Homeಕರ್ನಾಟಕಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ: ಕಾರಣ, ಪರಿಣಾಮಗಳೇನು?

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ: ಕಾರಣ, ಪರಿಣಾಮಗಳೇನು?

- Advertisement -
- Advertisement -

ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸುವ ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆ, ಇಂದಿನಿಂದ (ಜೂ.16) ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಸ್ಥಗಿತಗೊಳ್ಳಲಿವೆ.

ವರದಿಗಳ ಪ್ರಕಾರ, ಹೈಕೋರ್ಟ್ ಆದೇಶದಂತೆ ಹಲವು ಬೈಕ್ ಟ್ಯಾಕ್ಸಿ ಸೇವಾ ಪೂರೈಕೆದಾರರು ತಮ್ಮ ಸೇವೆಯನ್ನು ಇಂದು (ಜೂನ್ 16 ಸೋಮವಾರ) ಸ್ಥಗಿತಗೊಳಿಸಿದ್ಧಾರೆ. ಇನ್ನೂ ಕೆಲ ಕಂಪನಿಗಳು ಸೇವೆ ಮುಂದುವರಿಸಿವೆ. ಕೆಲ ಪ್ರಯಾಣಿಕರು ಇಂದು ಬೆಳಿಗ್ಗೆ ಬೈಕ್ ಟ್ಯಾಕ್ಸಿ ಬುಕ್ ಮಾಡಿ ಪ್ರಯಾಣಿಸಿದ್ದಾರೆ. ಈ ಕಂಪನಿಗಳು ಕ್ರಮೇಣ ಸರ್ಕಾರ ಮತ್ತು ಕೋರ್ಟ್ ಆದೇಶ ಪಾಲಿಸುವ ಸಾಧ್ಯತೆ ಇದೆ.

ರ್ಯಾಪಿಡೋ, ಓಲಾ ಮತ್ತು ಊಬರ್ ಕಂಪನಿಗಳು ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿತ್ತು. ವಿದ್ಯಾರ್ಥಿಗಳು ಮತ್ತು ಬಡ, ಮಧ್ಯಮ ವರ್ಗದ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ, ಇಚ್ಚಿಸಿದ ಸ್ಥಳಗಳಿಗೆ ತೆರಳಲು ಬೈಕ್ ಟ್ಯಾಕ್ಸಿ ನೆರವಾಗುತ್ತಿತ್ತು. ಇತರ ಟ್ಯಾಕ್ಸಿ ಚಾಲಕರಿಂದ, ಪ್ರಮುಖವಾಗಿ ಆಟೋ ಚಾಲಕರಿಂದ ಬಂದ ವಿರೋಧ, ಪ್ರಯಾಣಿಕರ ಸುರಕ್ಷತೆ ಮತ್ತು ಸಾರಿಗೆ ನಿಯಮಗಳು ಬೈಕ್ ಟ್ಯಾಕ್ಸಿ ನಿಷೇಧ ಆಗಲು ಪ್ರಮುಖ ಕಾರಣಗಳಾಗಿವೆ.

ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಕಾರಣಗಳು : 

  1. ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ: ಕರ್ನಾಟಕ ಮೋಟಾರು ಕಾಯ್ದೆಯ ಪ್ರಕಾರ, ರಾಜ್ಯದಲ್ಲಿ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಖಾಸಗಿ ಬಳಕೆಗೆ ಸೀಮಿತವಾಗಿವೆ. ಅವುಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಇಲ್ಲಿ ಬೈಕ್ ಖಾಸಗಿ ವಾಹನವಾದ್ದರಿಂದ, ಅದು ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎನ್ನಲಾಗಿದೆ.
  2. ಸುರಕ್ಷತಾ ಕಾಳಜಿಗಳು: ಇತರ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಹೋಲಿಸಿದರೆ ಕಟ್ಟುನಿಟ್ಟಾದ ನಿಯಮಗಳು ಮತ್ತು ಮೇಲ್ವಿಚಾರಣೆಯ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು, ವಿಶೇಷವಾಗಿ ಮಹಿಳೆಯರಿಗೆ ಅಸುರಕ್ಷಿತವೆಂದು ಗುರುತಿಸಿದೆ.
  3. ಆಟೋ ಮತ್ತು ಕ್ಯಾಬ್ ಚಾಲಕರಿಂದ ವಿರೋಧ: ಆಟೋ-ರಿಕ್ಷಾ ಮತ್ತು ಕ್ಯಾಬ್ ಚಾಲಕರ-ಮಾಲಕರ ಸಂಘಗಳು ಬೈಕ್ ಟ್ಯಾಕ್ಸಿಗಳಿಗೆ ವಿರೋಧ ವ್ಯಕ್ತಪಡಿಸಿರುವುದು ಅವುಗಳು ನಿಷೇಧಕ್ಕೊಳಗಾಗಲು ಪ್ರಮುಖ ಕಾರಣವಾಗಿದೆ. ಬೈಕ್ ಟ್ಯಾಕ್ಸಿಗಳು ಪ್ರಯಾಣ ದರವನ್ನು ಕಡಿಮೆ ಮಾಡಿ ತಮ್ಮ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ಆಟೋ ಚಾಲಕರು ವಾದಿಸಿದ್ದಾರೆ. ಆಟೋ ಚಾಲಕರ ಸಂಘಗಳು ಗಮನಾರ್ಹ ಪ್ರಭಾವವನ್ನು ಹೊಂದಿವೆ. ಅವುಗಳ ಪ್ರತಿಭಟನೆಗಳು ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿವೆ.
  4. ನಿಯಮಗಳ ಅಡೆ-ತಡೆ: ಗೋವಾದಂತಹ ಇತರ ಕೆಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ. ಪ್ರಸ್ತುತ ಕರ್ನಾಟಕ ರಾಜ್ಯ ಸಾರಿಗೆ ಕಾನೂನುಗಳ ಅಡಿಯಲ್ಲಿ ಬೈಕ್ ಟ್ಯಾಕ್ಸಿಗಳನ್ನು ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲ ಎಂದು ಕರ್ನಾಟಕ ಸಾರಿಗೆ ಇಲಾಖೆ ಒತ್ತಿ ಹೇಳಿದೆ.

ಹೈಕೋರ್ಟ್ ತೀರ್ಪು : ಜೂನ್ 13, 2025 ರಂದು, ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗಳ ಮೇಲಿನ ರಾಜ್ಯ ಸರ್ಕಾರದ ನಿಷೇಧವನ್ನು ತಡೆಯಲು ನಿರಾಕರಿಸಿದೆ. ಇದು ಜೂನ್ 16, 2025 ರಿಂದ ಸೇವೆಗಳನ್ನು ಸ್ಥಗಿತಗೊಳಿಸಲು ಕಾರಣವಾಗಿದೆ. ರ್ಯಾಪಿಡೊ, ಓಲಾ ಮತ್ತು ಉಬರ್ ಮೋಟೋದಂತಹ ಕಂಪನಿಗಳಿಗೆ ಯಾವುದೇ ಗ್ರೇಸ್ ಅವಧಿ ನೀಡದೆ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಹೈಕೋರ್ಟ್ ನಿರ್ದೇಶಿಸಿದೆ.

ಕಾನೂನು ಕ್ರಮಗಳು: ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಾಗ ಕಟ್ಟುನಿಟ್ಟಿನ ಕಾನೂನು ಕ್ರಮಗಳ ಎಚ್ಚರಿಕೆ ನೀಡಿದೆ. ಇದರಲ್ಲಿ ವಾಹನ ಜಪ್ತಿ, ₹10,000 ವರೆಗೆ ದಂಡ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುವ ನಿರ್ವಾಹಕರಿಗೆ ಸಂಭಾವ್ಯ ಜೈಲು ಶಿಕ್ಷೆಗಳು ಸೇರಿವೆ.

ಕಂಪನಿಗಳ ಪ್ರತಿಕ್ರಿಯೆ: ಪ್ರಮುಖ ಬೈಕ್ ಟ್ಯಾಕ್ಸಿ ಆಪರೇಟರ್ ಆಗಿರುವ ರಾಪಿಡೊ ಹೈಕೋರ್ಟ್ ಆದೇಶವನ್ನು ಪಾಲಿಸುವ ಮೂಲಕ ಜೂನ್ 16, 2025 ರಿಂದ ಕರ್ನಾಟಕದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಓಲಾ ಮತ್ತು ಉಬರ್ ಮೋಟೋ ಕೂಡ ಇದೇ ರೀತಿಯ ಘೋಷಣೆಗಳನ್ನು ಮಾಡಿವೆ ಎಂದು ವರದಿಗಳು ಹೇಳಿವೆ.

ನಿಷೇಧದ ಪರಿಣಾಮಗಳು : ಬೈಕ್ ಟ್ಯಾಕ್ಸಿಯ ನಿಷೇಧದ ಪರಿಣಾಮಗಳನ್ನು ಬಹು ಆಯಾಮಗಳಲ್ಲಿ ನೋಡಬಹುದು. ಇದು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು, ಸೇವಾ ಪೂರೈಕೆ ಕಂಪನಿಗಳು ಮತ್ತು ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ.

ಪ್ರಯಾಣಿಕರು : ಒಬ್ಬರೇ ಎಲ್ಲಾದರು ಪ್ರಯಾಣಿಸುವುದಾದರೆ ಆಟೋದ ಅವಶ್ಯಕತೆ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಜನರು ಬೈಕ್ ಟ್ಯಾಕ್ಸಿ ಮೂಲಕ ಪ್ರಯಾಣಿಸುತ್ತಿದ್ದರು. ಇದರಿಂದ ಕಡಿಮೆ ಖರ್ಚಿನಲ್ಲಿ, ಅತ್ಯಂತ ವೇಗವಾಗಿ ನಿಗದಿತ ಸ್ತಳಗಳಿಗೆ ತೆರಳಲು ಜನರಿಗೆ ಸಹಾಯವಾಗುತ್ತಿತ್ತು.

ಒಬ್ಬರೇ ಪ್ರಯಾಣಿಸುವಾಗ ಆಟೋ ಆದರೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಅಲ್ಲದೆ ಬೈಕ್‌ಗೆ ಹೋಲಿಸಿದರೆ ಹೆಚ್ಚಿನ ಇಂಧನವು ಖರ್ಚಾಗುತ್ತದೆ. ಈ ಎರಡೂ ಕೂಡ ಬೈಕ್ ಟ್ಯಾಕ್ಸಿಯಿಂದ ಉಳಿತಾಯ ಆಗುತ್ತಿತ್ತು.

ಚಾಲಕರು/ ರೈಡರ್ಸ್: ಬೈಕ್ ಟ್ಯಾಕ್ಸಿ ಚಾಲನೆಯನ್ನು ಅನೇಕ ವಿದ್ಯಾರ್ಥಿಗಳು ಸೇರಿದಂತೆ ಬಡ, ಮಧ್ಯಮ ವರ್ಗದ ಯುವಜನರು ತಮ್ಮ ಪ್ರಾಥಮಿಕ ಅಥವಾ ಪೂರಕ ಆದಾಯದ ಮೂಲವಾಗಿ ಅವಲಂಬಿಸಿದ್ದರು. ಅವರು ಉದ್ಯೋಗ ನಷ್ಟವನ್ನು ಎದುರಿಸಲಿದ್ದಾರೆ. ಈ ನಿಷೇಧವು ಅವರ ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಲಿದೆ. ಇದು ಈಗಾಗಲೇ ಆಕ್ರೋಶಕ್ಕೆ ಕಾರಣವಾಗಿದೆ.

“ಪದವಿ ಮುಗಿಸಿ ಬೆಂಗಳೂರು ಮಹಾನಗರಕ್ಕೆ ಕೆಲಸ ಹುಡುಕಲು ಬಂದ ನನಗೆ ಆರಂಭದಲ್ಲಿ ಎಷ್ಟೇ ಹುಡುಕಿದರೂ ಕೆಲಸ ಸಿಕ್ಕಿರಲಿಲ್ಲ. ಆದರೆ, ನಾನು ಉಳಿದುಕೊಂಡಿದ್ದ ರೂಮ್ ಬಾಡಿಗೆ, ಊಟ ತಿಂಡಿ ಖರ್ಚು ಮತ್ತು ಬಸ್ ಖರ್ಚಿಗೆ ಹಣ ಬೇಕಿತ್ತು. ಆಗ ನಾನು ನನ್ನಲ್ಲಿದ್ದ ಬೈಕ್‌ನಲ್ಲಿ ರ್ಯಾಪಿಡೋ ಸೇವೆ ನೀಡಿ ಖರ್ಚು ನಿಭಾಯಿಸುತ್ತಿದ್ದೆ” ಎನ್ನುತ್ತಾರೆ ಚಿಕ್ಕಮಗಳೂರು ಮೂಲದ ಆರ್‌.ಟಿ ನಗರದಲ್ಲಿ ವಾಸ್ತವ್ಯ ಇರುವ ರಾಶಿದ್ ಅಹ್ಮದ್.

“ಬೆಂಗಳೂರಿನ ನೆಲಮಂಗಲ ಕ್ರಾಸ್ ಬಳಿ ಇದ್ದ ನನ್ನ ಸಣ್ಣ ಹೋಟೆಲ್ ನಷ್ಟದಿಂದ ಮುಚ್ಚಿದಾಗ, ಅತ್ತ ಮನೆಗೂ ಹೋಗಲಾಗದೆ, ಇತ್ತ ಖರ್ಚಿಗೂ ಹಣವಿಲ್ಲದೆ ಚಿಂತೆಯಲ್ಲಿ ಕುಳಿತಿದ್ದಾಗ ನನಗೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಜೀವನ ನಡೆಸಲು ನೆರವಾಗಿತ್ತು. ಪ್ರಸ್ತುತ ಅದನ್ನೇ ನಂಬಿ ಕುಳಿತಿದ್ದೇನೆ. ಈಗ ಬಂದಿರುವ ನಿಷೇಧ ಸುದ್ದಿಯಿಂದ ಮತ್ತೆ ನಾನು ಸಂಕಷ್ಟ ಅನುಭವಿಸಬೇಕಿದೆ. ಮುಂದೇನು ಗೊತ್ತಿಲ್ಲ” ಎಂದು ಮಂಗಳೂರು ಮೂಲದ ಪ್ರಸ್ತುತ ಜಯಮಹಲ್‌ನಲ್ಲಿ ನೆಲೆಸಿರುವ ಝೈನುದ್ದೀನ್ ಆತಂಕ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಇಕೋ ಸಿಸ್ಟಮ್ : ಈ ನಿಷೇಧವು ಆಟೋ-ರಿಕ್ಷಾಗಳು ಮತ್ತು ಕ್ಯಾಬ್‌ಗಳಿಗೆ ಬೇಡಿಕೆಯನ್ನು ಹೆಚ್ಚಿಸಬಹುದು. ಚಾಲಕರಿಗೆ ಪ್ರಯೋಜನವನ್ನು ನೀಡಬಹುದು. ಆದರೆ ಪ್ರಯಾಣಿಕರು ಹೆಚ್ಚಿನ ದರ ಪಾವತಿಸಬೇಕಿದೆ ಮತ್ತು ದೀರ್ಘ ಸಮಯ ಕಾಯಬೇಕಾಗುತ್ತದೆ.

ಕಂಪನಿಗಳು: ಬೈಕ್ ಟ್ಯಾಕ್ಸಿ ನಿಷೇಧದಿಂದ ರಾಪಿಡೊ, ಓಲಾ ಮತ್ತು ಉಬರ್‌ನಂತಹ ಕಂಪನಿಗಳು ಪ್ರಮುಖ ಮಾರುಕಟ್ಟೆಯಾದ ಕರ್ನಾಟಕದಲ್ಲಿ ಕಾರ್ಯಾಚರಣೆ ಮತ್ತು ಆರ್ಥಿಕ ಹಿನ್ನಡೆಯನ್ನು ಎದುರಿಸಬಹುದು. ಈ ಕಂಪನಿಗಳು ಭವಿಷ್ಯದಲ್ಲಿ ಇತರ ಸೇವೆಗಳಿಗೆ ಬದಲಾಯಿಸಿಕೊಳ್ಳಬೇಕಿದೆ ಅಥವಾ ನಿಷೇಧವನ್ನು ಕಾನೂನುಬದ್ಧವಾಗಿ ಪ್ರಶ್ನಿಸಬೇಕಾಗಿದೆ.

ಜನರ ಅಭಿಪ್ರಾಯ : ಬೈಕ್ ಟ್ಯಾಕ್ಸಿಗಳ ನಿಷೇಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರ ರೀತಿಯಲ್ಲಿ ಜನರಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಹಲವರು ನಿಷೇಧವನ್ನು ವಿರೋಧಿಸಿದರೆ, ಕೆಲವರು ಸುರಕ್ಷತೆ ಮತ್ತು ಇತರ ಕಾರಣಗಳನ್ನು ನೀಡಿ ಸಮರ್ಥಿಸಿಕೊಂಡಿದ್ದಾರೆ.

ಹಿಂದಿನ ಪ್ರತಿಭಟನೆಗಳು: ಆಟೋ ಚಾಲಕರ ಸಂಘಗಳು ಕಳೆದ ಕೆಲ ವರ್ಷಗಳಿಂದ ಬೈಕ್ ಟ್ಯಾಕ್ಸಿಗಳ ವಿರುದ್ಧ ಧ್ವನಿ ಎತ್ತುತ್ತಿವೆ. 2023ರ ಬಳಿಕ ಆಗಾಗ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಜುಲೈ 2024ರಲ್ಲಿ ಕರ್ನಾಟಕ ಸಾರಿಗೆ ಇಲಾಖೆಯು ಬೆಂಗಳೂರಿನಲ್ಲಿ 133 ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿತ್ತು ಎಂದು ವರದಿಯಾಗಿದೆ. ಹಲವೆಡೆ ಆಟೋ ಚಾಲಕರು ಬೈಕ್ ಟ್ಯಾಕ್ಸಿ ಚಾಲಕರನ್ನು ತರಾಟೆಗೆ ತೆಗೆದುಕೊಂಡ ಮತ್ತು ಹಲ್ಲೆಗೆ ಮುಂದಾದ ಉದಾಹರಣೆಗಳಿವೆ. ಸರ್ಕಾರ ಹಲವು ಬಾರಿ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಕಂಪನಿಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರೂ, ಹಗ್ಗಜಗ್ಗಾಟ ಮುಂದುವರಿದಿತ್ತು.

ಇತರ ರಾಜ್ಯಗಳೊಂದಿಗೆ ಹೋಲಿಕೆ: ಗೋವಾದಂತಹ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳು ಕಾನೂನುಬದ್ಧವಾಗಿವೆ. ಅಲ್ಲಿ ನಿಯಮಗಳು ಅವುಗಳ ಕಾರ್ಯಾಚರಣೆಯನ್ನು ಅನುಮತಿಸುತ್ತವೆ. ಕರ್ನಾಟಕದಲ್ಲಿ ಬೈಕ್ಸ್ ಟ್ಯಾಕ್ಸಿಗೆ ಅವಕಾಶವಿಲ್ಲ. ಇದರ ಹಿಂದೆ ಆಟೋ ಚಾಲಕರ ಸಂಘಗಳ ಪ್ರಭಾವ ಇದೆ ಎನ್ನಲಾಗುತ್ತಿದೆ.

ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಪತ್ರ ಬರೆದ ಬೈಕ್ ಟ್ಯಾಕ್ಸಿ ಅಸೋಸಿಯೇಷನ್

ಬೈಕ್ ಟ್ಯಾಕ್ಸಿ ನಿಷೇಧದ ಹಿನ್ನೆಲೆ, ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ.

ಕರ್ನಾಟಕದಾದ್ಯಂತ ದೈನಂದಿನ ಆದಾಯಕ್ಕಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಅವಲಂಬಿಸಿರುವ ಒಂದು ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರ ಜೀವನೋಪಾಯವನ್ನು ರಕ್ಷಿಸಲು ಮಧ್ಯಪ್ರವೇಶಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ಸಂಪೂರ್ಣ ನಿಷೇಧದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ 1,00,000 ಕ್ಕೂ ಹೆಚ್ಚು ಗಿಗ್ ಕಾರ್ಮಿಕರು ಸಂಪಾದಿಸಿ ತಮ್ಮ ಕುಟುಂಬವನ್ನು ಪೋಷಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಈ ನಿಷೇಧವನ್ನು ತೆಗೆದುಹಾಕಿ ಅವರ ದೈನಂದಿನ ಸಂಪಾದನೆಯನ್ನು ಘನತೆಯಿಂದ ಮಾಡಲು ಸಹಾಯ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕುಸಿದ ಮಾವು ದರ; ರೈತರ ನೆರವಿಗೆ ನಿಲ್ಲುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ ಸಿಎಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...