿ ಸುಮ್ಮನಿದ್ದ ಬಾಲಕಿ, ಬಳಿಕ ತನ್ನ ತಂದೆಗೆ ವಿಷಯ ತಿಳಿಸಿದ್ದರು. ಮೇ 21ರಂದು ಪೋಷಕರೊಂದಿಗೆ ಬಾಗಲಕೋಟೆ ಮಹಿಳಾ ಠಾಣೆಗೆ ಹೋಗಿ ದೂರು ನೀಡಿದ್ದರು. ಪೊಲೀಸರು ಪ್ರಕರಣವನ್ನು ಅಲ್ಲಿಂದ ಮೂಡಲಗಿ ಠಾಣೆಗೆ ವರ್ಗಾಯಿಸಿದ್ದರು. ಮೂಡಲಗಿ ಪೊಲೀಸರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ಅವರನ್ನು ಪ್ರಸ್ತುತ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಹೆದ್ದಾರಿಯ ಮಧ್ಯೆಯೆ ಲೈಂಗಿಕ ಕ್ರಿಯೆ ನಡೆಸಿದ ಬಿಜೆಪಿ ನಾಯಕ; ವಿಡಿಯೊ ವೈರಲ್!