2019ರಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ರಾಯಬಾಗ ತಾಲೂಕಿನ ಪರಮಾನಂದವಾಡಿ ಮೂಲದ ಭರತೇಶ್ ರಾವಸಾಬ ಮಿರ್ಜಿ(28) ಎಂಬಾತನಿಗೆ ಬೆಳಗಾವಿ ಜಿಲ್ಲಾ ಪೊಕ್ಸೊ ನ್ಯಾಯಾಲಯವು ಶುಕ್ರವಾರ (ಸೆ.26) ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯಲ್ಲಿ ಮಿರ್ಜಿ ವಿರುದ್ದ ಹೊರಿಸಲಾಗಿದ್ದ ಅತ್ಯಾಚಾರ, ಕೊಲೆ ಮತ್ತು ಸಾಕ್ಷ್ಯ ನಾಶ ಸೇರಿದಂತೆ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ವರದಿಯಾಗಿದೆ.
2019ರ ಅಕ್ಟೋಬರ್ 15ರಂದು ಸಂಜೆ ಬಾಲಕಿ ಮನೆ ಹತ್ತಿರದ ಅಂಗಡಿಗೆ ಹೋಗಿ ಮರಳುವಾಗ ಅಪರಾಧಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆಕೆಯ ದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿದ್ದ. ಹುಡುಕಾಟದ ವೇಳೆ ಶ್ವಾನದಳದ ಸಹಾಯದಿಂದ ಬಾವಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಬಾಲಕಿಯ ತಂದೆ ನೀಡಿದ್ದ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಿದ್ದ ಕುಡಚಿ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ 20 ಸಾಕ್ಷಿಗಳ ಹೇಳಿಕೆ, 106 ದಾಖಲೆಗಳು ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಭರತೇಶ್ ವಿರುದ್ಧದ ಆರೋಪಗಳು ಸಾಬೀತಾಗಿವೆ.
ಬೆಳಗಾವಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ-1ರ ನ್ಯಾಯಾಧೀಶೆ ಸಿ.ಎಂ ಪುಷ್ಪಲತಾ ಅವರು ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಮರಣದಂಡನೆ ಜೊತೆಗೆ ವಿವಿಧ ಶಿಕ್ಷೆಗಳು ಹಾಗೂ ದಂಡ ವಿಧಿಸಿದ್ದಾರೆ. ಜೊತೆಗೆ ಬಾಲಕಿಯ ತಂದೆ-ತಾಯಿಗೆ 10 ಲಕ್ಷ ರೂ. ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ ಪಾಟೀಲ್ ವಾದ ಮಂಡಿಸಿದ್ದರು.
ಬೆಂಗಳೂರು| ಸೀರೆ ಕಳವು ಆರೋಪ: ಮಹಿಳೆಗೆ ಬೂಟುಗಾಲಿನಲ್ಲಿ ಒದ್ದ ಮಾಲೀಕರ ಬಂಧನ


