ಬುಧವಾರವಷ್ಟೆ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಾಗಿದೆ. ದೇಶದಾದ್ಯಂತ ಈ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಆದರೆ ಬಿಜೆಪಿ ನಾಯಕರು ತಮ್ಮ ಉಡಾಫೆ ನಡೆಯನ್ನು ಇನ್ನು ಬಿಟ್ಟಕೊಟ್ಟಿಲ್ಲ. ವಾಡಿಕೆಯಂತೆ ಬೆಲೆ ಏರಿಕೆಗೂ ಕಾಂಗ್ರೆಸ್‌ನತ್ತ ಕೈತೋರಿಸುತ್ತಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಬಿಜೆಪಿ ಸಂಸದ ಸಂಗಣ್ಣ ಕರಡಿ, “ನಿಮ್ಮಪ್ಪ ಸಾಲ ಮಾಡಿದರೆ ಮಗನಾಗಿ ನೀನು ಸಾಲ ತೀರಿಸುವುದಿಲ್ಲವೆ, ಹಾಗೆಯೆ ನಾವು ಕೂಡಾ ಸಾಲ ತೀರಿಸಲೇ ಬೇಕಲ್ಲ” ಎಂದು ಉಡಾಫೆಯಿಂದ ಮಾತನಾಡಿದ್ದಾರೆ.
“ಕಾಂಗ್ರೆಸ್ ಸಾಲ ಮಾಡಿದ್ದು ಈಗ ನಾವು ಅನಿವಾರ್ಯವಾಗಿ ಸಾಲ ಬಗೆಹರಿಸಬೇಕಿದೆ’’ ಎಂದು ಅವರು ಪತ್ರಕರ್ತರಿಗೆ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಸಂಪನ್ಮೂಲವಿಲ್ಲ. ದೇಶವನ್ನು ಮುನ್ನಡೆಸುವ ದೃಷ್ಟಿಯಿಂದ ಬೆಲೆ ಏರಿಕೆ ಅನಿವಾರ್ಯ. ಆದರೂ ಒಕ್ಕೂಟ ಸರಕಾರ ಬಡವರ ಪರವಾದ ಯಾವುದೇ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿಲ್ಲಿಸಿಲ್ಲ ಎಂದು ಸಂಗಣ್ಣ ಕರಡಿ ತಿಳಿಸಿದ್ದಾರೆ.
ಇದನ್ನೂ ಓದಿ: LPG ಗ್ಯಾಸ್ ಬೆಲೆ ಮತ್ತೆ 25ರೂ ಹೆಚ್ಚಳ: 15 ದಿನಗಳಲ್ಲಿ ಎರಡು ಬಾರಿ ಬೆಲೆ ಹೆಚ್ಚಳ
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾಗಿರುವ ಜನಸಾಮಾನ್ಯರಿಗೆ ಮೋದಿ ಸರ್ಕಾರ ಮತ್ತೊಮ್ಮೆ ಹೊಡೆತ ನೀಡಿದೆ. ಆಗಸ್ಟ್ 1 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಆಗಸ್ಟ್ 17ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 25ರೂ ಏರಿಕೆ ಮಾಡಲಾಗಿತ್ತು. ಅದಾದ ನಂತರ ಈಗ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಮತ್ತೆ 25 ರೂ ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ 14.2 ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗೆ 862 ರೂ ನೀಡಲಾಗುತ್ತಿತ್ತು. ಇನ್ನು ಮುಂದೆ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 887ರೂ ಬೆಲೆ ತೆರಬೇಕಾಗಿದೆ. ಹದಿನೈದು ದಿನಗಳ ಅಂತದಲ್ಲಿ 50 ರೂ ಏರಿಕೆಯಾಗಿರುವುದು ಜನಸಾಮಾನ್ಯರ ಹೊರೆ ಹೆಚ್ಚಿಸಿದೆ. 2021ರ ಜನವರಿಯಿಂದ ಸೆಪ್ಟೆಂಬರ್ 1ರವರೆಗೆ ಅಡುಗೆ ಸಿಲಿಂಡರ್ ಬೆಲೆ ಒಟ್ಟು 190 ರೂ ಹೆಚ್ಚಳವಾಗಿದೆ.
ಸಿಲಿಂಡರ್, ಅಡುಗೆ ಎಣ್ಣೆ, ದಿನಸಿ, ಪೆಟ್ರೋಲ್, ವಿದ್ಯುತ್… ಹೀಗೆ ದಿನನಿತ್ಯದ ಬದುಕಿನ ಅಗತ್ಯಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣರಾಗಿದ್ದಾರೆ. ಒಂದು ಕಡೆ ಕೋವಿಡ್‌ನಿಂದಾಗಿ ಸರಿಯಾಗಿ ಸಂಬಳ, ದಿನಗೂಲಿ ಇಲ್ಲದೇ ಮನೆಯಲ್ಲಿ ಇದ್ದದ್ದರಲ್ಲೇ ಒಂದೊತ್ತಿನ ಹೊಟ್ಟೆ ತುಂಬಿಸಿಕೊಂಡಿದ್ದ ಜನರ ಬದುಕಲ್ಲಂತೂ ಈ ಬೆಲೆ ಏರಿಕೆ ಸಾವು ನೋವಿನ ಪ್ರಶ್ನೆಯಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಆಸ್ತಿ ಮಾರಾಟ, ಬೆಲೆ ಏರಿಕೆ: ಕರ್ನಾಟಕ ಕಾಂಗ್ರೆಸ್‌ನಿಂದ ’ಬಿಜೆಪಿಯ ಲೂಟಿಯ ವಿರುದ್ದ ಭಾರತ’ ಅಭಿಯಾನ


