ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಶಾಲೆಯಲ್ಲಿ “ಭಾರತ್ ಮಾತಾ ಕಿ ಜೈ” ಘೋಷಣೆಯ ವಿವಾದದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕನನ್ನು ಥಳಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಭೋಪಾಲ್‌ನಿಂದ ಸುಮಾರು 175 ಕಿಮೀ ದೂರದಲ್ಲಿರುವ ಬರೋಡ್ ಪಟ್ಟಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಪ್ರಕರಣದಲ್ಲಿ ಸುಮಾರು 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಾಲೆಯಲ್ಲಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗುತ್ತಿಲ್ಲ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳ ನಡುವೆ ವಿವಾದವಿತ್ತು. ಆದರೆ ಇದು ಶಾಲೆಯಲ್ಲೇ ತಣ್ಣಗಾಗಿತ್ತು. ಇದಾಗ್ಯೂ, ಕೆಲವು ವಿದ್ಯಾರ್ಥಿಗಳು ಶಾಲೆಯ ಹೊರಗೆ ಮತ್ತೊಂದು ಕಡೆಯ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಅಗರ್ ಮಾಲ್ವಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಾಗರ್ ಬುಧವಾರ ಪಿಟಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದೇಶದಲ್ಲಿ ಲಖಿಂಪುರ್ ಖೇರಿಯಂತಹ ಘಟನೆ ನಡೆಯುತ್ತಲೇ ಇರುತ್ತವೆ: ನಿರ್ಮಲಾ ಸೀತಾರಾಮನ್
“ಶಾಲೆಯಲ್ಲಿ ಪ್ರಾರ್ಥನೆಯ ನಂತರ, ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿ, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾರೆ. ಆದರೆ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ‘ಭಾರತ್ ಮಾತಾ ಕಿ ಜೈ’ ಎಂದು ಕೂಗುತ್ತಿಲ್ಲ ಎಂದು 12 ನೇ ತರಗತಿಯ ವಿದ್ಯಾರ್ಥಿ ಭರತ್ ಸಿಂಗ್ ರಜಪೂತ್ (19) ಅರೋಪಿದ್ದರು. ಇದರಿಂದಾಗಿ ವಿವಾದ ಉಂಟಾಯಿತು” ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಘಟನೆಯ ಬಗ್ಗೆ ಭರತ್ ಸಿಂಗ್ ರಜಪೂತ್ ಪೊಲೀಸರಿಗೆ ದೂರು ನೀಡಿದ್ದರು. ಇದರ ನಂತರ, ಭರತ್ ಸಿಂಗ್ ಮತ್ತು ಇತರರು ಮಂಗಳವಾರ ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಭರತ್ ಸಿಂಗ್ ಮತ್ತು ಒಬ್ಬ ಶಿಕ್ಷಕನನ್ನು ತಡೆದು ಥಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದಲ್ಲಿ ಕೆಲವು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಮತ್ತು ಪ್ರಕರಣದ ತನಿಖೆಯ ನಂತರ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಗರ್ ಮಾಲ್ವಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಸಾಗರ್ ಹೇಳಿದ್ದಾರೆ.
ಇದನ್ನೂ ಓದಿ: ರೈತರ ಹತ್ಯಾಕಾಂಡ: ಅಮಿತ್ ಶಾ ಮನೆ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ


