ಹದಿನಾರನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಲಾಗುವ “ಜೀವಮಾನ ಸಾಧನೆ ಪ್ರಶಸ್ತಿ”ಗೆ ಭಾರತೀಯ ಚಲನಚಿತ್ರರಂಗದ ಖ್ಯಾತ ನಟಿ ಶಬಾನಾ ಅಝ್ಮಿ ಅವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸಮಿತಿಯು ಸಭೆ ಸೇರಿ ಶಬಾನಾ ಅಝ್ಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಸರ್ಕಾಕ್ಕೆ ಶಿಫಾರಸ್ಸು ಮಾಡಿದೆ.
ಹೆಸರಾಂತ ಚಲನಚಿತ್ರ ನಟಿ ಶಬಾನಾ ಅಝ್ಮಿ ಅವರನ್ನು ಜೀವಮಾನದ ಸಾಧನೆಗಾಗಿ ರಾಜ್ಯ ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 1ರಂದು ಉದ್ಘಾಟನೆಗೊಂಡ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂದು (ಮಾ.8) ಸಮಾರೋಪಗೊಳ್ಳಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಶಬಾನಾ ಅಝ್ಮಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಶಬಾನಾ ಅಝ್ಮಿ ಸಂಕ್ಷಿಪ್ತ ಪರಿಚಯ
ಶಬಾನಾ ಅಝ್ಮಿ ಸೆಪ್ಟೆಂಬರ್ 18,1950ರಂದು ಹೈದರಾಬಾದ್‌ನಲ್ಲಿ ಪ್ರಸಿದ್ಧ ಕವಿ ಕೈಫಿ ಅಝ್ಮಿ ಮತ್ತು ಶೌಕತ್ ಅಝ್ಮಿ ದಂಪತಿಗೆ ಮಗಳಾಗಿ ಜನಿಸಿದರು. ತಮ್ಮ 24ನೇ ವಯಸ್ಸಿನಲ್ಲಿ ಚಲನಚಿತ್ರ ವೃತ್ತಿ ಜೀವನವನ್ನು ಪ್ರಾರಂಭಿಸಿ ಅವರ ಮೊದಲ ಚಿತ್ರ ‘ಅಂಕುರ್’ 1974ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅವರ ನಟನೆಯು ಮೆಚ್ಚುಗೆ ಪಡೆಯಿತು.
ಭಾರತೀಯ ಚಲನಚಿತ್ರ, ದೂರದರ್ಶನ ಹಾಗೂ ರಂಗಭೂಮಿ ನಟಿಯಾಗಿರುವ ಶಬಾನಾ ಅಝ್ಮಿ ಹಿಂದಿ ಚಲನಚಿತ್ರೋದ್ಯಮದಲ್ಲಿ ಸುಮಾರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಭಾರತದ ಅತ್ಯಂತ ಮೆಚ್ಚುಗೆ ಪಡೆದ ನಟಿಯಲ್ಲಿ ಒಬ್ಬರಾದ ಶಬಾನ ಅಝ್ಮಿ, ಹಲವಾರು ಪ್ರಕಾರಗಳಲ್ಲಿ ನಟಿಸಿ ಮಹಿಳಾ ಪಾತ್ರಗಳಿಗೆ ಜೀವತುಂಬಿ ಹೆಸರುವಾಸಿಯಾಗಿದ್ದಾರೆ.
ಐದು ಫಿಲ್ಮ್ ಫೇರ್ ಪ್ರಶಸ್ತಿಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಪುರಸ್ಕಾರಗಳ ಜೊತೆಗೆ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶಬಾನಾ ಅಝ್ಮಿ ಅವರಿಗೆ ಸಂದಿವೆ. ಭಾರತ ಸರ್ಕಾರ 1998ರಲ್ಲಿ ಪದ್ಮಶ್ರೀ ಮತ್ತು 2012ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇಸ್ರೇಲ್- ಪ್ಯಾಲೆಸ್ತೀನ್‌ನ ಸಾಕ್ಷ್ಯಚಿತ್ರ ‘ನೋ ಅದರ್ ಲ್ಯಾಂಡ್’ಗೆ ಆಸ್ಕರ್ ಪ್ರಶಸ್ತಿ


