ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸೋಮವಾರ (ಡಿ.15) ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇಮಕಾತಿ ಪತ್ರಗಳನ್ನು ಹಸ್ತಾಂತರಿದ್ದು, ಇದೇ ಸಂದರ್ಭದಲ್ಲಿ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಅನ್ನು ತೆಗೆದಿರುವ ವಿಡಿಯೋವೊಂದು ವೈರಲ್ ಆಗಿದೆ. ಮುಖ್ಯಮಂತ್ರಿಗಳ ಈ ನಡೆ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿತ್ತು. ಆಯ್ಕೆಯಾದ ವೈದ್ಯರಲ್ಲಿ ಒಬ್ಬರಾದ ನುಸ್ರತ್ ಪರ್ವೀನ್ ಅವರು ಮುಖ್ಯಮಂತ್ರಿಯಿಂದ ತಮ್ಮ ನೇಮಕಾತಿ ಪತ್ರವನ್ನು ಸ್ವೀಕರಿಸಲು ಮುಂದಾದರು.
ಪತ್ರವನ್ನು ಹಸ್ತಾಂತರಿಸಿದ ನಂತರ, ನಿತೀಶ್ ಕುಮಾರ್ ಮಹಿಳೆಯ ಹಿಜಾಬ್ ಕಡೆಗೆ ಸನ್ನೆ ಮಾಡಿ, ಅದರ ಬಗ್ಗೆ ಕೇಳಿದರು. ನಂತರ ಅದನ್ನು ತೆಗೆದುಹಾಕಲು ಸೂಚಿಸಿದರು. ವೈದ್ಯೆ ತಕ್ಷಣಕ್ಕೆ ಪ್ರತಿಕ್ರಿಯಿಸದಿದ್ದಾಗ, ಅವರು ಸ್ವತಃ ಹಿಜಾಬ್ ಅನ್ನು ಕೈಚಾಚಿ ತೆಗೆದಿರುವುದು ಕಂಡುಬಂದಿದೆ. ಇದರಿಂದ ಮಹಿಳೆ ಕೆಲವು ಕ್ಷಣಗಳ ಕಾಲ ಗೊಂದಲಕ್ಕೆ ಒಳಗಾದರು. ಅವರು ಅಸಮಾಧಾನಗೊಂಡಂತೆ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿದ್ದ ಭಾಗವಹಿಸಿದ್ದ ಕೆಲವರು ಇದನ್ನು ಕಂಡು ನಗುತ್ತಿರುವುದು ಸೆರೆಯಾಗಿದೆ.
ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಹರಡಿತು. ವಿರೋಧ ಪಕ್ಷಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಉಂಟುಮಾಡಿತು. ವಿಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಂಡ ನೆಟ್ಟಿಗರು ಮುಖ್ಯಮಂತ್ರಿಯ ನಡವಳಿಕೆಯನ್ನು ಪ್ರಶ್ನಿಸಿದರು. ಒಂದು ಪೋಸ್ಟ್‌ನಲ್ಲಿ, “ನಿತೀಶ್ ಜಿ ಅವರಿಗೆ ಏನಾಯಿತು? ಅವರ ಮಾನಸಿಕ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆಯೇ ಅಥವಾ ನಿತೀಶ್ ಬಾಬು ಈಗ 100 ಪ್ರತಿಶತ ಸಂಘಿಯಾಗಿದ್ದಾರೆಯೇ?” ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ನಿತೀಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿತು. ಈ ಘಟನೆಯನ್ನು “ಅಸಹ್ಯಕರ ಮತ್ತು ನಾಚಿಕೆಗೇಡಿನ ಕೃತ್ಯ” ಎಂದು ಕರೆದ ಪಕ್ಷವು, ಮುಖ್ಯಮಂತ್ರಿಯ ಇಂತಹ ನಡವಳಿಕೆಯು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಹೇಳಿದೆ.
“ಈ ನಾಚಿಕೆಯಿಲ್ಲದ ಕೃತ್ಯವನ್ನು ನೋಡಿ. ಮಹಿಳಾ ವೈದ್ಯೆಯೊಬ್ಬರು ತಮ್ಮ ನೇಮಕಾತಿ ಪತ್ರವನ್ನು ಸ್ವೀಕರಿಸಲು ಬಂದಾಗ, ನಿತೀಶ್ ಕುಮಾರ್ ತಮ್ಮ ಹಿಜಾಬ್ ಅನ್ನು ತೆಗೆಸಿದರು” ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
“ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಇಷ್ಟೊಂದು ಅವಮಾನಕರ ರೀತಿಯಲ್ಲಿ ವರ್ತಿಸಿದರೆ, ಬಿಹಾರದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆಂದು ಊಹಿಸಬಹುದು. ಈ ಖಂಡನೀಯ ಕೃತ್ಯಕ್ಕಾಗಿ ನಿತೀಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಈ ರೀತಿಯ ದುಷ್ಕೃತ್ಯ ಕ್ಷಮಿಸಲಾಗದು” ಎಂದಿದ್ದಾರೆ.
ರಾಷ್ಟ್ರೀಯ ಜನತಾ ದಳ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರು ಸಹ ಮುಖ್ಯಮಂತ್ರಿಯನ್ನು ಟೀಕಿಸಿದರು. ಅವರು ಮಹಿಳೆಯರನ್ನು ಅಗೌರವಿಸಿದ್ದಾರೆ, ವೈಯಕ್ತಿಕ ಮತ್ತು ಧಾರ್ಮಿಕ ಘನತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಈ ಕಾರ್ಯಕ್ರಮದಲ್ಲಿ 685 ಆಯುರ್ವೇದ, 393 ಹೋಮಿಯೋಪತಿ ಮತ್ತು 205 ಯುನಾನಿ ವೈದ್ಯರು ಸೇರಿದಂತೆ 1,283 ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಅಧಿಕಾರಿಗಳ ಪ್ರಕಾರ, ವೈದ್ಯರನ್ನು ಆಯುಷ್ ವೈದ್ಯಕೀಯ ಸೇವೆಗಳು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ನಿಯೋಜಿಸಲಾಗುವುದು. ಅಲ್ಲಿ ಅವರು ಹೊರರೋಗಿ ವಿಭಾಗ ಸೇವೆಗಳನ್ನು ಒದಗಿಸುತ್ತಾರೆ. ರಾಜ್ಯದಲ್ಲಿ ಆರೋಗ್ಯ ವಿತರಣೆಯನ್ನು ಬಲಪಡಿಸಲು ರಾಷ್ಟ್ರೀಯ ಮಕ್ಕಳ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಕೆಲಸ ಮಾಡುತ್ತಾರೆ.


