ಇಂದೋರ್ ನಗರದಲ್ಲಿ ಕೆಲವು ದಿನಗಳ ಹಿಂದೆ ಕಂಡು ಬಂದ 50 ಕ್ಕೂ ಹೆಚ್ಚು ಕಾಗೆಗಳ ಮೃತ ದೇಹದಲ್ಲಿ ಹಕ್ಕಿ ಜ್ವರದ ಸೋಂಕು ಕಂಡು ಬಂದಿದೆ ಎಂದು ವರದಿಯಾಗಿದೆ. ಇದು ಮಧ್ಯ ಪ್ರದೇಶದಾದ್ಯಂತ ಆತಂಕವನ್ನು ಸೃಷ್ಟಿಸಿದ್ದು, ಹಕ್ಕಿ ಜ್ವರದ ಲಕ್ಷಣಗಳು ಕಂಡುಬರುವವರನ್ನು ಗುರುತಿಸಲು ಅಧಿಕಾರಿಗಳು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
“ಡಾಲಿ ಕಾಲೇಜಿನ ಆವರಣದಲ್ಲಿ ಮಂಗಳವಾರ ಸುಮಾರು ಐವತ್ತು ಕಾಗೆಗಳು ಶವವಾಗಿ ಪತ್ತೆಯಾಗಿವೆ. ಕೆಲವು ಸತ್ತ ಕಾಗೆಗಳನ್ನು ಭೋಪಾಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿ ಅವುಗಳಲ್ಲಿ H5N8 ವೈರಸ್ ಇರುವುದು ಧೃಡಪಟ್ಟಿದೆ” ಎಂದು ಇಂದೋರ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಪೂರ್ಣಿಮಾ ಗಡರಿಯಾ ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಮೇಲೆ ನಂಬಿಕೆಯಿಲ್ಲ, ಕೊರೊನಾ ಲಸಿಕೆ ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್
ಕಾಲೇಜು ಇರುವ ವಸತಿ ಪ್ರದೇಶದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ಇರುವವರನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗುತ್ತಿದೆ. ಶಂಕಿತ ರೋಗಿಗಳ ಸ್ವ್ಯಾಬ್ ಮಾದರಿಗಳನ್ನು ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ, ರಾಜಸ್ಥಾನದ ಜಲವಾರ್ ಪ್ರದೇಶದಲ್ಲಿಯೂ ಕಾಗೆಗಳ ಮೃತದೇಹ ಪತ್ತೆಯಾಗಿದೆ. ಹಕ್ಕಿ ಜ್ವರದ ಸೋಂಕು ಈ ಕಾಗೆಗಳ ಮೃತದೇಹದಲ್ಲೂ ಪತ್ತೆಯಾಗಿದೆ. ರಾಜ್ಯದ ವಿವಿಧ ಪ್ರದೇಶದಲ್ಲಿ ನಿಗೂಢ ರೀತಿಯಲ್ಲಿ ಕಾಗೆಗಳು ಸೇರಿದಂತೆ ಹಲವು ಪಕ್ಷಿಗಳು ಸಾವನ್ನಪ್ಪುತ್ತಿರುವುದರ ಹಿಂದೆ ಹಕ್ಕಿ ಜ್ವರ ಇದೆ ಎಂದು ಅಂದಾಜಿಸಿರುವ ರಾಜಸ್ಥಾನ ವನ್ಯಜೀವಿ ಇಲಾಖೆ ಹಕ್ಕಿಜ್ವರದ ಅಲರ್ಟ್ ನೀಡಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ


