Homeಕರ್ನಾಟಕಬಿಟ್‌ಕಾಯಿನ್ ಪ್ರಕರಣ; ಬೊಮ್ಮಾಯಿ ಹೆಸರು ಹೇಳಲು ಹಿಂಜರಿಕೆಯೇಕೆ?

ಬಿಟ್‌ಕಾಯಿನ್ ಪ್ರಕರಣ; ಬೊಮ್ಮಾಯಿ ಹೆಸರು ಹೇಳಲು ಹಿಂಜರಿಕೆಯೇಕೆ?

- Advertisement -
- Advertisement -

ಬಿಟ್‌ಕಾಯಿನ್ ವಿವಾದ ಶುರುವಾದಾಗಿನಿಂದ ಇಲ್ಲಿಯವರೆಗೆ ಬಂದಿರುವ ಪತ್ರಿಕಾ ವರದಿಗಳು, ಬಹಿರಂಗ ಆರೋಪಗಳು, ಅಂತರಂಗದ ಗುಪ್ತ ಗಾಸಿಪ್‌ಗಳು, ’ಆರೋಪಿ’ಯ ಸ್ವಯಂಪ್ರೇರಿತ ಹೇಳಿಕೆಗಳು ಎಲ್ಲವೂ ಒಬ್ಬ ವ್ಯಕ್ತಿಯತ್ತ (ಅಥವಾ ಇಬ್ಬರತ್ತ) ಬೆರಳು ಮಾಡಿ ತೋರಿಸುತ್ತಿವೆ. ಆದರೆ ಅವರ ಹೆಸರನ್ನು ನೇರವಾಗಿ ಹೇಳಲು ತಯಾರಿಲ್ಲ. ಅದು ಬಸವರಾಜ ಬೊಮ್ಮಾಯಿಯವರ ಹೆಸರು. ನೇರವಾಗಿ ಹೆಸರು ಹೇಳಲು ಸಾಧ್ಯವಿಲ್ಲವೇಕೆಂದರೆ ಈ ಸದ್ಯ ಅವರ್‍ಯಾರಿಗೂ ಆ ವ್ಯಕ್ತಿಯ ವಿರುದ್ಧದ ಆರೋಪವನ್ನು ಸಾಬೀತುಮಾಡಬಲ್ಲ ಪುರಾವೆ ಕೊಡುವುದು ಸಾಧ್ಯವಿಲ್ಲ. ಹೀಗಿದ್ದೂ ಯಾರಿಗೇ ಆದರೂ ಸ್ಪಷ್ಟವಾಗುವ ರೀತಿ ಅವರ ಹೆಸರನ್ನೇ ಎಲ್ಲರೂ ಹೇಳುತ್ತಿದ್ದಾರಾ?

ಸಂದೇಹವೇ ಇಲ್ಲ. ಬಿಜೆಪಿಯ ಪರವಾಗಿ ಪ್ರೊಪಗಾಂಡಾದಲ್ಲಿ ನಿರತವಾಗಿರುವ ಪತ್ರಿಕೆಗಳಲ್ಲಿ ಸಹ ಈ ಸೂಚನೆ ಸ್ಪಷ್ಟವಾಗಿ ಇದೆ. ಉದಾಹರಣೆಗೆ, ಈ ವಿಚಾರದಲ್ಲಿ ಬಂದ ಮೊಟ್ಟಮೊದಲ ವರದಿ ಸಂಯುಕ್ತ ಕರ್ನಾಟಕದ್ದು. ಅಕ್ಟೋಬರ್ 19, 2021ರ ಅದರ ಮುಖಪುಟದಲ್ಲೇ ಮಹತ್ವದ ವರದಿ ಬಂದಿತು. ಅದರ ಶೀರ್ಷಿಕೆಯೇ ’ಬಿಟ್‌ಕಾಯಿನ್ ಡ್ರಗ್ಸ್ ಹಗರಣ – ಜೋಡಿ ನಾಯಕರ ನೆರಳು’ ಎಂದು ಹೇಳುತ್ತದೆ. ಉಪಶೀರ್ಷಿಕೆಯು ’ತಲ್ಲಣ ಉಂಟು ಮಾಡಿದೆ ಕೇಂದ್ರ ತನಿಖಾ ಸಂಸ್ಥೆಗಳ ನಡೆ’ ಎನ್ನುತ್ತದೆ. ಮುಂದುವರೆದು ’ಈ ಹಂತದಲ್ಲಿ ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳು ಆರೋಪಿಗಳ ರಕ್ಷಣೆಗಾಗಿ ಭಾರಿ ಮೊತ್ತದ ಕಿಕ್‌ಬ್ಯಾಕ್ ಪಡೆದಿರುವ ಮಾಹಿತಿ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನುವುದು ಹೊಸ ವಿಷಯ. ಇದು ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ’ ಎಂದು ಬರೆಯಲಾಗಿದೆ.

ಅದರ ನಂತರ ಕೂಡಲೇ ಬೊಮ್ಮಾಯಿಯವರನ್ನೇ ಗುರಿ ಮಾಡಿ ಹೇಳಿಕೆಗಳು ಬಂದಿದ್ದರೂ, ಅವುಗಳಲ್ಲಿ ನಿರ್ದಿಷ್ಟ ಸೂಚನೆ ಇರಲಿಲ್ಲ. ’ದೊಡ್ಡ ಹೆಸರುಗಳಿವೆ’, ’ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ’ ಥರದ ಹೇಳಿಕೆಗಳು ಮಾತ್ರ ಬಂದವು. ಅದಕ್ಕೆ ಪ್ರತಿಯಾಗಿ ’ದೊಡ್ಡ ಹೆಸರುಗಳಿದ್ದರೆ ಹೇಳಲಿ, ಯಾಕೆ ಸುಮ್ಮನಿದ್ದಾರೆ?’ ಎಂಬರ್ಥದ ಮಾತುಗಳನ್ನು ಸ್ವತಃ ಬಸವರಾಜ ಬೊಮ್ಮಾಯಿಯವರೂ ಆಡಿದರು. ಅಷ್ಟೇ ಆಗಿದ್ದರೆ ತೊಂದರೆಯಿರಲಿಲ್ಲ. ಮುಖ್ಯಮಂತ್ರಿಯಾದವರು ’ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಪ್ರಕಾರ ತನಿಖೆ ಹಾಗೂ ಶಿಕ್ಷೆ ಆಗಲಿದೆ’ ಎಂದು ಹೇಳಿ ಸುಮ್ಮನಾಗಬಹುದಿತ್ತು. ಆದರೆ, ಅದರ ಬದಲಿಗೆ ಮುಖ್ಯಮಂತ್ರಿ ಬೊಮ್ಮಾಯಿ ’ಇದರಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ, ನೋಡಿಕೊಂಡು ಮಾತನಾಡಿ’ ಎಂಬರ್ಥದ ಮಾತುಗಳನ್ನು ತೇಲಿಬಿಟ್ಟರು. ಇದು ಶಾಸನಬದ್ಧ ಅಧಿಕಾರ ಹೊಂದಿರುವ ವ್ಯಕ್ತಿಯೊಬ್ಬರು ಆಡಬಾರದ ಮಾತಾಗಿತ್ತು. ತನಿಖೆ ನಡೆಯುತ್ತಿರುವಾಗ ಗಾಸಿಪ್ ರೀತಿಯ ಮಾತುಗಳನ್ನು ಗೃಹಮಂತ್ರಿ, ಮುಖ್ಯಮಂತ್ರಿಗಳು ಆಡಬಾರದು. ಒಂದು ವೇಳೆ ಕಾಂಗ್ರೆಸ್‌ನವರು ಇರುವುದೇ ನಿಜವಾಗಿದ್ದರೆ, ಸರ್ಕಾರದ ಮುಖ್ಯಸ್ಥರ ಸ್ಥಾನದಲ್ಲಿರುವುದು ಮಾಡಬೇಕಾದ್ದೇನು? ನಿಷ್ಪಕ್ಷಪಾತ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮಕ್ಕೆ ಅನುವು ಮಾಡಿಕೊಡಬೇಕು ಅಷ್ಟೇ.

ಆದರೆ, ಒಂದು ರೀತಿಯ ಬ್ಲ್ಯಾಕ್‌ಮೇಲ್ ಮಾತುಗಳನ್ನು ಮುಖ್ಯಮಂತ್ರಿ ಆಡಿದರು. ಇದಕ್ಕೇ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ’ಸಿಎಂ ಅವರು ಸೆಟ್ಲ್‌ಮೆಂಟ್‌ಗೆ ಕರೆಯುತ್ತಿದ್ದಂತಿದೆ. ಆದರೆ ಅದರ ಅಗತ್ಯವಿಲ್ಲ; ಕಾಂಗ್ರೆಸ್‌ನವರು ಭಾಗಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲಿ’ ಎಂದು ಪ್ರತ್ಯುತ್ತರ ನೀಡಿದ್ದು. ಕಾಂಗ್ರೆಸ್‌ನ ಪ್ರತಿಯೊಬ್ಬ ದೊಡ್ಡ ನಾಯಕರೂ ಖಚಿತವಾಗಿ ಕಾಂಗ್ರೆಸ್‌ನವರು ಭಾಗಿಯಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಘಂಟಾಘೋಷವಾಗಿ ಹೇಳಿದರು.

ಇದಕ್ಕೂ ಮುಂಚೆಯೇ ಪ್ರಿಯಾಂಕ್ ಖರ್ಗೆ ಅವರು ಮೊಟ್ಟ ಮೊದಲ ಬಾರಿಗೆ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ’ಈ ಹಗರಣದಲ್ಲಿ ಸರಿಯಾದ ತನಿಖೆ ನಡೆಯುವುದೇ ಆದಲ್ಲಿ, ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ’ ಎಂಬ ಮಾತು ಅಂತಿಮವಾಗಿ ಯಾರಿಗೂ ಅನುಮಾನವಿರದಂತೆ, ಬೆರಳು ತೋರಿಸುತ್ತಿರುವುದು ಸ್ವತಃ ಬೊಮ್ಮಾಯಿಯವರ ಮೇಲೆ ಎಂಬುದನ್ನು ಖಚಿತಪಡಿಸಿತು. ಅವರು ಪತ್ರಿಕಾಗೋಷ್ಠಿ ಮಾಡಿದಾಗ ನೀವು ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಹೇಳಿದ್ದೇಕೆ ಎಂದು ಪತ್ರಕರ್ತರು ಕೇಳಿದರು. ’ಆ ಘಟನೆ ನಡೆದಾಗ ಯಾರು ಗೃಹಮಂತ್ರಿ ಆಗಿದ್ದರು? ಹಾಗಿದ್ದ ಮೇಲೆ ಅವರು ಜವಾಬ್ದಾರಿ ಹೊರಬೇಕಲ್ಲವೇ?’ ಎಂಬ ಮರುಪ್ರಶ್ನೆ ಹಾಕಿದರಾದರೂ, ನಿರ್ದಿಷ್ಟವಾಗಿ ಬೊಮ್ಮಾಯಿಯವರು ಇದರಲ್ಲಿ ಭ್ರಷ್ಟಾಚಾರವೆಸಗಿದ್ದಾರೆ ಎಂತಲೋ ಅಥವಾ ಕೇಸು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂತಲೋ ಹೇಳಲಿಲ್ಲ.

ಹಾಗೆ ನೋಡಿದರೆ ಆ ಪತ್ರಿಕಾಗೋಷ್ಠಿಯಲ್ಲಿ ಮತ್ತು ಅದರ ಸುತ್ತಮುತ್ತ ಮುಂದಿಟ್ಟ ಬಹುತೇಕ ಪ್ರಶ್ನೆಗಳು ಕಾನೂನು ಪ್ರಕ್ರಿಯೆಯಲ್ಲಿ ಆದ ಲೋಪಗಳೇ (ಪ್ರೊಸೀಜರಲ್ ಲ್ಯಾಪ್ಸಸ್) ಹೊರತು ತಮ್ಮಂತೆ ತಾವೇ ಭ್ರಷ್ಟಾಚಾರವನ್ನು ಎತ್ತಿತೋರಿಸುವ ಪುರಾವೆಗಳಾಗಿರಲಿಲ್ಲ. ಹೆಚ್ಚೆಂದರೆ ಬಹಳ ಬೇಜವಾಬ್ದಾರಿ ನಡೆಗಳನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

ಆದರೆ, ಇದು ಇಷ್ಟಕ್ಕೇ ಸೀಮಿತವಾಗಿರುವ ಸಂಗತಿಯಾಗಿಲ್ಲ. ಈ ವಿಚಾರವು ಹೊರಬಂದಿದ್ದು ಬಿಜೆಪಿ ವಲಯಗಳಿಂದಲೇ ಹೊರತು ಕಾಂಗ್ರೆಸ್‌ನಿಂದ ಅಲ್ಲ. ಪತ್ರಿಕೆಗಳಲ್ಲಿ ಬಂದ ವರದಿಗಳಿಗೂ ’ಬಿಜೆಪಿ’ಯೊಳಗಿಂದಲೇ ಮಾಹಿತಿ ಕೊಡಲಾಗಿತ್ತು. ಈ ಕುರಿತ ಪ್ರಶ್ನೆಯನ್ನು 13ನೇ ನವೆಂಬರ್ ಪತ್ರಿಕಾಗೋಷ್ಠಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಕರ್ತರಿಗೇ ಪ್ರಶ್ನೆ ಕೇಳಿದರು. ನಿಮಗೆ ಸುದ್ದಿ ಕೊಡುತ್ತಿರುವವರೂ ಬಿಜೆಪಿಯವರೇ ಆಗಿದ್ದಾರಲ್ಲವೇ ಎಂಬ ಆ ಪ್ರಶ್ನೆಗೆ ಪತ್ರಕರ್ತರು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಾ ಹಿಂದಿನ ದಿನವೇ ನಮಗೆ ಸುದ್ದಿ ವಿವರ ಕೊಡುತ್ತಿರುವವರು ಬಿಜೆಪಿ ಮಂತ್ರಿಗಳೇ ಎಂದು ಹೇಳಿಯಾಗಿತ್ತು.

ತಮ್ಮ ಪತ್ರಿಕಾಗೋಷ್ಠಿಯಲ್ಲಿ ’ಪ್ರಧಾನಿ ಮೋದಿಯವರಿಗೆ ಅಮೆರಿಕದಲ್ಲಿ ಮುಜುಗರ, ಕೆಲ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಅವರಿಗೆ ವಿವರಗಳನ್ನು ನೀಡಿದ್ದಾರೆ’ ಎಂದು ಎಚ್‌ಡಿಕೆ ಹೇಳಿದ್ದರು. ಇದು ಅದಕ್ಕೆ ಮುಂಚೆಯೇ ’ದಿ ಹಿಂದೂ’ ಪತ್ರಿಕೆಯಲ್ಲಿ ವರದಿಯಾಗಿತ್ತು. ಅಮೆರಿಕದ ತನಿಖಾ ಸಂಸ್ಥೆಗಳು ಈ ಬಿಟ್‌ಕಾಯಿನ್ ಹಗರಣದ ಕುರಿತು ಮೋದಿಯವರಿಗೆ ಹೇಳಿದ್ದು, ಎಂಬುದು ಆ ವರದಿಯ ಸಾರಾಂಶ.

ರಾಜ್ಯವೊಂದರ ಆಡಳಿತದ ಮುಖ್ಯಸ್ಥರು, ತಮ್ಮದೇ ಪಕ್ಷದ ಆಡಳಿತವಿರುವ ಒಕ್ಕೂಟ ಸರ್ಕಾರದ ಮುಖ್ಯಸ್ಥರ ಬಳಿ ಈ ಬಿಟ್‌ಕಾಯಿನ್ ಹಗರಣದ ಕುರಿತು ಪ್ರಸ್ತಾಪಿಸಿದಾಗ, ಪ್ರಧಾನಿ ಏನು ಹೇಳಬಹುದು? ಏನೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರೆಂದು ಬೊಮ್ಮಾಯಿ ಸಾರ್ವಜನಿಕವಾಗಿ ಪತ್ರಕರ್ತರಿಗೆ ಹೇಳಿದರು. ಇಂತಹ ದೊಡ್ಡ ಹಗರಣದ ವಿಚಾರದಲ್ಲಿ ಪ್ರಧಾನಿ ಅಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರಾ ಅಥವಾ ನಿಮ್ಮ ಕುರ್ಚಿಯ ಬಗ್ಗೆ ಯೋಚಿಸಬೇಡಿ ಎಂದು ಹೇಳಿದ್ದಾರಾ ಎಂಬುದನ್ನು ಬೊಮ್ಮಾಯಿಯವರು ಹೇಳದೇ ಇದ್ದರೂ, ಒಟ್ಟಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನಂತೂ ಖಾತರಿಪಡಿಸಿದರು.

ಸಾರಾಂಶದಲ್ಲಿ ಈ ಭಿನ್ನ ಹೇಳಿಕೆಗಳು, ಪತ್ರಿಕಾ ವರದಿಗಳು, ಇದುವರೆಗೆ ಲಭ್ಯವಾಗಿರುವ ಮಾಹಿತಿಗಳನ್ನು ನೋಡಿದರೆ ಕೆಲವು ಅಂಶಗಳು ಸ್ಪಷ್ಟವಾಗುತ್ತಿವೆ. ಈ ಕೇಸು ಕೇವಲ ಯಾರೋ ಒಬ್ಬ ಹ್ಯಾಕರ್ ಬಿಟ್‌ಕಾಯಿನ್ ಕದ್ದದ್ದಲ್ಲ; ಕೇವಲ ಡ್ರಗ್ಸ್‌ದಂತೂ ಮೊದಲೇ ಅಲ್ಲ. ಬದಲಿಗೆ ಬಿಟ್‌ಕಾಯಿನ್ ವ್ಯವಹಾರ, ಹ್ಯಾಕಿಂಗ್ ಇತ್ಯಾದಿಗಳಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಕೊಂಡಾಗ ಅದನ್ನು ಮುಚ್ಚಿ ಹಾಕಲು ವ್ಯವಸ್ಥೆಯೊಳಗಿನ ಹಲವರು ಕೈ ಜೋಡಿಸಿದ್ದಾರೆ. ಸಹಜವಾಗಿ ಇದರಲ್ಲಿ ಪೊಲೀಸರಿದ್ದಾರೆ; ಅಷ್ಟೇ ಅಲ್ಲದೇ ಪೊಲೀಸ್ ಇಲಾಖೆಯ ಮಂತ್ರಿಯೂ ಇದ್ದಾರೆ. ಆಗ ಗೃಹ ಮಂತ್ರಿಯಾಗಿದ್ದದ್ದು ಬಸವರಾಜ ಬೊಮ್ಮಾಯಿ. ಇದು ಕೇವಲ ಪ್ರೊಸೀಜರಲ್ ಲ್ಯಾಪ್ಸ್ ಅಲ್ಲ; ಉದ್ದೇಶಪೂರ್ವಕ ಶಾಮೀಲುದಾರಿಕೆ. ಇದನ್ನು ನೇರವಾಗಿ ಯಾರೂ ಏಕೆ ಹೇಳಲಾಗದು ಎಂದರೆ, ಸದರಿ ವ್ಯವಹಾರದಲ್ಲಿ ವರ್ಗಾವಣೆ ಆಗಿರುವುದು ಕ್ಯಾಷೂ ಅಲ್ಲ; ಯಡಿಯೂರಪ್ಪನವರ ವಿಚಾರದಲ್ಲಿ ಆದಂತೆ ಚೆಕ್‌ನಲ್ಲೂ ಅಲ್ಲ; ಕ್ರಿಪ್ಟೋಕರೆನ್ಸಿಯಲ್ಲಿ. ಅದನ್ನು ಪತ್ತೆ ಹಚ್ಚುವುದು ಕಷ್ಟ.

ಹಾಗಾದರೆ ನರೇಂದ್ರ ಮೋದಿ ಅಮೆರಿಕಕ್ಕೆ ಹೋದಾಗ ಅಲ್ಲಿನ ಎಫ್‌ಬಿಐ ನಿರ್ದಿಷ್ಟವಾಗಿ ಯಾರ ಖಾತೆಗಾದರೂ ಬಿಟ್‌ಕಾಯಿನ್ ವರ್ಗಾವಣೆ ಆಗಿದ್ದುದರ ಕುರಿತು ತಿಳಿಸಿದ್ದಾರೆಯೇ? ಹೌದೆಂಬುದು ’ಬಿಜೆಪಿ ಮೂಲ’ಗಳೇ ಹರಿಬಿಡುತ್ತಿರುವ ’ಸತ್ಯ’.

ಹಾಗೆಯೇ ಎಲ್ಲೆಡೆ ತೇಲಿಬರುತ್ತಿರುವ ಇನ್ನೊಂದು ’ಸತ್ಯ’ವಿದೆ. ಇದರಲ್ಲಿ ಇನ್ನೊಬ್ಬ ಪ್ರಭಾವೀ ನಾಯಕರು ಶಾಮೀಲಾಗಿದ್ದು ಹೇಗೆ? ಮೊಟ್ಟಮೊದಲು ಡ್ರಗ್ಸ್ ಕೇಸಿನಲ್ಲಿ ಶ್ರೀಕಿ ಸಿಕ್ಕಿಕೊಂಡಾಗ, ತಮ್ಮ ಮಗನೂ ಅದರಲ್ಲಿ ಪಾಲುದಾರನಾಗಿದ್ದುದರಿಂದ ಗಾಬರಿಯಾಗಿ ಗೃಹಮಂತ್ರಿಯವರನ್ನು ಭೇಟಿ ಮಾಡಿ ಉಳಿಸಿ ಎಂದು ಅವರು ಕೇಳಿಕೊಂಡರೆಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಡ್ರಗ್ಸ್‌ನಿಂದ ಆರಂಭವಾಗಿ ಅದು ಅಂತಾರಾಷ್ಟ್ರೀಯ ಹ್ಯಾಕಿಂಗ್ ಮತ್ತು ಅದನ್ನು ಮುಚ್ಚಿ ಹಾಕುವ ವಿಚಾರದಲ್ಲಿ ಹಣ ಪಡೆದು ಡೀಲ್ ಆಗುವವರೆಗೆ ಬೆಳೆದು ನಿಂತಿದೆ. ಅದು ನರೇಂದ್ರ ಮೋದಿ ಅಮೆರಿಕಾಕ್ಕೆ ಹೋದಾಗ ತಿಳಿದು ಬಂದಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಕು, ಮೂವರು ಮುಖ್ಯಮಂತ್ರಿಗಳು ಎಂಬಂತೆ ಆಗಬಾರದು ಎಂದು ಹೈಕಮ್ಯಾಂಡ್ ಸುಮ್ಮನೇ ಕುಳಿತಿದೆಯಂತೆ. ಒಂದು ವೇಳೆ ಸಿಎಂ ಸಿಕ್ಕಿಬೀಳುವ ಹಾಗಾದರೆ, ’ನರೇಂದ್ರ ಮೋದಿಯವರು ಎಂದಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ’ ಎಂಬ ಪೋಸ್ ಕೊಟ್ಟು ಸಿಎಂ ಬದಲಿಸಿಬಿಡಲೂ ಮುಂದಾಗಬಹುದು ಎಂಬುದು ಕೇವಲ ಗಾಸಿಪ್ ಅಲ್ಲ ಎನಿಸುತ್ತದೆ. ಅಂತಹ ಪುರಾವೆ ಯಾರಿಗಾದರೂ ಸಿಗಲು ಸಾಧ್ಯವಿದೆಯೇ? ಬಹುಶಃ ಇಲ್ಲ. ಅಲ್ಲಿಯವರೆಗೂ ಬೊಮ್ಮಾಯಿಯವರು ವದಂತಿಗಳೊಳಗೆ ಮಾತ್ರ ಆರೋಪಿಯಾಗಿರುತ್ತಾರೆ. ಉಳಿದಂತೆ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತೇ ಇದೆ.


ಇದನ್ನೂ ಓದಿ: ಶ್ರೀಕೃಷ್ಣ ತಂದ ಬಿಟ್‌ಕಾಯಿನ್ ಬಿರುಗಾಳಿ! ಬ್ಲಾಕ್ ಚೈನ್ ಮತ್ತು ಬಿಟ್‌ಕಾಯಿನ್ ಬಗ್ಗೆ ಒಂದಿಷ್ಟು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...