ಕೊರೊನಾ ಎರಡನೇ ಅಲೆಯ ಬಗ್ಗೆ ಆರೋಗ್ಯ ತಜ್ಞರಿಂದ ಎಚ್ಚರಿಸಿರುವ ಪಶ್ಚಿಮ ಬಂಗಾಳ ಸರ್ಕಾರ ರಾಜಕೀಯ ರ್‍ಯಾಲಿಗಳಲ್ಲಿ ಮಾಸ್ಕ್ ಧರಿಸಲು ಮತ್ತು ದೈಹಿಕ ಅಂತರವನ್ನು ಕಡ್ಡಾಯಗೊಳಿಸುವಂತೆ ಎಲ್ಲಾ ಜಿಲ್ಲಾ ಆಡಳಿತಗಳಿಗೆ ಸೋಮವಾರ ನಿರ್ದೇಶನ ನೀಡಿದೆ.
ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯ, ಜಿಲ್ಲಾ ನ್ಯಾಯಾಧೀಶರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗಿನ ಸಭೆಯಲ್ಲಿ, ಬಂಗಾಳದ ಕೊರೊನಾ ಪರಿಸ್ಥಿತಿಯ ಬಗ್ಗೆ ಮತ್ತು ಚುನಾವಣೆಯ ಮಧ್ಯೆ ಅದರ ಹರಡುವಿಕೆಯನ್ನು ನಿಯಂತ್ರಿಸುವ ಸಿದ್ಧತೆಯ ಬಗ್ಗೆ ಚರ್ಚಿಸಲಾಯಿತು.
“ಚುನಾವಣೆಗಳು ಹತ್ತಿರದಲ್ಲಿವೆ, 30 ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ (ಮಾರ್ಚ್ 27 ರಂದು) ಚುಣಾವಣೆ ನಡೆಯುತ್ತವೆ. ಈ ಸಮಯದಲ್ಲಿ ಕೊರೊನಾ ಸಂಖ್ಯೆಯಲ್ಲಿನ ಈ ಹಠಾತ್ ಏರಿಕೆ ಆತಂಕದ ವಿಷಯವಾಗಿದೆ” ಎಂದು ಸಭೆಯಲ್ಲಿ ಭಾಗವಹಿಸಿದ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇರಳ ನಾಮಪತ್ರ ವಿವಾದ- ಬಿಜೆಪಿ ಅಭ್ಯರ್ಥಿಗಳ ಮನವಿ ಹೈಕೋರ್ಟ್‌ನಲ್ಲೂ ತಿರಸ್ಕೃತ
ರೋಗ ತಡೆಗಟ್ಟುವುದು ಹಾಗೂ ಜನರು ಮೂಲಭೂತ ನೈರ್ಮಲ್ಯ ನಿಯಮಗಳನ್ನು ಅನುಸರಿಸುತ್ತಾರೆಯೆ ಎಂದು ಖಚಿತಪಡಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿ ಮತ್ತು ಎಸ್ಪಿಗಳನ್ನು ಕೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಿಎಪಿಎಫ್ ಸಿಬ್ಬಂದಿ, ಬೂತ್ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಾಂಕ್ರಮಿಕಕ್ಕೆ ಬಲಿಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಗೃಹ ಕಾರ್ಯದರ್ಶಿ ಎಚ್.ಕೆ. ದ್ವೀದೇವಿ, ಡಿಜಿಪಿ ನೀರಜ್ ನಾಯನ್ ಮತ್ತು ರಾಜ್ಯ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಎಲ್ಲೆಲ್ಲೋ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಬಿಜೆಪಿ ನಾಯಕರಿಗಾಗಿ ಬಟ್ಟೆ ಖರೀದಿ- ಸಿದ್ದರಾಮಯ್ಯ


