ಲಖಿಂಪುರ್ ಖೇರಿಯಲ್ಲಿ ಭಾನುವಾರ ರೈತರ ಮೇಲೆ ಕಾರು ಹರಿಸಿ 4 ರೈತರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಮತ್ತು ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದ ವರುಣ್ ಗಾಂಧಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಅಕ್ಟೋಬರ್ 3ರಂದು ನಡೆದ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು ‘ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರನ್ನು ನಿರ್ದಯವಾಗಿ ಹೊಸಕಿಹಾಕುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆಗೆ ನಾಗರಿಕರು ಮತ್ತು ದೇಶವು ಆಕ್ರೋಶ ವ್ಯಕ್ತಪಡಿಸಿದೆ. ಈ ಘಟನೆಯ ಒಂದು ದಿನ ಮೊದಲು ಅಹಿಂಸೆಯ ಆರಾಧಕ ಮಹಾತ್ಮಗಾಂಧಿ ಅವರ ಜಯಂತಿ ಆಚರಿಸಿದ್ದೇವೆ. ಮರುದಿನವೇ ಲಖಿಂಪುರ್ ಖೇರಿಯಲ್ಲಿ ಅನ್ನದಾತರ ಹತ್ಯೆ ನಡೆದಿರುವುದು ಅಕ್ಷಮ್ಯ” ಎಂದು ವರುಣ್ ಗಾಂಧಿ ಬರೆದಿದ್ದಾರೆ.
ಹೋರಾಟನಿರತ ರೈತರು ನಮ್ಮ ಸೋದರರು, ನಮ್ಮ ನಾಗರಿಕರು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದ್ದಾರೆ ಮತ್ತು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಅಂತಹವರ ಜೊತೆ ನಾವು ತಾಳ್ಮೆಯಿಂದ ವರ್ತಿಸಬೇಕು. ನಾವು ಯಾವುದೇ ಸಂದರ್ಭದಲ್ಲಿ ನಮ್ಮ ರೈತರೊಂದಿಗೆ ಗಾಂಧಿವಾದ ಮತ್ತು ಪ್ರಜಾತಾಂತ್ರಿಕ ರೀತಿಯಲ್ಲೇ ಕಾನೂನಿನ ಚೌಕಟ್ಟಿನೊಳಗೆ ಸಂವೇದನೆಶೀಲತೆಯೊಂದಿಗೆ ವ್ಯವಹರಿಸಬೇಕು. ಈ ಘಟನೆಯಲ್ಲಿ ಹುತಾತ್ಮರಾಗಿರುವ ರೈತ ಸೋದರರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ ಮತ್ತು ಅವರ ಕುಟುಂಬದವರ ದುಃಖವನ್ನು ಹಂಚಿಕೊಳ್ಳೂತ್ತೇನೆ” ಎಂದಿದ್ದಾರೆ.
”ನಿಮ್ಮಲ್ಲಿ ನನ್ನ ಮನವಿ ಏನೆಂದರೆ, ಘಟನೆಗೆ ಸಂಬಂಧಿಸಿದ ಎಲ್ಲರನ್ನೂ ಐಪಿಸಿ 302ರ ಪ್ರಕಾರ ಪ್ರಕರಣ ದಾಖಲಿಸಬೇಕು, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸಿಬಿಐ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಸಂತ್ರಸ್ತ ರೈತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು. ಜೊತೆಗೆ ಭವಿಷ್ಯದಲ್ಲಿ ರೈತರ ವಿಷಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸುತ್ತೀರೆಂದು ಭಾವಿಸುತ್ತೇನೆ” ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಯುಪಿ ರೈತರ ಕೊಲೆ ಖಂಡಿಸಿ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು: ಚಿತ್ರಗಳಲ್ಲಿ ನೋಡಿ


