ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸೋಲು ಕಂಡಿದ್ದವು. ಹರಿಯಾಣದ ಐದು ಮುನ್ಸಿಪಾಲ್ಟಿ ಚುನಾವಣೆಯಲ್ಲಿ ಮೂರರಲ್ಲಿ ಅನುಭವಿಸಿದ ಸೋಲಿಗೆ ಬಿಜೆಪಿ ವಿವರಣೆ ನೀಡಿದೆ. ಡಿಸೆಂಬರ್ 25, 26 ಮತ್ತು 27 ರಜಾದಿನಗಳಾಗಿದ್ದವು. ಆಗ ನಮ್ಮ ವೋಟ್‌ಬ್ಯಾಂಕ್‌ಗೆ ಸೇರಿದ ಮತದಾರರು ಲಾಂಗ್‌ಟ್ರಿಪ್ ಮೇಲೆ ಹೋಗಿದ್ದರಿಂದ ಮತದಾನದಲ್ಲಿ ಭಾಗವಹಿಸಿಲ್ಲ. ಹೀಗಾಗಿ ಹಿನ್ನಡೆಯಾಗಿದೆ ಎಂದು ಬಿಜೆಪಿ ವಿವರಣೆ ನೀಡಿದೆ!
ಹರಿಯಾಣ ಬಿಜೆಪಿ ವಕ್ತಾರ ಸಂಜಯ್ ಶರ್ಮಾ ವಿವರಣೆ ನೀಡಿದ್ದು “‘ಡಿಸೆಂಬರ್ 25, 26 ಮತ್ತು 27 ರಜಾದಿನಗಳಾಗಿದ್ದವು. ನಿಮಗೆ ಗೊತ್ತಲ್ಲ, ಅದು ವರ್ಷಾಂತ್ಯದ ಸಮಯ ಮತ್ತು ಈ ವೇಳೆ ಸಾಲು ರಜೆ ಬರುವುದರಿಂದ ಜನರು ದೂರದ ಸ್ಥಳಗಳಿಗೆ ಟ್ರಿಪ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ದುರದೃಷ್ಟವಶಾತ್, ಹೀಗೆ ರಜೆ ಕಳೆಯಲು ಹೋದವರಲ್ಲಿ ಅಧಿಕ ಜನರು ಬಿಜೆಪಿಯ ವೋಟ್‌ಬ್ಯಾಂಕ್‌ಗೆ ಸೇರಿದವರು. ಹೀಗಾಗಿ ಮತದಾನದಲ್ಲಿ ಅವರು ಭಾಗವಹಿಸದೇ ಇದ್ದುದೇ ನಮ್ಮ ಸೋಲಿಗೆ ಕಾರಣ” ಎಂದಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಈಗಷ್ಟೇ ಒಂದು ವರ್ಷ ಮುಗಿಸಿದ ಸಂದರ್ಭದಲ್ಲಿ ಮತ್ತು ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುವ ಸಮಯದಲ್ಲೇ ಹರಿಯಾಣ ಬಿಜೆಪಿ ಹಿನ್ನಡೆ ಅನುಭವಿಸಿ ಮುಖಭಂಗಕ್ಕೆ ಒಳಗಾಗಿದೆ.
ಬಿಜೆಪಿಯ ಮಿತ್ರ ಪಕ್ಷ ಜನತಾ ಜನ್‌ನಾಯಕ್ ಪಾರ್ಟಿ (ಜೆಜೆಪಿ) ಸೋನಾಪತ್ ಮತ್ತು ಅಂಬಾಲಾದ ಮೇಯರ್ ಚುನಾವಣೆಯಲ್ಲಿ ಭಾರಿ ಸೋಲು ಕಂಡಿದೆ. ಮೂರರಲ್ಲಿ ಎರಡು ಸೋಲುಗಳು ಉಪ ಮುಖ್ಯಮಂತ್ರಿ ಮತ್ತು ಜೆಜೆಪಿ ನಾಯಕ ದುಷ್ಯಂತ್ ಸಿಂಗ್ ಪ್ರಾಬಲ್ಯವಿರುವ ಪ್ರದೇಶಗಳಾಗಿವೆ ಮತ್ತು ದುಷ್ಯಂತ್‌ಗೆ ಈ ಹಿಂದೆ ರೈತರು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸಿದ್ದರು.
ಗೃಹ ಸಚಿವ ಅನಿಲ್ ವಿಜ್ ಜಿಲ್ಲೆಯಲ್ಲಿ ಬರುವ, ಬಿಜೆಪಿ ಶಾಸಕ ಮತ್ತು ಬಿಜೆಪಿ ಸಂಸದನ ವ್ಯಾಪ್ತಿಗೆ ಒಳಪಡುವ ಅಂಬಾಲಾದಲ್ಲಿ ಬಿಜೆಪಿ ಸೋತಿದ್ದಕ್ಕೆ ರೈತರು ಸಿಹಿ ಹಂಚಿ, ಹಾಡಿ, ಕುಣಿದು ಸಂಭ್ರಮಿಸಿದ್ದರು.
ಅಂಬಾಲಾದ ಬಿಜೆಪಿ ಶಾಸಕ ಅನಿಲ್ ಅಸೀಮ್, ‘ಇಲ್ಲಿ ಎಲ್ಲರೂ ಬಿಜೆಪಿ ವಿರುದ್ಧ ಒಂದಾಗಿದ್ದರು. ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ತಡೆಯಲು ಎಲ್ಲರೂ ಕೈ ಜೋಡಿಸುತ್ತಾರೆ. ಹರಿಯಾಣದಲ್ಲಿ ಇದೇ ಸಂಭವಿಸುತ್ತಿದೆ. ಅವರ ಅಜೆಂಡಾ ಅರ್ಥರಹಿತವಾದದ್ದು ಮತ್ತು ಅವರಿಗೆ ಯಾವುದೇ ಗುರಿಯೂ ಇಲ್ಲ. ಬಿಜೆಪಿ ತಡೆಯುವುದೇ ಅವರ ಉದ್ದೇಶ. ಮೊದಲು ಬಿಜೆಪಿ ತಡೆಯೋಣ, ನಂತರ ನಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳೋಣ ಎಂಬ ನಿಲುವನ್ನು ಹೊಂದಿದ್ದಾರೆ’ ಎಂದು ಹೇಳಿದ್ದಾರೆ.
ಆದರೆ, ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಪಕ್ಷಕ್ಕೆ ಹಿನ್ನಡೆ ಮಾಡಿದೆ ಎಂದು ಅಸೀಂ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಸೆಪ್ಟಂಬರ್ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!


