ಇಂಧನ ಬೆಲೆ ಏರಿಕೆ ಕುರಿತು ಪ್ರಶ್ನಿಸಿದ ಪತ್ರಕರ್ತನಿಗೆ, “ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಹೋಗಿ” ಎಂದು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ರಾಮರತನ್ ಪಾಯಲ್ ಉತ್ತರಿಸಿ ವಿವಾದ ಸೃಷ್ಟಿಸಿದ್ದಾರೆ. ಕೊರೊನಾ ವೈರಸ್‌ನ ಮೂರನೇ ಅಲೆ ಬರಲಿರುವ ಸಮಯದಲ್ಲಿ ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಪತ್ರಕರ್ತರನ್ನು ಅವರು ತೀಕ್ಷ್ಣವಾಗಿ ಟೀಕಿಸಿದ್ದಾರೆ.
“ತಾಲಿಬಾನ್ ಗೆ ಹೋಗಿ. ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಲೀಟರ್‌ಗೆ 50 ರೂ. ಮಾರಾಟ ಮಾಡಲಾಗುತ್ತಿದೆ. ಅಲ್ಲಿಗೆ ಹೋಗಿ ನಿಮ್ಮ ಪೆಟ್ರೋಲ್ ಅನ್ನು ಪುನಃ ತುಂಬಿಸಿ, ಅಲ್ಲಿ ಇಂಧನವನ್ನು ತುಂಬಿಸಲು ಯಾರೂ ಇಲ್ಲ. ಕನಿಷ್ಠ ಭಾರತದಲ್ಲಿ ನಮಗೆ ಸುರಕ್ಷತೆ ಇದೆ. ಕೊರೊನಾದ ಎರಡು ಅಲೆಯನ್ನು ಎದುರಿಸಿರುವ ದೇಶದಲ್ಲಿ ಮೂರನೆ ಅಲೆ ಬರಲಿದೆ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಬಜೆಟ್ 2021: ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಕಡಿತ
ಮಾಸ್ಕ್ ಧರಿಸದ ಹಲವಾರು ಬೆಂಗಲಿಗರು ಅವರ ಸುತ್ತ ನೆರೆದಿದ್ದರೂ, ಜನರು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ಪತ್ರಕರ್ತರಿಗೆ ಉಪನ್ಯಾಸ ನೀಡಿದ್ದಾರೆ.
“ನೀವು ಪ್ರತಿಷ್ಠಿತ ಪತ್ರಕರ್ತರಾಗಿದ್ದೀರಿ. ದೇಶದ ಪರಿಸ್ಥಿತಿಯನ್ನು ನೀವು ತಿಳಿದುಕೊಂಡಿದ್ದೀರಾ? ಪ್ರಧಾನಿ ಮೋದಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಇನ್ನೂ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ಅವರು ನೀಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಯುವ ಘಟಕ ಯುವ ಮೋರ್ಚಾ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪಾಯಲ್ ಬುಧವಾರ ಈ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳನ್ನು ಈಗಾಗಲೆ ದಾಟಿದ್ದು, ಡೀಸೆಲ್ ದರಗಳು ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ 90 ರೂ.ಗೆ ತಲುಪಿದೆ.
ಇದನ್ನೂ ಓದಿ: ಹೆಚ್ಚುತ್ತಿರುವ ಆಕ್ರೋಶದ ನಡುವೆ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!


