ಕೇರಳದ ಆನಂದ್ ಕೆ ಥಂಪಿ (40) ಎಂಬ ಆರ್‌ಎಸ್‌ಎಸ್ ಕಾರ್ಯಕರ್ತ ಶನಿವಾರ (ನವೆಂಬರ್ 15) ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತನ್ನ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಡೆತ್ ನೋಟ್ ಕಳಿಸಿದ ಬಳಿಕ ಶನಿವಾರ ಸಂಜೆ 5.20ರ ಸುಮಾರಿಗೆ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆನಂದ್ ಶವ ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
ಬಿಜೆಪಿಯ ಮಾಜಿ ಸದಸ್ಯರಾಗಿರುವ ಆನಂದ್ ತನ್ನ ಡೆತ್ ನೋಟ್‌ನಲ್ಲಿ, ತಿರುವನಂತಪುರಂ ನಗರ ಪಾಲಿಕೆಯ ಚುನಾವಣೆಗೆ ತೃಕ್ಕಣ್ಣಪುರಂ ವಾರ್ಡ್‌ನ ಪ್ರಸ್ತುತ ಬಿಜೆಪಿ ಅಭ್ಯರ್ಥಿಯಾಗಿರುವ ವಿನೋದ್ ಕುಮಾರ್, ಬಿಜೆಪಿಯ ಪ್ರದೇಶ ಕಾರ್ಯದರ್ಶಿ ಉದಯಕುಮಾರ್, ಬಿಜೆಪಿ ಕ್ಷೇತ್ರ ಸಮಿತಿ ಸದಸ್ಯ ಕೃಷ್ಣಕುಮಾರ್ ಮತ್ತು ತಿರುವನಂತಪುರಂ ನಗರ ಆರ್‌ಎಸ್‌ಎಸ್‌ನ ಕಾರ್ಯವಾಹಕ್ ರಾಜೇಶ್ ಸೇರಿದಂತೆ ಪ್ರಮುಖ ಬಿಜೆಪಿ-ಆರ್‌ಎಸ್‌ಎಸ್ ನಾಯಕರು ಮಣ್ಣಿನ ಮಾಫಿಯಾದ ಭಾಗವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ತೃಕ್ಕಣ್ಣಪುರಂ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೆ. ಟಿಕೆಟ್ ಸಿಗದ ಹಿನ್ನೆಲೆ, ಅದೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೆ. ಆ ಬಳಿಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರಿಂದ ಮಾನಸಿಕ ಒತ್ತಡವನ್ನು ಎದುರಿಸಬೇಕಾಯಿತು. ಅದು ಮಿತಿ ಮೀರಿ ಹೋಯಿತು ಎಂದು ಹೇಳಿದ್ದಾರೆ. ಯಾವುದೇ ಬಿಜೆಪಿ-ಆರ್‌ಎಸ್‌ಎಸ್ ಸದಸ್ಯರಿಗೆ ತಮ್ಮ ಮೃತದೇಹವನ್ನು ನೋಡಲು ಅವಕಾಶ ನೀಡಬಾರದು ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ.
“ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದರೆ ನಾನು ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ಬದುಕಿದ್ದು. ನನ್ನ ಸಾವಿಗೆ ಸ್ವಲ್ಪ ಮುಂಚೆ ಇದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಎಂಬ ಗುರುತು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಂದು ನಿಲ್ಲಿಸಿದೆ” ಎಂದು ಆನಂದ್ ತನ್ನ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕೇರಳದಲ್ಲಿ ಆರ್‌ಎಸ್‌ಎಸ್-ಬಿಜೆಪಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿಗೆ ಆನಂದ್ ಹೊಸ ಸೇರ್ಪಡೆಯಾಗಿದೆ. ಕಳೆದ ಸೆಪ್ಟೆಂಬರ್ 20ರಂದು ತಿರುಮಲದ ವಾರ್ಡ್ ಕೌನ್ಸಿಲರ್ ಅನಿಲ್‌ಕುಮಾರ್ ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ, ಅನಂತು ಅಜಿ ಎಂಬ ಆರ್‌ಎಸ್‌ಎಸ್ ಕಾರ್ಯಕರ್ತ ಕೂಡ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದರು. ಇನ್‌ಸ್ಟಾಗ್ರಾಮ್ ಮೂಲಕ ಅನಂತು ಹಂಚಿಕೊಂಡ ಡೆತ್ ನೋಟ್‌ನಲ್ಲಿ ಆರ್‌ಎಸ್‌ಎಸ್ ಶಿಬಿರಗಳಲ್ಲಿ ಲೈಂಗಿಕ ದೌರ್ಜನ್ಯ ಎದುರಿಸಿದ್ದು, ಅದರಿಂದ ಮಾನಸಿಕವಾಗಿ ನೊಂದು ಈ ನಿರ್ಧಾರ ಮಾಡಿದ್ದೇನೆ ಎಂದಿದ್ದರು.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104
ಬಿಹಾರದ ಎನ್‌ಡಿಎ ಗೆಲುವಿನಲ್ಲಿ ಎಸ್‌ಐಆರ್ ಪ್ರಭಾವ ಸ್ಪಷ್ಟವಾಗಿದೆ : ಕೇರಳ ಬಿಜೆಪಿ ಅಧ್ಯಕ್ಷ


