ಬಿಡದಿ ಉಪನಗರ ಯೋಜನೆ ಭೂ ಬೆಲೆ ನಿಗದಿ ಸಭೆಯನ್ನು ರದ್ದುಪಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ. ಈ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ, ರಾಜ್ಯ ಸಮಿತಿ ಅಧ್ಯಕ್ಷರಾಗಿರುವ ಯು. ಬಸವರಾಜ ಅವರ ನೇತೃತ್ವದಲ್ಲಿ ಪತ್ರ ಪ್ರಕಟಿಸಲಾಗಿದೆ.
ಬಿಡದಿ ಸಮಗ್ರ ಉಪ ನಗರ ಅಭಿವೃದ್ಧಿ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987 ರ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿರುವ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆಗೆ ಈಗಾಗಲೇ ಶೇಕಡಾ 80 ಕ್ಕಿಂತ ಹೆಚ್ಚು ರೈತರು ತಮ್ಮ ವಿರೋಧ ಹಾಗೂ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಿದ್ದರೂ ಪರಿಗಣಿಸದೇ ಕದ್ದುಮುಚ್ಚಿ ತರಾತರಿಯಲ್ಲಿ ದಿನಾಂಕ 06-11-25 ರಂದು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳು ಭೂ ಬೆಲೆ ದರ ನಿಗದಿ ಸಭೆ ಏರ್ಪಡಿಸಿರುವುದು ಪಾರ ದರ್ಶಕವಾಗಿಲ್ಲ, ಜೊತೆಗೆ ಇದು ನ್ಯಾಯ ನಿರಾಕರಣೆಯ ಪಿತೂರಿಯಾಗಿದೆ, ಈ ನಡೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭೂ ಸ್ವಾಧೀನಕ್ಕೆ ಒಳಪಡಿಸುತ್ತಿರುವ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 9680 ಎಕರೆ ಭೂಮಿ ಬಹು ವಾರ್ಷಿಕ ಫಲವತ್ತಾದ ಸಮೃದ್ಧ ವರ್ಷ ಪೂರ್ತಿ ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಭೂಮಿಯಾಗಿದೆ. ಪ್ರತಿಯೊಬ್ಬ ರೈತರು ಬಹು ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ತಮ್ಮ ಸಣ್ಣ ಹಿಡುವಳಿಯಲ್ಲಿ ಸುಸ್ಥಿರವಾದ ಬದುಕನ್ನು ನಡೆಸುತ್ತಿದ್ದಾರೆ. ಹೈನುಗಾರಿಕೆ, ರೇಷ್ಮೆ, ಬಾಳೆ ,ವಿವಿಧ ತರಕಾರಿಗಳು, ಅಡಿಕೆ ,ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾ ಹತ್ತಿರದ ಬೃಹತ್ ಬೆಂಗಳೂರು ಮಹಾನಗರದ ಆಹಾರದ ಕಣಜವಾಗಿದೆ. ಇಂತಹ ಫಲವತ್ತಾದ ಕೃಷಿ ಭೂಮಿ ರಕ್ಷಣೆಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ರೈತರ ಅಹವಾಲುಗಳನ್ನು ಒಮ್ಮೆಯೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಕೇಳಿಲ್ಲ. ಸ್ಥಳೀಯ ಶಾಸಕರು ಕೂಡ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ.
ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನದ ಪ್ರಾಥಮಿಕ ಅಧಿಸೂಚನೆ ನೋಟೀಸ್ ಗೆ ಲಿಖಿತವಾಗಿ ಸಾವಿರಾರು ರೈತರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಿಲ್ಲ. ಕೇವಲ ಪ್ರಾಥಮಿಕ ಅಧಿಸೂಚನೆ ಆಧಾರದ ಮೇಲೆ ಭೂ ದರ ನಿಗದಿ ಸಭೆ ಏರ್ಪಡಿಸಿರುವುದು 2013 ರ ಭೂ ಸ್ವಾಧೀನ ಕಾಯ್ದೆಯ ಗಂಭೀರ ಉಲ್ಲಂಘನೆ ಯಾಗಿದ್ದು ಕೂಡಲೇ ದರ ನಿಗದಿ ಸಭೆ ರದ್ದುಪಡಿಸಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರು ದಕ್ಷಿಣ (ರಾಮನಗರ )ಜಿಲ್ಲಾಡಳಿತ ವನ್ನು ಆಗ್ರಹಿಸುತ್ತದೆ.
ದರ ನಿಗದಿ ಭೂತವನ್ನು ಮುಂದು ಮಾಡಿ ರೈತರಲ್ಲಿ ಗೊಂದಲ ಸೃಷ್ಟಿಸಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡುತ್ತಿರುವ ರೈತರಲ್ಲಿ ಒಡಕು ಸೃಷ್ಟಿಸುವ ರಿಯಲ್ ಎಸ್ಟೇಟ್ ಕಿಡಿಗೇಡಿತನವನ್ನು ಅರ್ಥ ಮಾಡಿಕೊಂಡು ಹಿಂದಿನ ಒಡಕು ಮೂಡಿಸುವ ಪ್ರಯತ್ನ ವನ್ನು ವಿಫಲಗೊಳಿಸಿದಂತೆ ಈ ಒಡಕು ಉಂಟು ಮಾಡುವ ಪಿತೂರಿಯನ್ನು ಕೂಡ ನಿರ್ಣಾಯಕವಾಗಿ ಸೋಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ರೈತರಲ್ಲಿ ವಿನಂತಿಸುತ್ತದೆ. ಈ ರೈತರ ನ್ಯಾಯಬದ್ದವಾದ ಹೋರಾಟವನ್ನು ರಾಜ್ಯದ ಎಲ್ಲಾ ರೈತರು ಹಾಗೂ ಕಾರ್ಮಿಕರು ಬೆಂಬಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


