ಕೋವಿಡ್ ಲಾಕ್‌ಡೌನ್ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಕ್ಕಾಗಿ ಜಾರ್ಖಂಡ್ ಜಿಲ್ಲಾಡಳಿತ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ ಬಲವಂತವಾಗಿ 14 ದಿನ ಕ್ವಾರಂಟೈನ್‌ಗೊಳಪಡಿಸಿದ ಘಟನೆ ಇಂದು ಸಂಭವಿಸಿದೆ.
ಉತ್ತರ ಪ್ರದೇಶದಿಂದ ನೇರ ಜಾರ್ಖಂಡ್‌ನ ಗಿರಿಡಿಹ್ ತೆರಳಿದ ಸಾಕ್ಷಿ ಮಹಾರಾಜ್ ಅಲ್ಲಿಂದ ಧನಬಾದ್ ಮೂಲಕ ಉನ್ನಾವ್ ತೆರಳಿ ಅಲ್ಲಿಂದ ರೈಲಿನಲ್ಲಿ ದೆಹಲಿಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಪಿರ್ಟಾಂಡ್ ಪೊಲೀಸ್ ಸ್ಟೇಷನ್ ಬಳಿ ತಡೆಯಲಾಗಿದೆ.
ಸಂಸದರು ಜಿಲ್ಲೆಗೆ ಬರುವ ವಿಷಯ ತಿಳಿಸಿರಲಿಲ್ಲ. ಕೋವಿಡ್ ಸಾಂಕ್ರಾಮಿಕ ಕಾರಣಕ್ಕಾಗಿ ರಾಜ್ಯ ಗಡಿಯನ್ನು ಬಂದ್ ಮಾಡಲಾಗಿದ್ದರು ನಿಬಂಧನೆಗಳನ್ನು ಉಲ್ಲಂಘಿಸಿ ರಾಜ್ಯ ಪ್ರವೇಶಿಸಿದ್ದಾಕ್ಕಿ ಅವರನ್ನು ನಗರದ ಶಾಂತಿ ಭವನದಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಿದ್ದೇವೆ ಎಂದು ಜಿಲ್ಲಾಧಿಕಾರಿ ರಾಹುಲ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ತಮ್ಮನ್ನು ಕ್ವಾರಂಟೈನ್‌ಗೆ ಒಳಪಡಿಸುವುದಕ್ಕೆ ಖಂಡತುಂಡವಾಗಿ ವಿರೋಧ ವ್ಯಕ್ತಪಡಿಸಿದ ಸಾಕ್ಷಿ ಮಹಾರಾಜ್ “ನಾನು ಭಾರತದ ಸಂಸದ. ಜಾರ್ಖಂಡ್ ಕೂಡ ಭಾರತದ ಭಾಗ ಎಂಬುದನ್ನು ಮರೆಯಬೇಡಿ. ಗಿರಿಡಿಹ್‌ನಲ್ಲಿ ಅನಾರೋಗ್ಯಕ್ಕೊಳಗಾಗಿರುವ ನನ್ನ ತಾಯಿಯನ್ನು ನೋಡಲು ಬರಬಾರದೇ” ಎಂದು ಕಿಡಿಕಾರಿದ್ದಾರೆ.
ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳ ಎದುರೆ ಉತ್ತರ ಪ್ರದೇಶದ ಚೀಫ್ ಸೆಕ್ರಟರಿಯವರಿಗೆ ಫೋನ್ ಮಾಡಿ ಅವರಿಂದ ಜಾರ್ಖಂಡ್ ಅಧಿಕಾರಿಗಳಿಗೆ ಮಾತನಾಡಿಸಿದ್ದಾರೆ. ಆದರೂ ಏನೂ ಪ್ರಯೋಜನವಾಗಿಲ್ಲ. ಜಾರ್ಖಂಡ್ ನಿಯಮಗಳ ಪ್ರಕಾರ ಅವರಿಗೆ ಕ್ವಾರಂಟೈನ್ ಕಡ್ಡಾಯ ಎಂದು ಅಧಿಕಾರಿಗಳು ಖಡಕ್ ಆಗಿ ಹೇಳಿದ್ದಾರೆ.
ನನಗೆ ಭಾನುವಾರ ಸಂಸತ್ತಿನ ಸ್ಥಾಯಿ ಸಮಿತಿಯ ಸಭೆಯಿದೆ. ಹಾಗಾಗಿ ನಾನು ಹೋಗಲೇಬೇಕು. ಆದರೆ ನನ್ನನ್ನು ಬಲವಂತವಾಗಿ ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿನ ನಿಯಮಗಳು ನನಗೆ ಮೊದಲೇ ಗೊತ್ತಿದ್ದರೆ ಬರುತ್ತಲೇ ಇರಲಿಲ್ಲ ಎಂದು ಮಾಧ್ಯಮಗಳ ಎದುರು ಗೋಳು ತೋಡಿಕೊಂಡಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಬುಧವಾರ ರಾಂಚಿಯ ರಿಮ್ಸ್‌ನಲ್ಲಿರುವ ತನ್ನ ತಂದೆಯನ್ನು ನೋಡಿ ಹೋಗಿದ್ದಾರೆ. ಅವರಿಗಿಲ್ಲದ ಕ್ವಾರಂಟೈನ್ ನನಗೆ ಏಕೆ? ಇಲ್ಲಿ ರಾಜಕೀಯ ನಡೆಯುತ್ತಿದೆ. ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಿವಾಜಿ ಮಾತ್ರ ರಾಷ್ಟ್ರನಾಯಕರೆ, ಸಂಗೊಳ್ಳಿ ರಾಯಣ್ಣ ರಾಷ್ಟ್ರನಾಯಕರಲ್ಲವೇ?: ಕನ್ನಡಿಗರ ಆಕ್ರೋಶ


