Homeಕರ್ನಾಟಕಟರ್ಬನ್‌ಗೂ ವಿರೋಧ ಆರಂಭ: ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಟರ್ಬನ್ ತೆಗೆಯುವಂತೆ ಸಿಖ್ ವಿದ್ಯಾರ್ಥಿನಿಗೆ ಒತ್ತಡ

ಟರ್ಬನ್‌ಗೂ ವಿರೋಧ ಆರಂಭ: ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಟರ್ಬನ್ ತೆಗೆಯುವಂತೆ ಸಿಖ್ ವಿದ್ಯಾರ್ಥಿನಿಗೆ ಒತ್ತಡ

ಸಂವಿಧಾನದ ಆರ್ಟಿಕಲ್ 25, ಸಿಖ್ ಪುರುಷ ಮತ್ತು ಮಹಿಳೆಯರಿಗೆ ಟರ್ಬನ್ ಧರಿಸುವ ಹಕ್ಕು ನೀಡಿದೆ.

- Advertisement -
- Advertisement -

ಕಳೆದೆರಡು ತಿಂಗಳಿನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿರುವ ರಾಜ್ಯದ ವಿಷಯ ಹಿಜಾಬ್. ನ್ಯಾಯಾಲಯದಲ್ಲಿ ಹಿಜಾಬ್ ಪರ-ವಿರೋಧ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ನ್ಯಾಯಾಲಯದ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಬಹುತೇಕ ಕಾಲೇಜುಗಳು ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯುವಂತೆ ಪಟ್ಟು ಹಿಡಿದಿವೆ. ಇದರ ಜೊತೆಗೆ ಹೊಸ ಸೇರ್ಪಡೆಯಾಗಿ ಟರ್ಬನ್ ಧರಿಸುವ ವಿದ್ಯಾರ್ಥಿನಿಯರ ಮೇಲೂ ಒತ್ತಡ ಉಂಟಾಗಿದೆ.

ಹೌದು, ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಆಡಳಿತ ಮಂಡಳಿ ಸಿಖ್ ವಿದ್ಯಾರ್ಥಿನಿಯೊಬ್ಬರಿಗೆ ಟರ್ಬನ್ ತೆಗೆದು ಬರುವುದಾದರೆ ಮಾತ್ರ ತರಗತಿಗೆ ಪ್ರವೇಶ ಎಂದು ನಿರ್ದೇಶಿಸಿದ್ದಾರೆ. ಫೆಬ್ರವರಿ 10ರ ಹೈಕೋರ್ಟ್ ಮಧ್ಯಂತರ ಆದೇಶದ ಮೇರೆಗೆ 17 ವರ್ಷದ ಅಮೃತ್‌ಧಾರಿ (ದೀಕ್ಷಾಸ್ನಾನ ಪಡೆದ) ಸಿಖ್ ವಿದ್ಯಾರ್ಥಿನಿಗೆ ಟರ್ಬನ್‌ ತೆಗೆಯಬೇಕು ಎಂದು ಆದೇಶಿಸಲಾಗಿದೆ.

ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆಯು ಆಗಿರುವ ವಿದ್ಯಾರ್ಥಿನಿಗೆ ಫೆಬ್ರವರಿ 16 ರಂದು ಮೊದಲ ಬಾರಿಗೆ ತನ್ನ ಟರ್ಬನ್‌ ತೆಗೆಯುವಂತೆ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಆದರೆ, ಆಕೆ ನಿರಾಕರಿಸಿ, ತನ್ನ ತಂದೆಗೆ ಈ ವಿಷಯ ತಿಳಿಸಿದ್ದಾರೆ. ಕಾಲೇಜು ಆಡಳಿತ ಆಕೆಯ ತಂದೆಯೊಂದಿಗೆ ಮಾತನಾಡಿ, ತಮಗೆ ಸಿಖ್‌ ಟರ್ಬನ್‌ನ ಪ್ರಾಮುಖ್ಯತೆ ತಿಳಿದಿದೆ. ಆದರೆ, ತಾವು ಹೈಕೋರ್ಟ್ ಆದೇಶಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

 ಇದನ್ನೂ ಓದಿ: ಟರ್ಬನ್ ಆಯ್ಕೆಯಾಗಿರಬಹುದಾದರೆ, ಹಿಜಾಬ್ ಏಕೆ ಆಗಬಾರದು?: ನಟಿ ಸೋನಮ್ ಕಪೂರ್ ಪ್ರಶ್ನೆ

ಸೋಮವಾರ ಕಾಲೇಜಿನಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆ ವೇಳೆ ಕಾಲೇಜಿನಲ್ಲಿ ಪರಿಶೀಲನೆ ನಡೆಸುತ್ತಿದ್ದ ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಶ್ರೀರಾಮ್ ಅವರು ನ್ಯಾಯಾಲಯದ ಆದೇಶದಂತೆ ಇಬ್ಬರು ವಿದ್ಯಾರ್ಥಿಗಳಿಗೆ ಹಿಜಾಬ್ ತೆಗೆಯುವಂತೆ ಸೂಚಿಸಿದ್ದರಿಂದ ಈ ಸಮಸ್ಯೆ ಆರಂಭವಾಗಿದೆ. ಯಾವುದೇ ವಿದ್ಯಾರ್ಥಿನಿಗೆ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ ಎಂದರೇ, ಸಿಖ್ ವಿದ್ಯಾರ್ಥಿನಿಯರಿಗೂ ಟರ್ಬನ್ ಧರಿಸಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಕಾಲೇಜು ಆಡಳಿತಮಂಡಳಿ ಸಿಖ್ ವಿದ್ಯಾರ್ಥಿನಿ ಟರ್ಬನ್ ತೆಗೆಯುವಂತೆ ತಿಳಿಸಿ, ಆಕೆಯ ತಂದೆಗೆ ಈ ಬಗ್ಗೆ ಇ-ಮೇಲ್ ಮಾಡಿದ್ದಾರೆ.

ಈ ಕುರಿತು ವಿದ್ಯಾರ್ಥಿನಿ ತಂದೆ ಗುರುಚರಣ್ ಸಿಂಗ್, ಗುರುಸಿಂಗ್ ಸಭಾಗೆ ಪತ್ರ ಬರೆದಿದ್ದಾರೆ. ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅಮೃತ್‌ಧಾರಿ ಸಿಖ್‌ ಆಗಿರುವ ನನ್ನ ಮತ್ತು ನನ್ನ ಕುಟುಂಬಕ್ಕೆ ಎಂದಿಗೂ ತೊಂದರೆಯಾಗಿಲ್ಲ. ನನಗೆ ಮೂವರು ಹೆಣ್ಣು ಮತ್ತು ಒಬ್ಬ ಗಂಡು ಮಗನಿದ್ದಾನೆ. ನನ್ನ ಎಲ್ಲಾ ಹೆಣ್ಣು ಮಕ್ಕಳು ಕೇಂದ್ರಿಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಹೆಮ್ಮೆಯಿಂದ ಶಾಲೆಯಲ್ಲಿ ಈ ಐದು ಕಕ್ಕರ್‌ಗಳನ್ನು ( Uncut Hair and Keski(Dastaar), Kanga, Kara, Kirpaan and Kachera) ಧರಿಸಿದ್ದರು. 16 ವರ್ಷಗಳಿಂದ ಯಾರೂ ಇದನ್ನು ವಿರೋಧಿಸಲಿಲ್ಲ ಎಂದು ಹೇಳಿದ್ದಾರೆ.

ಮಕ್ಕಳು ಶಾಲೆಯಲ್ಲಿ ಸಿಖ್ ಮಾರ್ಷಲ್ ಆರ್ಟ್ ಮತ್ತು ಕೀರ್ತನ್ ಅನ್ನು ವಿಭಿನ್ನವಾಗಿ ಪ್ರದರ್ಶಿಸಿದ್ದಾರೆ. ನನ್ನ ಮಗಳು ತನ್ನ ಟರ್ಬನ್ ಜೊತೆಗೆ ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಅಲ್ಲಿಯೂ ಹೆಲ್ಮೆಟ್ ಬಳಸಲಿಲ್ಲ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ, ಸಿಖ್ ಪುರುಷರು ಮತ್ತು ಮಹಿಳೆಯರು ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಟರ್ಬನ್ ಧರಿಸುತ್ತಾರೆ. ಭಾರತೀಯ ಸೇನೆ ಮತ್ತು ಇತರ ದೇಶಗಳಲ್ಲಿ ಸಿಖ್ ಸೈನಿಕರು ಕ್ಯಾಪ್ ಅಥವಾ ಹೆಲ್ಮೆಟ್ ಬದಲಿಗೆ ಟರ್ಬನ್ ಧರಿಸುತ್ತಾರೆ. ಯುದ್ಧದ ನಡುವೆಯೂ ಸಹ ಹೆಲ್ಮೆಟ್ ಬದಲಿಗೆ ಟರ್ಬನ್  ಧರಿಸುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Hijab Live | ಹಿಜಾಬ್ ಲೈವ್‌ | ಮಧ್ಯಂತರ ಆದೇಶ ವಿದ್ಯಾರ್ಥಿಗಳಿಗಷ್ಟೆ ಅನ್ವಯ, ಶಿಕ್ಷಕರಿಗಲ್ಲ: ಮುಖ್ಯ ನ್ಯಾಯಮೂರ್ತಿ

“ಆದರೆ, ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಇಂದು ನಡೆದ ಘಟನೆ ನಮ್ಮ ಕುಟುಂಬವನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗಳು, ಪಿಯು ಎರಡನೇ ವರ್ಷದ ವಿದ್ಯಾರ್ಥಿನಿ ಮತ್ತು ಕಾಲೇಜಿನ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಅಮಿತೇಶ್ವರ್ ಕೌರ್ ಅವರನ್ನು ಕಾಲೇಜು ಅಧಿಕಾರಿಗಳು ಕರೆದು ಟರ್ಬನ್ ತೆಗೆದು ನಂತರ ಕಾಲೇಜಿಗೆ ಬರಬಹುದೇ ಎಂದು ಕೇಳಿದ್ದಾರೆ. ಆದರೆ ಅಕೆ ಅಮೃತಧಾರಿ ಸಿಖ್ ಆಗಿರುವುದರಿಂದ ಅದನ್ನು ನಿರಾಕರಿಸಿದ್ದಾರೆ. ಸಿಖ್‌ ಸಮುದಾಯದವರಿಗೆ ಟರ್ಬನ್ ತೆಗೆಯಲು ಹೇಳುವುದು ಇಡೀ ಸಿಖ್ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನ” ಎಂದಿದ್ದಾರೆ.

“ತಮ್ಮ ನಂಬಿಕೆಯ ಭಾಗವಾಗಿ ಸ್ಕಾರ್ಫ್ / ದುಪಟ್ಟಾದಿಂದ ತಲೆಯನ್ನು ಮುಚ್ಚಲು ಬಯಸುವ ಮುಸ್ಲಿಂ ಹುಡುಗಿಯರು/ಮಹಿಳೆಯರ ಪರವಾಗಿ ನಾವು ಸಹ ನಿಲ್ಲುತ್ತೇವೆ ಮತ್ತು ನಮ್ಮ ದೇಶದಲ್ಲಿ ಈಗಾಗಲೇ ಆಚರಣೆಯಲ್ಲಿರುವಂತೆ, ಇದರಿಂದ ಯಾರಿಗೂ ಯಾವುದೇ ತೊಂದರೆಯು ಆಗದ ಕಾರಣ, ಸ್ಕಾರ್ಫ್ ಮತ್ತು ಟರ್ಬನ್ ಬಣ್ಣವು ಸಂಸ್ಥೆಯ ಸಮವಸ್ತ್ರದೊಂದಿಗೆ ಹೊಂದಿಕೆಯಾಗುವವಂತಿದ್ದು ಅವರಿಗೆ ಧರಿಸಲು ಅವಕಾಶ ನೀಡುವಂತೆ ಅಧಿಕಾರಿಗಳನ್ನು ವಿನಂತಿಸುತ್ತೇವೆ” ಎಂದು ತಿಳಿಸಿದ್ದಾರೆ.

ಈ ಘಟನೆಯು ಒಂದೇ ಅಲ್ಲ. ವಿವಿಧ ಶಾಲೆಗಳು, ಸಂಸ್ಥೆಗಳು, ಕಾರ್ಪೊರೇಟ್‌ಗಳು, ಮೆಟ್ರೋ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು ಇತ್ಯಾದಿಗಳಲ್ಲಿ ಹಲವಾರು ಬಾರಿ ಸಂಭವಿಸಿದೆ. ಅಲ್ಲಿ ಸಿಖ್ ವಿದ್ಯಾರ್ಥಿಗಳನ್ನು ತಮ್ಮ ದೇಹದ ಮೇಲೆ ಐದು ಕಕ್ಕರ್‌ಗಳನ್ನು ಧರಿಸಲು ಅನುಮತಿ ನೀಡದೆ ಅವಮಾನಿಸಲಾಗಿದೆ. ಈ ವಿದ್ಯಾರ್ಥಿಗಳು ಅನೇಕ ಬಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸಲು ವಿಫಲರಾಗುತ್ತಾರೆ.  ಹೀಗಾಗಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪ್ರಮುಖ ಜಾಗೃತಿ ಸಮಸ್ಯೆ ಕಂಡುಬರುತ್ತಿದೆ. ಸಿಖ್ ಆಚರಣೆಗಳು, ಸಂಸ್ಕೃತಿ ಮತ್ತು ಐದು ಕಕ್ಕರ್‌ಗಳ ಪ್ರಾಮುಖ್ಯತೆಯ ಕುರಿತು ಸಂಬಂಧಿತ ಸರ್ಕಾರಿ ಅಧಿಕಾರಿಗಳಿಂದ ಈ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಬೇಕು. ಸಿಖ್ ರೆಹತ್ ಮರ್ಯಾದಾ ಮತ್ತು ಭಾರತದ ಸಂವಿಧಾನದ ಆರ್ಟಿಕಲ್ 25ರ ಪ್ರಕಾರ ಸಿಖ್ ಸಮುದಾಯವು ತಮ್ಮ ನಂಬಿಕೆಯನ್ನು ಮುಕ್ತವಾಗಿ ಅನುಸರಿಸಲು ಶ್ರೀ ಗುರು ಸಿಂಗ್ ಸಭಾ ಎಲ್ಲಾ ಸಂಸ್ಥೆಗಳಿಗೆ ಒಂದು ಸುತ್ತೋಲೆ ಕಳುಹಿಸುವ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸಾಮಾನ್ಯ ಜನರ ಸ್ಥಿತಿ ನೆನೆದು ಆತಂಕವಾಗುತ್ತಿದೆ, ಇದಕ್ಕೆ ಹೋರಾಟವೊಂದೇ ಪರಿಹಾರ: ಮೇಘಾ

ಇನ್ನು ಈ ಘಟನೆ ಕುರಿತು ನಾನುಗೌರಿ.ಕಾಂ ಜೊತೆಗೆ ಮಾತನಾಡಿರುವ ಲೇಖಕ ಅಮನ್‌ದೀಪ್ ಸಂಧು, “ಸದ್ಯದಲ್ಲಿ ಈ ಘಟನೆಯ ವಿಚಾರಣೆ ವೇಗ ಪಡೆಯಬೇಕು. ಪ್ರಕರಣ ಬೀದಿಗಿಳಿದೆರೆ ನಿಜಕ್ಕೂ ಕೆಟ್ಟ ಸ್ಥಿತಿ ಉಂಟಾಗುತ್ತದೆ. ಸಂವಿಧಾನದ ಆರ್ಟಿಕಲ್ 25 ಸಿಖ್ ಪುರುಷ ಮತ್ತು ಮಹಿಳೆಯರಿಗೆ ಟರ್ಬನ್ ಧರಿಸುವ ಹಕ್ಕು ನೀಡಿದೆ. ಆದ್ದರಿಂದ ಇದು ಸಂವಿಧಾನದ ಉಲ್ಲಂಘನೆಯಗುತ್ತದೆ. ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರಿಗೆ ಏನು ಬೇಕೊ ಅದನ್ನು ಧರಿಸಲು ನ್ಯಾಯಾಲಯ ಅನುಮತಿ ನೀಡಬೇಕು. ಶಿಕ್ಷಣ ಮುಖ್ಯವಾಗಬೇಕೆ ಹೊರತು ಅವರು ಧರಿಸು ಬಟ್ಟೆಯಲ್ಲ. ಮುಸ್ಲಿಂಮರು ಹಿಜಾಬ್, ಸಿಖ್ಖರು ಟರ್ಬನ್, ಹಿಂದೂಗಳು ಜನಿವಾರ, ಸಿಂಧೂರ ಧರಿಸುತ್ತಾರೆ. ನಾವು ಮನುಷ್ಯರು ನಾವು ಇರುವುದೇ ಹೀಗೆ…ಹೀಗಾಗಿ ಶಿಕ್ಷಣ ಮುಖ್ಯವಾಗಬೇಕು” ಎಂದಿದ್ದಾರೆ.

“ಇದಲ್ಲದೇ ಟರ್ಬನ್ ಧರಿಸುವ ಒಂದು ಕಾರಣಕ್ಕೆ ಮಂಗಳೂರಿನಲ್ಲಿ 7 ವರ್ಷದ ಸಿಖ್ ಮಗುವಿಗೆ ಶಾಲಾ ದಾಖಲಾತಿ ನಿರಾಕರಿಸಲಾಗಿದೆ. ಇಂತಹ ವಿಚಾರ ಬೀದಿಗೆ (ಪ್ರತಿಭಟನೆಗೆ) ಬಂದರೆ ಮಾತ್ರ ಪರಿಸ್ಥಿತಿ ಅತಿ ಕೆಟ್ಟದಾಗುತ್ತದೆ. ಐತಿಹಾಸಿಕ ರೈತ ಆಂದೋಲನ ಹಿಂದುತ್ವ ಸರ್ಕಾರವನ್ನು ಸೋಲಿಸಿದೆ. ಈಗ ಮತ್ತೆ ಈ ಘಟನೆ ಹಿಂದುತ್ವಕ್ಕೆ ಭಾರಿ ಪೆಟ್ಟು ನೀಡುತ್ತದೆ. ಇದು ಈಗಾಗಲೇ ದೊಡ್ಡ ವಿವಾದವಾಗಿದೆ. ಬಿಜೆಪಿ ಆಡಳಿತದ ಮಧ್ಯಪ್ರದೇಶ, ಪುದುಚರಿ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ನಡೆಯುತ್ತಿದೆ. ಇದು ಜನರನ್ನು ನೈಜ್ಯ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ಯತ್ನ” ಎಂದು ಆರೋಪಿಸಿದ್ದಾರೆ.

ನ್ಯಾಯಾಲಯದ ಮಧ್ಯಂತರ ಆದೇಶವು ಕಾಲೇಜು ಅಭಿವೃದ್ಧಿ ಸಮಿತಿಗಳು ವಿದ್ಯಾರ್ಥಿಗಳ ಡ್ರೆಸ್ ಕೋಡ್ ಅಥವಾ ಸಮವಸ್ತ್ರವನ್ನು ಸೂಚಿಸಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...