ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಕೊನೆಗೂ ದಿನಾಂಕ ನಿಗಧಿ ಮಾಡಿದೆ. ಅಕ್ಟೋಬರ್ 28 ರಿಂದ ಚುನಾವಣೆ ಆರಂಭವಾಗಲಿದ್ದು 3 ಹಂತಗಳಲ್ಲಿ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ನಾಮಪತ್ರ ಸಲ್ಲಿಕೆ ಆರಂಭ: ಮೊದಲ ಹಂತಕ್ಕೆ ಅಕ್ಟೋಬರ್ 1 ರಿಂದ ಆರಂಭ
ಮೊದಲ ಹಂತ: ಅಕ್ಟೋಬರ್ 28. (71 ಕ್ಷೇತ್ರಗಳಿಗೆ 16 ಜಿಲ್ಲೆಗಳಲ್ಲಿ)
ಎರಡನೇ ಹಂತ: ನವೆಂಬರ್ 03. (94 ಕ್ಷೇತ್ರಗಳಿಗೆ 17 ಜಿಲ್ಲೆಗಳಲ್ಲಿ)
ಮೂರನೇ ಹಂತ: ನವೆಂಬರ್ 07. (78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ)
ಫಲಿತಾಂಶ: ನವೆಂಬರ್ 10.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ಸುರಕ್ಷಿತವಾಗಿ ಚುನಾವಣೆ ನಡೆಸುವ ಭರವಸೆ ನೀಡಿದರು. ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚು ಮಾಡಿದ್ದು, ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.
ವಿಶ್ವಾದಾದ್ಯಂತ ಹರಡಿರುವ ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯು ನಡೆಯುತ್ತಿರುವ ಬಹುದೊಡ್ಡ ಚುನಾವಣೆ ಇದಾಗಿದೆ. ಹಾಗಾಗಿ ಚುನಾವಣಾ ಆಯೋಗವು ಚುನಾವಣೆ ನಡೆಸಲು ಹಲವು ನಿಬಂಧನೆಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೊನಾ ಪಾಸಿಟಿವ್ ಇರುವವರು ಸಹ ಮತದಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬಿಹಾರ ಚುನಾವಣೆಗಾಗಿ 46 ಲಕ್ಷ ಮಾಸ್ಕ್‌ಗಳು, 23 ಲಕ್ಷ ಕೈಗವಸುಗಳು, 7 ಲಕ್ಷ ಲೀಟರ್ ಸ್ಯಾನಿಟೈಸರ್, 6 ಲಕ್ಷ ಪಿಪಿಇ ಕಿಟ್‌ಗಳನ್ನು ಬಳಸಲು ನಿರ್ಧಿರಿಸಲಾಗಿದೆ ಎಂದು ಸುನೀಲ್ ಅರೋರಾ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿಯೂ ಸಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ.
ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತರೂಢ ಎನ್‌ಡಿಎ ಮತ್ತು ಮಹಾಮೈತ್ರಿ ನಡುವೆ ನೇರ ಹಣಾಹಣಿ ನಡೆಯಲಿದೆ. ಎನ್‌ಡಿಯ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್‌ರವರ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್‌ರವರ ಎಲ್‌ಜೆಪಿ ಮತ್ತು ಜತಿನ್ ರಾಮ್ ಮಾಂಝಿಯವರ ಹಿಂದೂಸ್ತಾನ್ ಅವಮ್ ಮೋರ್ಚಾ ಸೇರಿವೆ. ಇದರ ಪ್ರತಿಸ್ಪರ್ಧಿ ಮಹಾಮೈತ್ರಿಯಲ್ಲಿ ಲಾಲು ಪ್ರಸಾದ್ ಯಾದವ್‌ರವರ ಆರ್‌ಜೆಡಿ, ಕಾಂಗ್ರೆಸ್ ಪ್ರಮುಖ ಪಕ್ಷಗಳಾಗಿವೆ.
ಸದ್ಯಕ್ಕೆ ಲಾಲು ಪ್ರಸಾದ್ ಯಾದವ್‌ರವರು ಜೈಲಿನಲ್ಲಿರುವ ಕಾರಣ ಅವರ ಮಗ ತೇಜಸ್ವಿ ಯಾದವ್ ಆರ್‌ಜೆಡಿ ಮತ್ತು ಮಹಾಮೈತ್ರಿಯನ್ನು ಮುನ್ನಡೆಸುತ್ತಿದ್ದಾರೆ. ನಿತೀಶ್ ಕುಮಾರ್‌ರವರು ಕೊರೊನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿರುವ ಅವರು ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದ್ದಾರೆ.
ಹಾಲಿ ಮುಖ್ಯಮಂತ್ರಿ ಜೆಡಿಯುನ ನಿತೀಶ್ ಕುಮಾರ್ ನಾಲ್ಕನೇ ಬಾರಿಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. 2015 ರಲ್ಲಿ ಆರ್‌ಜೆಡಿ, ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಜಯಿಸಿ ಸಿಎಂ ಆಗಿದ್ದ ಅವರು 2017ರಲ್ಲಿ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ.
ಸಿಎಎ ಮತ್ತು ಎನ್‌ಆರ್‌ಸಿ ಕಾರಣಕ್ಕೆ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚುನಾವಣಾ ಚತುರ ಎಂದೇ ಖ್ಯಾತಿಯಾದ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಯುವಜನರನ್ನು ಸಂಘಟಿಸುತ್ತಿದ್ದಾರೆ. ಅದೇ ರೀತಿಯಾಗಿ ಕಳೆದ ಲೋಕಸಭೆಯಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಸಿಪಿಐ ಪಕ್ಷದ ಯುವ ಮುಖಂಡ ಕನ್ಹಯ್ಯ ಕುಮಾರ್ ಸಹ ಈ ಚುನಾವಣೆಯಲ್ಲ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.
ಅದೇ ರೀತಿಯಾಗಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಯುವ ದಲಿತ ಹೋರಾಟಗಾರ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಕೂಡ ‘ಅಜಾದ್ ಸಮಾಜ ಪಕ್ಷ’ ಸ್ಥಾಪಿಸಿದ್ದು ಬಿಹಾರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ಶುರುವಾಗಿದೆ NDA ವಿರುದ್ಧ ’ಬ್ಯಾನರ್’ ಯುದ್ಧ!


