ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಸೇರುತ್ತಿದ್ದಾರೆ ಎಂಬ ವದಂತಿಗಳನ್ನು ಜೆಡಿಯು ಹಿರಿಯ ನಾಯಕ ಮತ್ತು ಪಕ್ಷದ ವಕ್ತಾರ ನೀರಜ್ ಕುಮಾರ್ ಮಂಗಳವಾರ ತಳ್ಳಿಹಾಕಿದ್ದಾರೆ. ಅವುಗಳನ್ನು ಆಧಾರರಹಿತ ಮತ್ತು ದಾರಿತಪ್ಪಿಸುವಂತದ್ದು ಎಂದು ಹೇಳಿರುವ ಅವರು, ಅಂತಹ ಸುದ್ದಿಗಳನ್ನು ನಿತೀಶ್ ಅವರ ರಾಜಕೀಯ ಪ್ರತಿಸ್ಪರ್ಧಿಗಳು ಹರಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
“ನಿತೀಶ್ ಅವರ ಮಗ ರಾಜಕೀಯ ಪ್ರವೇಶಿಸುವ ಬಗ್ಗೆ ರಾಜಕೀಯ ವಲಯದಲ್ಲಿ ಹರಡುತ್ತಿರುವ ವದಂತಿಗಳು ಕೇವಲ ಆಧಾರರಹಿತ ವದಂತಿಯಾಗಿದೆ. ನಿತೀಶ್ ಕುಮಾರ್ ಅಥವಾ ನಿಶಾಂತ್ ಈ ವಿಷಯದಲ್ಲಿ ಯಾವುದೇ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ” ಎಂದು ಅವರು ಒತ್ತಿ ಹೇಳಿದ್ದಾರೆ. ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಲು ಮಾಧ್ಯಮದ ಕೆಲವು ವಿಭಾಗಗಳು ನಿಯತಕಾಲಿಕವಾಗಿ ಈ ವದಂತಿಗಳನ್ನು ಹರಡುತ್ತಿವೆ ಎಂದು ಅವರು ಹೇಳಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮುಖ್ಯಮಂತ್ರಿಯವರ ಪ್ರಾಮಾಣಿಕತೆ, ಸರಳತೆ ಮತ್ತು ರಾಜಕೀಯ ಚಾಣಾಕ್ಷತನದ ಭಯದಿಂದ ನಿತೀಶ್ ಅವರ ವಿರೋಧಿಗಳು ಇಂತಹ ಊಹಾಪೋಹಗಳನ್ನು ಹರಡುತ್ತಿದ್ದಾರೆ ಎಂದು ನೀರಜ್ ಆರೋಪಿಸಿದ್ದಾರೆ. ಈ ನಿರಾಕರಣೆಗಳ ಹೊರತಾಗಿಯೂ, ಜೆಡಿಯು ನಾಯಕರ ಒಂದು ವಿಭಾಗವು ನಿಶಾಂತ್ ಅವರ ರಾಜಕೀಯ ಪ್ರವೇಶಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದೆ.
“ನಿತೀಶ್ ಬಯಸಿದರೆ, ನಿಶಾಂತ್ ರಾಜಕೀಯಕ್ಕೆ ಸೇರಬಹುದು. ನನ್ನ ಮಗಳು ಶಾಂಭವಿ ಚೌಧರಿ ಕೂಡ ರಾಜಕೀಯದಲ್ಲಿದ್ದಾರೆ. ಹಾಗಾದರೆ ಅದರಲ್ಲಿ ತಪ್ಪೇನು? ನಿಶಾಂತ್ ರಾಜಕೀಯಕ್ಕೆ ಸೇರಿದರೆ ನಾನು ಸ್ವಾಗತಿಸುತ್ತೇನೆ” ಎಂದು ಬಿಹಾರ ಗ್ರಾಮೀಣ ಕಾಮಗಾರಿ ಖಾತೆ ಸಚಿವ ಮತ್ತು ಹಿರಿಯ ಜೆಡಿಯು ನಾಯಕ ಅಶೋಕ್ ಚೌಧರಿ ಸೋಮವಾರ ಹೇಳಿದ್ದಾರೆ.
ನಿತೀಶ್ ಅವರ ಹುಟ್ಟೂರು ನಳಂದ ಜಿಲ್ಲೆಯವರಾದ ಹಿರಿಯ ಜೆಡಿಯು ನಾಯಕ ಶ್ರವಣ್ ಕುಮಾರ್ ಕೂಡ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದ್ದಾರೆ. ಆದಾಗ್ಯೂ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರನ್ನು ರಾಜಕೀಯ ಸ್ಥಾನಮಾನಗಳಲ್ಲಿ ಬಡ್ತಿ ನೀಡುತ್ತಿರುವುದನ್ನು ನಿತೀಶ್ ಕುಮಾರ್ ಆಗಾಗ್ಗೆ ಟೀಕಿಸುತ್ತಿದ್ದರು.
ನಿಶಾಂತ್ ರಾಜಕೀಯದ ಬಗ್ಗೆ ಹೆಚ್ಚಾಗಿ ಪ್ರತಿಕ್ರಿಯಿಸುವುದಿಲ್ಲ. ಆದರೆ, ಇತ್ತೀಚೆಗಷ್ಟೆ ಪಾಟ್ನಾ ಜಿಲ್ಲೆಯ ಭಕ್ತಿಯಾರ್‌ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ತಮ್ಮ ತಂದೆ ಮತ್ತು ತಮ್ಮ ಪಕ್ಷ ಗೌರವ ಸಲ್ಲಿಸಿದ ಸಂದರ್ಭದಲ್ಲಿ, ನಿಶಾಂತ್ ಮತದಾರರನ್ನು ಉದ್ದೇಶಿಸಿ, “ಸಾಧ್ಯವಾದರೆ, ದಯವಿಟ್ಟು ಜೆಡಿ(ಯು) ಮತ್ತು ನನ್ನ ತಂದೆಗೆ ಮತ ಹಾಕಿ, ಅವರನ್ನು ಮರಳಿ ಕರೆತನ್ನಿ. ನನ್ನ ತಂದೆ ಬಿಹಾರಕ್ಕಾಗಿ ಉತ್ತಮ ಕೆಲಸ ಮಾಡಿದ್ದಾರೆ” ಎಂದು ಮನವಿ ಮಾಡಿದ್ದರು. ಜನವರಿ 17 ರಂದು ನೀಡಿದ್ದ ಅವರ ಹೇಳಿಕೆಗಳು ಸಂಭಾವ್ಯ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು.
ನಿತೀಶ್ ನಿವೃತ್ತರಾದ ನಂತರ ಪಕ್ಷವು ಆಂತರಿಕ ಸಂಘರ್ಷಗಳನ್ನು ಎದುರಿಸಬಹುದು ಎಂಬ ಭಯದಿಂದ ಕೆಲವು ಪಕ್ಷದ ನಾಯಕರು ನಿಶಾಂತ್ ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದಾರೆ ಎಂದು ಜೆಡಿ(ಯು) ಮೂಲಗಳು ಬಹಿರಂಗಪಡಿಸಿವೆ. ಆದಾಗ್ಯೂ, ನಿತೀಶ್ ರಾಜಕೀಯದಲ್ಲಿ ಸಕ್ರಿಯರಾಗಿರುವವರೆಗೆ ನಿಶಾಂತ್ ಅವರ ಪ್ರವೇಶ ಅಸಂಭವ ಎಂದು ಇತರರು ನಂಬುತ್ತಾರೆ ಎಂದು TNIE ವರದಿ ಮಾಡಿದೆ.
ಇದನ್ನೂಓದಿ:ಬಾಬಾ ಸಿದ್ದೀಕಿ ಹತ್ಯೆ ತನಿಖೆ | ಬಿಲ್ಡರ್‌ಗಳು, ರಾಜಕಾರಣಿಗಳನ್ನು ಹೆಸರಿಸಿದ ಪುತ್ರ ಜೀಶನ್
ಬಾಬಾ ಸಿದ್ದೀಕಿ ಹತ್ಯೆ ತನಿಖೆ | ಬಿಲ್ಡರ್‌ಗಳು, ರಾಜಕಾರಣಿಗಳನ್ನು ಹೆಸರಿಸಿದ ಪುತ್ರ ಜೀಶನ್


