ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟಕ್ಕೆ ಖ್ಯಾತ ಕನ್ನಡ ಚಿತ್ರನಟ ಡಾ.ಶಿವರಾಜ್ ಕುಮಾರ್ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು “ರೈತ ದೇಶದ ಬೆನ್ನೆಲುಬು, ರೈತ ಇದ್ರೇನೆ ದೇಶ.. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ.. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ” ಎಂದು ತಿಳಿಸಿದ್ದಾರೆ.
ರೈತ ದೇಶದ ಬೆನ್ನೆಲುಬು , ರೈತ ಇದ್ರೇನೆ ದೇಶ .. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ ..ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ
— DrShivaRajkumar (@NimmaShivanna) December 8, 2020
ಚಿತ್ರನಟ ಚೇತನ್ ನಂತರ ರೈತರ ಪರವಾಗಿ ದನಿಯೆತ್ತಿದ ಎರಡನೇ ನಟ ಶಿವರಾಜ್ ಕುಮಾರ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ದಿಲ್ಜಿತ್ ದೋಸಂಜ್, ಸ್ವರ ಭಾಸ್ಕರ್, ರೀಚಾ ಚಡ್ಡಾ, ತಾಪ್ಸಿ ಪನ್ನು ಸೇರಿ ಬಹುತೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ನಿನ್ನೆ ಪ್ರತಿಕ್ರಿಯಿಸಿದ್ದ ಕನ್ನಡ ಚಲನಚಿತ್ರ ನಟ ಚೇತನ್ ಅಹಿಂಸಾ, “ಕನ್ನಡ ಚಲನಚಿತ್ರ ನಟರು ಚುನಾವಣಾ ಪ್ರಚಾರಕ್ಕೆ ವೇಗವಾಗಿ ಸ್ಪಂದಿಸುತ್ತಾರೆ. ಆದರೆ ರೈತರ ಪರವಾಗಿ ಒಂದೂ ಮಾತನ್ನು ಆಡಿಲ್ಲ” ಎಂದು ಕಿಡಿಕಾರಿದ್ದರು. ದೇಶಾದ್ಯಂತ ರೈತರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಚುನಾವಣಾ ಪ್ರಚಾರದ ಬ್ಯಾಂಡ್‌ವ್ಯಾಗನ್‌ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ. ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಅಥವಾ ನಮ್ಮ ಶ್ರೀಮಂತ ಗಣ್ಯ ಸ್ನೇಹಿತರನ್ನು ಇನ್ನಷ್ಟು ಪ್ರಚೋದಿಸಲು ನಾವು ನಟರು ಮಾತ್ರ ಆಸಕ್ತಿ ಹೊಂದಿದ್ದೇವೆಯೇ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕೆ ವೇಗವಾಗಿ ಧುಮುಕುವ ನಟರು ರೈತರ ಪರ ಒಂದು ಮಾತನ್ನೂ ಆಡಿಲ್ಲ: ನಟ ಚೇತನ್ ಕಿಡಿ


