ಗಯಾದ ಬಿಜೆಪಿ ಅಭ್ಯರ್ಥಿ ಮತ್ತು ಕೃಷಿ ಸಚಿವ ಪ್ರೇಮ್ ಕುಮಾರ್ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಜಿಲ್ಲಾಡಳಿತ ಇಂದು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.
ತಮ್ಮ ಪಕ್ಷದ ಕಮಲದ ಗುರುತಿರುವ ಮುಖವಾಡ (ಮಾಸ್ಕ್) ಧರಿಸಿ ಗಯಾ ಮೂಲದ ಶಾಸಕರಾಗಿರುವ ಪ್ರೇಮ್ ಕುಮಾರ್ ಅವರು ಮತ ಚಲಾಯಿಸಲು ಬೈಸಿಕಲ್‌ನಲ್ಲಿ ಬಂದಿದ್ದರು. ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಮತದಾನದ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಸಚಿವರನ್ನು ತಡೆದರು.
ಮುಖ್ಯ ಚುನಾವಣಾ ಅಧಿಕಾರಿ ಎಚ್.ಆರ್.ಶ್ರೀನವಾಸ ಅವರ ಪ್ರಕಾರ, “ಜಿಲ್ಲಾಡಳಿತದ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೃಷಿ ಸಚಿವರು ತಮ್ಮ ಪಕ್ಷದ ಗುರುತು ಹೊಂದಿರುವ ಮಾಸ್ಕ್ ಧರಿಸಿ ಮತ ಚಲಾಯಿಸಿದರು ಮಾತ್ರವಲ್ಲದೆ ಗೆಲುವು ಸಾಧಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ. ಕಮಲದ ಗುರುತಿನ ಮುಖವಾಡ ಧರಿಸಿ ಬೂತ್‌ಗೆ ಹೋಗಿದ್ದಕ್ಕಾಗಿ ಆತನ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾಗಿದೆ. ಡಿಎಂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ನೀತಿಸಂಹಿತೆ ಉಲ್ಲಂಘನೆ ಆರೋಪ: RR ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಪ್ರಕರಣ ದಾಖಲು
ಇದರ ನಡುವೆ ಹೇಳಿಕೆ ನೀಡಿರುವ ಸಚಿವರು, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಉದ್ದೇಶವಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು. “ನಾನು ಬಿಜೆಪಿ ಚಿಹ್ನೆಯ ಕಮಲದ ಗುರುತಿನ ಮಾಸ್ಕ್ ಅನ್ನು ತೆಗೆದುಹಾಕಲು ಮರೆತು ಮತ ಚಲಾಯಿಸಿದೆ. ಅರಿತುಕೊಂಡ ಕೂಡಲೇ ನಾನು ಅದನ್ನು ತೆಗೆದುಹಾಕಿದೆ” ಎಂದು ಅವರು ಹೇಳಿದ್ದಾರೆ.
ಗಯಾದ 230 ಪ್ರದೇಶಗಳ ವಲಯ ಮ್ಯಾಜಿಸ್ಟ್ರೇಟ್ ಬಿಪಿನ್ ಕುಮಾರ್ ಅವರು ಕೊಟ್ವಾಲಿ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಕೊಟ್ವಾಲಿ ಪೊಲೀಸರು, 171 (ಎಫ್)/188,128/130 ಆರ್‌ಪಿ ಕಾಯ್ದೆ 1951 ರ ಅಡಿಯಲ್ಲಿ ಎಫ್ಐಆರ್ (408/20) ಅನ್ನು ನೋಂದಾಯಿಸಿದ್ದಾರೆ.
ಇಂದು ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ. ನವೆಂಬರ್ ೧೦ ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಯಡಿಯೂರಪ್ಪಗೆ ಸಮನ್ಸ್


