ಪಾಟ್ನಾ: ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆ (SIR) ನಡೆಸುತ್ತಿದೆ. ಈಗಾಗಲೇ 90.12% ಮತದಾರರ ನಮೂನೆ ಅರ್ಜಿಗಳು ಬಂದಿವೆ ಎಂದು ಆಯೋಗ ಹೇಳಿಕೊಂಡಿದೆ. ಅಲ್ಲದೆ, 36 ಲಕ್ಷಕ್ಕೂ ಹೆಚ್ಚು ಜನರು ‘ಅವರ ವಿಳಾಸಗಳಲ್ಲಿ ವಾಸವಿಲ್ಲ’ವೆಂದೂ ಹೇಳಿದೆ. ಇದು, ಲಕ್ಷಾಂತರ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದ್ದು, ನಿರ್ದಿಷ್ಟ ವರ್ಗದ ಜನತೆಯನ್ನು ಚುನಾವಣೆ ಕಣದಿಂದ ದೂರುವಿಡುವುದು ಈ ಕ್ರಮದ ಉದ್ದೇಶವೆಂದು ಆರೋಪಿಸಲಾಗುತ್ತಿದೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಗುಡುವು ಇದೇ ಜುಲೈ 25ರಣದಯ ಅಂತ್ಯವಾಗುತ್ತದೆ. ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಜೂನ್ 24ರಂದು ಆಯೋಗವು ಆದೇಶಿಸಿತ್ತು. ಜೂನ್ 25ರಿಂದ ಪ್ರಕ್ರಿಯೆ ಆರಂಭವಾಯಿತು. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರು ತಮ್ಮ ಪೌರತ್ವ ಮತ್ತು ಬಿಹಾರದ ನಿವಾಸಿಗಳು ಎಂಬುದನ್ನು ಸಾಬೀತು ಮಾಡಬೇಕೆಂಬುದು ಆಯೋಗ ಹೊರಡಿಸಿದ್ದ ಆದೇಶದ ಸಾರವಾಗಿತ್ತು. ಆಯೋಗದ ಪೌರತ್ವ ಪರಿಷ್ಕರಣೆ ಮಾದರಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದಾಗ್ಯೂ, ಎಸ್‌ಐಆರ್ ಮುಂದುವರೆಸಲು ಅನುಮತಿ ನೀಡಿದ ನ್ಯಾಯಾಲಯವು, ಆಧಾರ್ ಕಾರ್ಡ್ ರೀತಿಯ ಗುರುತಿನ ಚೀಟಿಗಳನ್ನು ಪುರಾವೆಗಳಾಗಿ ಪರಿಗಣಿಸಲು ಸೂಚಿಸಿತ್ತು.
ಬಿಹಾರದಲ್ಲಿ ಒಟ್ಟು 7.8 ಕೋಟಿ ನೋಂದಾಯಿತ ಮತದಾರರಿದ್ದಾರೆ. ಅವರೆಲ್ಲರೂ ಜುಲೈ 25ರೊಳಗೆ ತಮ್ಮ ಗಣತಿ ನಮೂನೆಯನ್ನು ಸಲ್ಲಿಸಬೇಕಿದೆ. ಅವುಗಳನ್ನು ಪರಿಶೀಲಿಸಿ ಆಗಸ್ಟ್ 1ರಂದು ಆಯೋಗವು ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಈ ನಡುವೆ, ಶುಕ್ರವಾರ ಮಾಹಿತಿ ಹಂಚಿಕೊಂಡಿರುವ ಆಯೋಗವು ಈವರೆಗೆ 7.11 ಕೋಟಿ (90.12%) ಮತದಾರರು ತಮ್ಮ ನಮೂನೆಗಳನ್ನು ಸಲ್ಲಿಸಿದ್ದಾರೆ. ಅವುಗಳಲ್ಲಿ 6.85 ಕೋಟಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಅವರಲ್ಲಿ, 36.86 ಲಕ್ಷ ಮತದಾರರು (ಒಟ್ಟು ಮತದಾರರಲ್ಲಿ 4.67%) ಅವರ ವಿಳಾಸಗಳಲ್ಲಿ ಇಲ್ಲ. ‘ಬಹುಶಃ’ ಸಾವನ್ನಪ್ಪಿದ್ದಾರೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಅವರಲ್ಲಿಯೂ 6,978 ಮತದಾರರನ್ನು ‘ಪತ್ತೆಹಚ್ಚಲು ಸಾಧ್ಯವೇ ಇಲ್ಲ’ ಎಂದು ಹೇಳಿಕೊಂಡಿದೆ.
ಬಹುಶಃ’ ಮರಣ ಹೊಂದಿದ, ಸ್ಥಳಾಂತರಗೊಂಡ ಹಾಗೂ ಪತ್ತೆಯಾಗದ ಮತದಾರರ ನಿಖರ ಸ್ಥಿತಿಗಳನ್ನು ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರು ಮತ್ತು ಅವರ ಬೂತ್ ಮಟ್ಟದ ಏಜೆಂಟ್‌ಗಳ ನೆರವು ಪಡೆದು, ಜುಲೈ 25ರೊಳಗೆ ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಆಯೋಗ ಹೇಳಿದೆ.
ಆಗಸ್ಟ್ 1ರಂದು ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 1ರವರೆಗೆ ಸಮಯ ಇರುತ್ತದೆ. ಆನಂತರ, ಸೆಪ್ಟೆಂಬರ್ 25ರೊಳಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಚುನಾವಣಾ ಅಧಿಕಾರಿಗಳು ವಿಲೇವಾರಿ ಮಾಡಲಿದ್ದಾರೆ ಎಂದು ಆಯೋಗ ಹೇಳಿಕೊಂಡಿದೆ.
ಧರ್ಮಸ್ಥಳ ಪ್ರಕರಣ: ನ್ಯಾಯಕ್ಕಾಗಿ ಹೋರಾಟ, ಸವಾಲುಗಳು ಮತ್ತು ನಿರೀಕ್ಷೆಗಳು – ಸಮಗ್ರ ವಿಶ್ಲೇಷಣೆ


