ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದು ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಸಿಂಗ್, ತಾನು ಯಾವುದೇ ಅಪರಾಧ ಮಾಡಿಲ್ಲ ಎಂದಿದ್ದಾರೆ.
“ನೀವು ತಪ್ಪಿತಸ್ಥರು ಎಂದು ಒಪ್ಪಿಕೊಳ್ಳುತ್ತೀರಾ?’ ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಾಜ್‌ಪೂತ್ ಸಿಂಗ್ ಅವರು ಪ್ರಶ್ನಿಸಿದಾಗ, “ಆ ಪ್ರಶ್ನೆಯೇ ಉದ್ಭವಿಸದು. ನಾನು ಯಾವುದೇ ತಪ್ಪೆಸಗಿಲ್ಲ” ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.
BJP MP Brij Bhushan Singh Pleads Not Guilty To Sexual Harassment Charges Before Delhi Courthttps://t.co/rAlNER5WDj
— Live Law (@LiveLawIndia) May 21, 2024
ಸಹ ಆರೋಪಿ ವಿನೋದ್ ತೋಮರ್ ಕೂಡ ತಾನು ನಿರಪರಾಧಿ ಎಂದಿದ್ದು, ಪರಿಣಾಮ ಪ್ರಕರಣದಲ್ಲಿ ಆರೋಪವನ್ನು ಹೊತ್ತಿರುವವರು ದೋಷಿಗಳೋ ಅಲ್ಲವೋ? ಎನ್ನುವುದನ್ನು ನಿರ್ಧರಿಸಲು ವಿಚಾರಣೆ ಆರಂಭವಾಗಲಿದೆ.
ಐವರು ಮಹಿಳಾ ಕುಸ್ತಿಪಟುಗಳು ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಘನತೆಗೆ ಕುತ್ತು ತಂದ ಆರೋಪ ಮಾಡಿದ್ದರು. ಈ ಹಿನ್ನೆಲೆ, ನ್ಯಾಯಾಲಯ ಮೇ 10 ರಂದು ಅವರ ವಿರುದ್ಧ ಆರೋಪ ನಿಗದಿಪಡಿಸಿತ್ತು.
ಐಪಿಸಿ ಸೆಕ್ಷನ್‌ಗಳಾದ 354 (ಮಹಿಳೆಯ ಘನತೆಗೆ ಧಕ್ಕೆ), 354ಎ (ಲೈಂಗಿಕ ಅವಾಚ್ಯ ಶಬ್ದ ಬಳಕೆ) ಮತ್ತು ಇಬ್ಬರು ಕುಸ್ತಿಪಟುಗಳಿಗೆ ಸಂಬಂಧಿಸಿದಂತೆ ಐಪಿಸಿಯ ಸೆಕ್ಷನ್ 506(1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಸಿಂಗ್ ವಿರುದ್ಧ ಆರೋಪ ನಿಗದಿಪಡಿಸಲು ಸಾಕಷು ಸಾಕ್ಷ್ಯಗಳಿವೆ ಎಂದು ನ್ಯಾ. ಪ್ರಿಯಾಂಕಾ ತಿಳಿಸಿದ್ದರು.
ಪ್ರಕರಣದ ಮೊದಲನೇ ಸಂತ್ರಸ್ತೆಗೆ ಕ್ರಿಮಿನಲ್ ಬೆದರಿಕೆಯೊಡ್ಡಿದ್ದಕ್ಕಾಗಿ ಕುಸ್ತಿ ಒಕ್ಕೂಟದ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಆರೋಪ ನಿಗದಿಪಡಿಸಲಾಗಿತ್ತು.
ಇದನ್ನೂ ಓದಿ : ಮಮತಾ ಬ್ಯಾನರ್ಜಿಗೆ ಅವಹೇಳನ: ಅಭಿಜಿತ್ ಗಂಗೋಪಾಧ್ಯಾಯ ಚುನಾವಣಾ ಪ್ರಚಾರಕ್ಕೆ ನಿರ್ಬಂಧ


