ಪ್ರೋಟೊಕಾಲ್ ಉಲ್ಲಂಘಿಸಿ ರಸ್ತೆ ಕಾಮಗಾರಿ ಶಂಕುಸ್ಥಾಪನೆ ಮಾಡಿದ ಶಾಸಕರ ಕ್ರಮವನ್ನು ಪ್ರಶ್ನಿಸಿದ ನಗರಸಭಾ ಸದಸ್ಯರೊಬ್ಬರ ಮೇಲೆ ಬಿಜೆಪಿ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.
ತಿಪಟೂರು ಶಾಸಕ ಬಿ.ಸಿ.ನಾಗೇಶ್ ಜುಲೈ 3 ರಂದು ಬೆಳಗ್ಗೆ 14 ನೇ ವಾರ್ಡ್ ವಿದ್ಯಾನಗರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತಿದ್ದರು. ಆಗ ಸ್ಥಳಕ್ಕೆ ಬಂದ ಅದೇ ವಾರ್ಡಿನ ನಗರಸಭಾ ಸದಸ್ಯ ಯೋಗೀಶ್ ಅವರು ಶಾಸಕರ ಕ್ರಮವನ್ನು ಪ್ರಶ್ನಿಸತೊಡಗಿದರು. ಮಾತಿಗೆ ಮಾತು ಬೆಳೆದು ಎರಡೂ ಕಡೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ಎಲ್ಲಿಯೇ ಸರ್ಕಾರಿ ಕಾರ್ಯಕ್ರಮ, ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿ ಸದಸ್ಯರು, ನಗರಸಭಾ ಸದಸ್ಯರನ್ನು ಪ್ರೋಟೋಕಾಲ್ ಪ್ರಕಾರ ಸಮಾರಂಭಕ್ಕೆ ಆಹ್ವಾನಿಸುವುದು ಸತ್ ಸಂಪ್ರದಾಯ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿರುವ ಪದ್ದತಿ.
ಆದರೆ ಶಾಸಕ ಬಿ.ಸಿ.ನಾಗೇಶ್ ಅವರು ಪ್ರೋಟೋಕಾಲ್ ಉಲ್ಲಂಘಿಸಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಇದನ್ನು ನಗರಸಭಾ ಸದಸ್ಯ ಯೋಗೀಶ್ ಪ್ರಶ್ನಿಸಿದರು. ಏನಣ್ಣಾ ನಾನು ಈ ವಾರ್ಡಿನ ಸದಸ್ಯ. ನನ್ನನ್ನು ಬಿಟ್ಟು ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನಡೆಸುತ್ತಿದ್ದೀರ. ಇದು ಸರಿಯಲ್ಲ ಎಂದು ಪ್ರಶ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ತಿಪಟೂರು ಶಾಸಕ ಬಿ.ಸಿ ನಾಗೇಶ್ ಬೆಂಬಲಿಗರಿಂದ ನಗರಸಭಾ ಸದಸ್ಯ ಯೋಗೇಶ್ ಮೇಲೆ ಹಲ್ಲೆ
ತಿಪಟೂರು ಬಿಜೆಪಿ ಶಾಸಕ ಬಿ.ಸಿ ನಾಗೇಶ್ ಬೆಂಬಲಿಗರಿಂದ ಕಾಂಗ್ರೆಸ್ ನಗರಸಭಾ ಸದಸ್ಯ ಯೋಗೇಶ್ ಮೇಲೆ ಹಲ್ಲೆ. ತಿಪಟೂರಿನ ವಿದ್ಯಾನಗರದ ಕಾಂಕ್ರಿಟ್ ರಸ್ತೆ ಕಾಮಗಾರಿ ರಸ್ತೆ ಉದ್ಘಾಟನೆ ವೇಳೆ ಪ್ರೊಟೋಕಾಲ್ ಪ್ರಕಾರ ನಗರಸಭಾ ಸದಸ್ಯರನ್ನು ಏಕೆ ಆಹ್ವಾನಿಸಿಲ್ಲ ಎಂಬ ವಿಚಾರಕ್ಕೆ ವಾಗ್ದಾದ. ಮಾತಿಗೆ ಮಾತು ಬೆಳೆದು ಶಾಸಕರ ಬೆಂಬಲಿಗರಿಂದ ನಗರಸಭಾ ಸದಸ್ಯರ ಮೇಲೆ ಹಲ್ಲೆ
Posted by Naanu Gauri on Thursday, July 2, 2020
ವಿದ್ಯಾನಗರದ ರಸ್ತೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಗೆ ನಗರಸಭೆಯ ಅಧಿಕಾರಿಗಳನ್ನು ಶಾಸಕರು ಕರೆದಿಲ್ಲ. ಸ್ಥಳೀಯ ಸದಸ್ಯರನ್ನು ಆಹ್ವಾನಿಸಿಲ್ಲ. ಕೇವಲ ಬಿಜೆಪಿ ಸದಸ್ಯರೊಂದಿಗೆ ಆಗಮಿಸಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿರುವುದು ಕಾಂಗ್ರೆಸ್ ನಗರಸಭಾ ಸದಸ್ಯ ಯೋಗೀಶ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಯೋಗೀಶ್ ಶಾಸಕರನ್ನು ಪ್ರಶ್ನಿಸುತ್ತಿರುವ 1.35 ನಿಮಿಷದ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಶಾಸಕರು ಮತ್ತು ಯೋಗೀಶ್ ನಡುವೆ ವಾಗ್ವಾದ ನಡೆಯುತ್ತದೆ. ಶಾಶಕರು ತಾನು ವಿಶೇಷ ಯೋಜನೆಯಡಿ ಅನುದಾನ ತಂದಿದ್ದೇನೆ. ನಿಮ್ಮನ್ನು ಆಹ್ವಾನಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆಗ ಯೋಗೀಶ್ ಕೂಡ ಇದು ಸರ್ಕಾರದ ಹಣ. ಪ್ರೋಟೋಕಾಲ್ ಉಲ್ಲಂಘಿಸಿದ್ದೀರಿ. ಎಂದು ಶಾಸಕರನ್ನು ಪ್ರಶ್ನಿಸುತ್ತಾರೆ. ಆಗ ಶಾಶಕರ ಇಬ್ಬರು ಬೆಂಬಲಿಗರು ನಗರಸಭಾ ಸದಸ್ಯ ಯೋಗೀಶ್ ಮೇಲೆ ಜೋರು ಮಾತುಗಳಲ್ಲಿ ಎರುಗುತ್ತಾರೆ. ಆನಂತರ ಗಲಾಟೆ ನಡೆಯುವುದು ಕೇಳುತ್ತದೆ.
ಶಾಸಕರೊಂದಿಗೆ ಬೆಂಬಲಿಗರಾದ ಗಂಗರಾಜು, ಪ್ರಶಾಂತ, ರಾಮಮೋಹನ್ ಮಾತ್ರ ಇರುವುದು ಯೋಗೀಶ ಅವರ ಬೇಸರಕ್ಕೆ ಕಾರಣವಾಗಿದೆ. ಈ ಸಂಬಂಧ ನಾನುಗೌರಿ.ಕಾಂ ಜೊತೆ ಮಾತನಾಡಿದ ನಗರಸಭಾ ಸದಸ್ಯ ಯೋಗೀಶ್ ಶಾಸಕರ ಕ್ರಮವನ್ನು ಪ್ರಶ್ನಿಸಿದರು. ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾಮಗಾರಿ ಸರ್ಕಾರಿ ಕಾರ್ಯಕ್ರಮ. ಅಧಿಕಾರಿಗಳನ್ನು ಆಹ್ವಾನಿಸಿಲ್ಲ. ಸ್ಥಳೀಯ ವಾರ್ಡ್ ನ ಸದಸ್ಯನಾದ ನನ್ನನ್ನು ಆಹ್ವಾನಿಸಿಲ್ಲ. ಇದನ್ನು ಕೇಳಲು ಹೋದರೆ ಶಾಸಕರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಮೊಬೈಲ್ ಅನ್ನು ಒಡೆದು ಹಾಕಿದ್ದಾರೆ ಎಂದು ದೂರಿದರು.
ಶಾಸಕ ಬಿ.ಸಿ.ನಾಗೇಶ್ ಸರಳ, ಸಜ್ಜನ ಎಂದು ಹೇಳುತ್ತಾರೆ. ಉತ್ತಮ ಕೆಲಸ ಮಾಡಿದ್ದಾರೆ ಎಂಬ ಮಾತು ಇದೆ. ಆದರೆ ಶಾಸಕರಿಗಿಂತ ಚೆನ್ನಾಗಿ ಕೆಲಸ ಮಾಡುವವರನ್ನು ಕಂಡರೆ ಸಹಿಸುವುದಿಲ್ಲ. ಉತ್ತಮ ಕೆಲಸ ಮಾಡುವವರನ್ನು ಉದ್ದೇಶಪೂರ್ವಕವಾಗಿಯೇ ಶಾಸಕರು ದೂರ ಇಡುತ್ತಾ ಹೋಗುತ್ತಾರೆ. ಮೇಲ್ನೋಟಕ್ಕೆ ಒಳ್ಳೆಯವರಂತೆ ಕಂಡು ಬಂದರೂ ಕೊಬ್ಬರಿ ಬೆಲೆ ನಿಗದಿ ನಡೆಯುವುದೆಲ್ಲ ಅವರ ಮೂಗಿನ ಅಡಿಯೇ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಓದಿ: ಪಿಎಂ ಕೇರ್ಸ್‌ಗೆ 60,000 ಕೋಟಿ ಹರಿದುಬಂದಿದೆ, ಆದರೂ ಮೋದಿ ಲೆಕ್ಕ ಕೊಡುತ್ತಿಲ್ಲ: ಸಿದ್ದರಾಮಯ್ಯ


