ಕಲುಷಿತ ನೀರು ಕುಡಿದು ಜನರು ಸಾವನ್ನಪ್ಪಿದ್ದಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ ಎನ್‌ಡಿಟಿವಿಯ ವರದಿಗಾರನನ್ನು ನಿಂದಿಸಿದ ಮತ್ತು ಬೇಜವಬ್ದಾರಿ ಹೇಳಿಕೆ ನೀಡಿದ ಮಧ್ಯಪ್ರದೇಶ ನಗರಾಭಿವೃದ್ದಿ ಮತ್ತು ವಸತಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವಿಜಯವರ್ಗೀಯ ಅವರ ಸ್ವಕ್ಷೇತ್ರ ಇಂದೋರ್-1ರ ವ್ಯಾಪ್ತಿಯಲ್ಲಿ ಬರುವ ಭಾಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಕುಡಿದು ಏಳೆಂಟು ಜನರು ಸಾವನ್ನಪ್ಪಿದ ಮತ್ತು ಸಾವಿರಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ ಬಗ್ಗೆ ಬುಧವಾರ (ಡಿ.31) ವರದಿಯಾಗಿದೆ.
ಈ ಕುರಿತು ವಿಜಯವರ್ಗೀಯ ಅವರನ್ನು ಎನ್‌ಡಿಟಿವಿ ವರದಿಗಾರ ಅನುರಾಗ್ ದ್ವಾರಿ ಪ್ರಶ್ನಿಸಿದ್ದರು. ಘಟನೆಗೆ ಕಿರಿಯ ಮತ್ತು ತಳಮಟ್ಟದ ಅಧಿಕಾರಿಗಳನ್ನು ಮಾತ್ರ ಏಕೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ? ನಗರಾಭಿವೃದ್ದಿ ಸಚಿವರಾದ ನೀವು ಮತ್ತು ಜಲಸಂಪನ್ಮೂಲ ಸಚಿವೆ ತುಳಸಿ ಸೇರಿದಂತೆ ಸಚಿವರು, ಹಿರಿಯ ನಾಯಕರು ಮತ್ತು ಅಧಿಕಾರಿಗಳನ್ನು ಏಕೆ ಹೊಣೆ ಮಾಡಲಾಗುತ್ತಿಲ್ಲ ಎಂದು ಕೇಳಿದ್ದರು.
ತಮ್ಮ ಸಂಬಂಧಿಕರನ್ನು ಕಳೆದುಕೊಂಡ ಹಾಗೂ ಸಂಬಂಧಿಕರು ಅನಾರೋಗ್ಯಕ್ಕೆ ತುತ್ತಾಗಿರುವ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ವಿಳಂಬವಾಗಿದೆ ಎಂದಿದ್ದರು.
ಇಷ್ಟಕ್ಕೆ ಕೋಪಗೊಂಡ ವಿಜಯವರ್ಗೀಯ, ವರದಿಗಾರನ ಪ್ರಶ್ನೆ ‘ಅಸಂಬಂಧ; (nonsense)ಎಂದು ಹೇಳಿದ್ದಾರೆ. ಇದು ‘ಅನುಪಯುಕ್ತ’ ಎಂದಿದ್ದಾರೆ. “ತು ಕ್ಯಾ ಘಂಟಾ ಹೋಕೆ ಆಯಾ ಹೈ?” ಎಂದು ಅವಹೇಳನಕಾರಿ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಚಿವರ ಪ್ರತಿಕ್ರಿಯೆ ವರದಿಗಾರ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದು, “ಕೈಲಾಶ್ ಜಿ, ಬಾತ್ ಟೀಕ್ ಸೆ ಕಿಜಿಯೇ… ಯೇ ಕ್ಯಾ ಶಬ್ದ್ ಹೋತಾ ಹೈ?” (ಕೈಲಾಶ್ ಅವರೇ ಸರಿಯಾಗಿ ಮಾತನಾಡಿ, ಇದು ಯಾವ ರೀತಿಯ ಭಾಷೆ ಬಳಸುತ್ತಿದ್ದಾರಾ?) ಎಂದು ಕೇಳಿದ್ದಾರೆ.
ಸಚಿವರು ಮತ್ತು ವರದಿಗಾರನ ನಡುವಿನ ಈ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ, ಜನರ ಸಾವಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಯನ್ನು ‘ಅಸಂಬದ್ಧ’ ಎಂದು ಹೇಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ತನ್ನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಚಿವ ವಿಜಯವರ್ಗೀಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಕ್ಷಮೆಯಾಚಿಸಿದ್ದಾರೆ.
“ಕಳೆದ ಎರಡು ದಿನಗಳಿಂದ ನಾನು ಮತ್ತು ನನ್ನ ತಂಡ ಕಲುಷಿತ ನೀರಿನಿಂದ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದ್ದೇವೆ. ನನ್ನ ಜನರು ಕಲುಷಿತ ನೀರಿನಿಂದ ಬಳಲುತ್ತಿದ್ದಾರೆ ಮತ್ತು ಕೆಲವರು ನಮ್ಮನ್ನು ಅಗಲಿದ್ದಾರೆ. ಈ ಆಳವಾದ ದುಃಖದ ಸ್ಥಿತಿಯಲ್ಲಿ, ಮಾಧ್ಯಮದ ಪ್ರಶ್ನೆಗೆ ಉತ್ತರಿಸುವಲ್ಲಿ ನಾನು ತಪ್ಪು ಮಾಡಿದ್ದೇನೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ವಿಜಯವರ್ಗೀಯ ಬರೆದುಕೊಂಡಿದ್ದಾರೆ.
ವಿಜಯವರ್ಗೀಯ ಕ್ಷಮೆ ಯಾಚಿಸಿದರೂ, ಅವರ ಹೇಳಿಕೆಗೆ ಈಗಲೂ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜಕೀಯ ಬಣ್ಣವೂ ಪಡೆದುಕೊಂಡಿದೆ. ಮಧ್ಯಪ್ರದೇಶದ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಯಕ ಜಿತು ಪಟ್ವಾರಿ ಇದು “ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದ್ದಾರೆ, ವಿಜಯವರ್ಗೀಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.


