ನಕಲಿ ವೈದ್ಯನೊಬ್ಬ ಮೊಬೈಲ್ ಫೋನ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಪಿತ್ತಕೋಶದ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಆರೋಪಿಯನ್ನು ಅಜಿತ್ ಕುಮಾರ್ ಪುರಿ ಎಂದು ಗುರುತಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಪಟ್ಟ 15 ವರ್ಷದ ಬಾಲಕ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ಘಟನೆಯ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಜಿತ್ ಕುಮಾರ್ ಪುರಿಯನ್ನು, ಎರಡು ದಿನಗಳ ಕಳೆದು ಸೋಮವಾರ ಬಂಧಿಸಲಾಗಿದೆ. ಆತನ ಕ್ಲಿನಿಕ್ ಅನ್ನು ಸೀಲ್ ಮಾಡಲಾಗಿದೆ ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ಭಾರ್ತಿ ತಿಳಿಸಿದ್ದಾರೆ. ಈ ಹಿಂದೆ ಬಾಲಕನ ಕುಟುಂಬಸ್ಥರ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂತ್ರಸ್ತ ಕೃಷ್ಣ ಕುಮಾರ್ ಅಲಿಯಾಸ್ ಗೋಲು ಅವರ ತಂದೆ ಚಂದನ್ ಶಾ ಅವರು ತಮ್ಮ ಒಪ್ಪಿಗೆ ಅಥವಾ ಅರಿವಿಗೆ ಬಾರದೆ ತನ್ನ ಮಗನಿಗೆ ಆಪರೇಷನ್ ಮಾಡಲಾಗಿದೆ ಎಂದು ಲಿಖಿತ ದೂರಿನಲ್ಲಿ ಹೇಳಿದ್ದಾರೆ. ಯೂಟ್ಯೂಬ್ ವೀಡಿಯೋಗಳನ್ನು ನೋಡಿ ಪುರಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದದ್ದನ್ನು ಪ್ರಶ್ನಿಸಿದಾಗ, ಆರೋಪಿಯು ತಾನು ವೈದ್ಯನಲ್ಲ ಎಂದು ಹೇಳಿದ್ದನು ಎಂದು ಚಂದನ್ ಶಾ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಗೋಲು ಅವರ ಆರೋಗ್ಯವು ಹದಗೆಟ್ಟಿತ್ತು. ಈ ವೇಳೆ ಅವರ ಕುಟುಂಬವು ಪ್ರತಿಭಟಿಸಿದಾಗ ನಕಲಿ ವೈದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪಾಟ್ನಾಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದನು. ಆದರೆ ಪಾಟ್ನಾಗೆ ತೆರಳುವ ಮಾರ್ಗಮಧ್ಯೆ ನಕಲಿ ವೈದ್ಯ ಪರಾರಿಯಾಗಿದ್ದಾಗಿ ವರದಿಯಾಗಿದೆ.
“ಕಳೆದ ವಾರ ವಾಂತಿ ಮತ್ತು ಹೊಟ್ಟೆ ನೋವಿನ ಕಾರಣಕ್ಕೆ ನಾವು ಸರನ್‌ನ ಮೋತಿರಾಜಪುರ ಧರಂಬಾಗಿ ಬಜಾರ್‌ನಲ್ಲಿರುವ ಅಜಿತ್ ಕುಮಾರ್ ಪುರಿ ಅವರ ಖಾಸಗಿ ಕ್ಲಿನಿಕ್ ಗಣಪತಿ ಸೇವಾ ಸದನ್‌ಗೆ ಮಗನನ್ನು ದಾಖಲಿಸಿದ್ದೆವು. ಆರಂಭದಲ್ಲಿ ಎರಡು ದಿನಗಳ ಕಾಲ ಅವರಿಗೆ ಚುಚ್ಚುಮದ್ದು ಮತ್ತು ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಕಳೆದ ಶುಕ್ರವಾರ, ಯೂಟ್ಯೂಬ್ ವೀಡಿಯೊಗಳನ್ನು ನೋಡುತ್ತಲೇ ಪುರಿ ಶಸ್ತ್ರಚಿಕಿತ್ಸೆ ನಡೆಸಿದ್ದರು” ಎಂದು ಚಂದನ್ ಶಾ ಹೇಳಿದ್ದಾರೆ.
ಮೊದಲು ನಾಲ್ಕು ವರ್ಷಗಳ ಕಾಲ ಸಹಾಯಕ ಕಮ್ ಕಾಂಪೌಂಡರ್ ಆಗಿ ಕೆಲಸ ಮಾಡಿದ ಪುರಿ ನಂತರ ಸ್ವಯಂ ಘೋಷಿತ ವೈದ್ಯರಾಗಿ ಬದಲಾಗಿದ್ದ ಎಂದು ಪೊಲೀಸರ ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಗ್ರಾಮೀಣ ಬಿಹಾರದಲ್ಲಿ ಆರೋಗ್ಯ ಸೇವೆಯ ಸ್ಥಿತಿ ಎಷ್ಟು ದಯನೀಯವಾಗಿದೆ ಎಂಬುದಕ್ಕೆ ಗೋಲು ಪ್ರಕರಣ ಒಂದು ಉದಾಹರಣೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಸ್ಥಳೀಯವಾಗಿ “ಜೋಲಾ ಚಾಪ್” ಎಂದು ಕರೆಯಲ್ಪಡುವ ನಕಲಿ ವೈದ್ಯರು ರಾಜ್ಯದಾದ್ಯಂತ ನೂರಾರು ಖಾಸಗಿ ಚಿಕಿತ್ಸಾಲಯಗಳನ್ನು ನಡೆಸುತ್ತಿದ್ದಾರೆ ಮತ್ತು ಬಡ ಜನರು ಅವರ ಬಲಿಪಶುಗಳಾಗುತ್ತಾರೆ ಎಂದು ವರದಿಗಳು ಹೇಳಿವೆ. ಆದರೆ ಅಂತಹ ಹೆಚ್ಚಿನ ಪ್ರಕರಣಗಳು ವರದಿಯಾಗುವುದಿಲ್ಲ.
ವಿಡಿಯೊ ನೋಡಿ: ಗೌರಿ ನೆನಪು-2024 ಗೌರಿ ನಮನ ಕಾರ್ಯಕ್ರಮ ಸಮಾಧಿ ಬಳಿಯಿಂದ ನೇರ ಪ್ರಸಾರ


